ರಣಬಿಸಿಲಿನಲ್ಲೂ ಹಾವೇರಿ ಜಿಲ್ಲೆಯಲ್ಲಿ ಉತ್ಸಾಹದಿಂದ ಮತದಾನ

| Published : May 08 2024, 01:05 AM IST

ರಣಬಿಸಿಲಿನಲ್ಲೂ ಹಾವೇರಿ ಜಿಲ್ಲೆಯಲ್ಲಿ ಉತ್ಸಾಹದಿಂದ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಲೋಕಸಭಾ ಚುನಾವಣೆಗೆ ಮಂಗಳವಾರ ನಡೆದ ಮತದಾನ ಪ್ರಕ್ರಿಯೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆಯಿತು. ಆರಂಭದಲ್ಲಿ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರಗಳು ಕೈಕೊಟ್ಟು ಮತದಾನ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿ ಆರಂಭಗೊಂಡಿರುವುದು ಸೇರಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಜಿಲ್ಲಾದ್ಯಂತ ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು.

ಹಾವೇರಿ: ಹಾವೇರಿ ಲೋಕಸಭಾ ಚುನಾವಣೆಗೆ ಮಂಗಳವಾರ ನಡೆದ ಮತದಾನ ಪ್ರಕ್ರಿಯೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆಯಿತು. ಆರಂಭದಲ್ಲಿ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರಗಳು ಕೈಕೊಟ್ಟು ಮತದಾನ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿ ಆರಂಭಗೊಂಡಿರುವುದು ಸೇರಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಜಿಲ್ಲಾದ್ಯಂತ ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು.

ರಣ ಬಿಸಿಲಿನಲ್ಲೂ ಮತದಾರರು ಉತ್ಸಾಹದಿಂದ ಮತದಾನ ಮಾಡಿರುವುದು ಕಂಡುಬಂದಿತು.

೨೦೧೯ರ ಚುನಾವಣೆಯಲ್ಲಿ ಶೇ. ೭೪.೦೧ರಷ್ಟು ಮತದಾನವಾಗಿತ್ತು. ಬೆಳಗ್ಗೆ ೭ರಿಂದ ೯ರವರೆಗೆ ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. ೮.೬೨ರಷ್ಟಾಗಿತ್ತು. ೧೧ರ ವೇಳೆಗೆ ಶೇ.೨೪.೨೪ರಷ್ಟಾಗಿತ್ತು. ಮಧ್ಯಾಹ್ನ ೧ ಗಂಟೆ ಹೊತ್ತಿಗೆ ಶೇ.೪೩.೨೬ರಷ್ಟಾಗಿತ್ತು. ಮಧ್ಯಾಹ್ನ ೩ಕ್ಕೆ ೫೮.೪೫ರಷ್ಟು ಮತದಾನವಾಗಿತ್ತು. ಸಂಜೆ ೫ಕ್ಕೆ ೭೧.೦೯ರಷ್ಟು ಮತದಾನವಾಗಿದೆ. ಬಹುತೇಕ ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮತದಾರರು ಮತಗಟ್ಟೆಗೆ ಆಗಮಿಸಿದ್ದರು. ಮಧ್ಯಾಹ್ನದ ಬಿಸಿಲಿನ ಭಯದಿಂದ ಜಿಲ್ಲೆಯ ಬಹುತೇಕ ಮತಗಟ್ಟೆಗಳಲ್ಲಿ ಬೆಳಗ್ಗೆ ೧೦ಗಂಟೆ ಒಳಗೆ ಸರದಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಬಿಸಿಲ ತಾಪದಿಂದ ಪಾರಾಗಲು ಬೆಳಗ್ಗೆ 11 ಗಂಟೆಯೊಳಗೆ ಮಹಿಳೆಯರು, ವೃದ್ಧರು ಆಗಮಿಸಿ ತುರುಸಿನಿಂದ ಮತದಾನ ಮಾಡಿದರು. ಮಧ್ಯಾಹ್ನದ ಬಿಸಿಲು ಹೆಚ್ಚಾಗುತ್ತಿದ್ದಂತೆ ಮತದಾರರು ಮತಗಟ್ಟೆಗೆ ಬರುವ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆಯಾಗಿತ್ತು. ಆದರೂ ವಿವಿಧ ಪಕ್ಷದ ಕಾರ್ಯಕರ್ತರು, ಮುಖಂಡರು ಮತದಾರರ ಮತದಾರರಿಗೆ ಮಿನರಲ್ ವಾಟರ್, ತಂಪುಪಾನೀಯ, ಎಳನೀರು, ಉಪಹಾರದ ವ್ಯವಸ್ಥೆ ಮಾಡಿ ಮನವೊಲಿಸಿದರು.

ಮಕ್ಕಳಿಗೆ ಆಟದ ವ್ಯವಸ್ಥೆಮಹಿಳೆಯರೇ ನಿರ್ವಹಿಸುವ ಸಖಿ ಮತಗಟ್ಟೆಗಳು, ಮಾದರಿ ಮತಗಟ್ಟೆಗಳು ಹಾಗೂ ಅಂಗವಿಕಲರು ಹೆಚ್ಚಿರುವ ಬೂತ್‌ಗಳಲ್ಲಿ ಅಂಗವಿಕಲರ ಮತಗಟ್ಟೆ ಸಹ ಸ್ಥಾಪಿಸಿ ಈ ಎಲ್ಲ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಈ ಮತಗಟ್ಟಿಗಳಿಗೆ ವೃದ್ಧರು, ಮಹಿಳೆಯರು, ಅಂಗವಿಕಲರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲಿ ಮತದಾರರಿಗೆ ಕುಡಿಯುವ ನೀರು, ಕುಳಿತುಕೊಳ್ಳಲು ಆಸನ, ಪ್ರಥಮಚಿಕಿತ್ಸೆ, ಸಹಾಯಕ್ಕಾಗಿ ಸ್ಕೌಡ್ಸ್ ಗೈಡ್ಸ್ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸೌಲಭ್ಯ ವ್ಯವಸ್ಥೆ ಮಾಡಲಾಗಿತ್ತು. ಸಖಿ ಮತಗಟ್ಟೆಗಳಿಗೆ ತಾಯಂದಿರ ಜೊತೆ ಬರುವ ಮಕ್ಕಳಿಗೆ ಮಕ್ಕಳ ಮನೆ ವ್ಯವಸ್ಥೆ ಮಾಡಲಾಗಿತ್ತು. ಇಂಥ ಕಡೆ ಮಕ್ಕಳು ಆಟವಾಡುತ್ತ ಕಾಲ ಕಳೆದದ್ದು ಗಮನ ಸೆಳೆಯಿತು.

ಯುವಕರಲ್ಲಿತ್ತು ಹುಮ್ಮಸ್ಸು: ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಈ ಬಾರಿ ಯುವಕರು, ಹೊಸ ಮತದಾರರು ಬೆಳಗ್ಗಿನಿಂದಲೇ ಮತಚಲಾಯಿಸಲು ಮತಗಟ್ಟೆಯತ್ತ ಹೆಜ್ಜೆ ಇಟ್ಟಿರುವ ದೃಶ್ಯಕಂಡು ಬಂದಿತು. ಯುವಕರು ಮತಚಲಾಯಿಸಿ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾ ಸಂಭ್ರಮಿಸಿದರು. ಯುವತಿಯರೂ ಗುಂಪಾಗಿ ಆಗಮಿಸಿ ಸಂಭ್ರಮದಲ್ಲೇ ಮತ ಚಲಾಯಿಸಿದರು.

ಚುನಾವಣಾ ಆಯೋಗದ ಸಿಬ್ಬಂದಿಯೇ ಮತದಾರರಿಗೆ ಮತಚೀಟಿ ನೀಡಿದ್ದರಿಂದ ಮತಗಟ್ಟೆಯ ಬಳಿ ಪೆಂಡಾಲ್ ಹಾಕಿಕೊಂಡು ಕುಳಿತಿರುತ್ತಿದ್ದ ಆಯಾ ಪಕ್ಷಗಳ ಕಾರ್ಯಕರ್ತರು ಜಿಲ್ಲೆಯ ಬಹುತೇಕ ಮತಗಟ್ಟೆಯ ಬಳಿ ಕಂಡುಬರಲಿಲ್ಲ. ಬೆಂಗಳೂರು, ಮಂಗಳೂರು ಸೇರಿ ರಾಜ್ಯ ಸೇರಿ ಹೊರ ರಾಜ್ಯಗಳಿಗೆ ದುಡಿಮೆಗೆ ಹೋಗಿದ್ದ ಮತದಾರರು ಸ್ವಕ್ಷೇತ್ರಗಳಿಗೆ ಆಗಮಿಸಿ ಮತಚಲಾಯಿಸಿದರು.

ಕೈಕೊಟ್ಟ ಮತಯಂತ್ರಗಳು:ಶಿಗ್ಗಾಂವಿ ವಿಧಾನಸಭಾಕ್ಷೇತ್ರದ ತಡಸ, ಹಾವೇರಿ ನಗರದ ಎಸ್‌ಎಂಎಸ್ ಶಾಲೆ, ಬ್ಯಾಡಗಿ ತಾಲೂಕಿನ ಹಳೇ ಗುಂಗರಕೊಪ್ಪ, ಕಾಗಿನೆಲೆಯಲ್ಲಿ ಇವಿಎಂ ಯಂತ್ರ ಕೈಕೊಟ್ಟ ಕಾರಣ ಕೆಲ ಹೊತ್ತು ಮತದಾನ ಪ್ರಕ್ರಿಯೆ ವಿಳಂಬವಾಗಿದೆ. ಬಳಿಕ ಬದಲಿ ವ್ಯವಸ್ಥೆ ಮಾಡಿ ಸುಗಮ ಮತದಾನಕ್ಕೆ ಸಿಬ್ಬಂದಿ ಕ್ರಮ ಕೈಗೊಂಡರು.

ಸಿಡ್ನಿಯಿಂದ ಬಂದು ಹಕ್ಕು ಚಲಾವಣೆ: ಆಸ್ಟ್ರೇಲಿಯಾದ ಸಿಡ್ನಿಯಿಂದ ಆಗಮಿಸಿದ ಮಹಿಳೆಯೊಬ್ಬರು ಹಾವೇರಿ ನಗರದ ಲಯನ್ಸ್‌ ಶಾಲೆಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿ ಮತದಾನದ ಮಹತ್ವವನ್ನು ಸಾರಿದರು.

ಇಲ್ಲಿಯ ಬಸವೇಶ್ವರನಗರದ ನಿವಾಸಿಯಾಗಿರುವ ಭಾವನಾ ಶಿವಾನಂದ ಅವರು ಸಿಡ್ನಿಯಿಂದ ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ಕಾರಿನ ಮೂಲಕ ಬಂದು ಮತಚಲಾಯಿಸಿದರು.