ಬಿ.ಕೆ.ಶಿವರಾಂಗೆ ಡಾ। ರಾಜ್‌ ಸಿರಿಗನ್ನಡ ಪ್ರಶಸ್ತಿ

| Published : Apr 19 2024, 01:31 AM IST / Updated: Apr 19 2024, 09:57 AM IST

ಸಾರಾಂಶ

ಪೊಲೀಸರಿಗೆ ಸಾಂಸ್ಕೃತಿಕ ಪ್ರಜ್ಞೆ ಇದ್ದರೆ, ಮಾನವೀಯತೆಯೂ ತನ್ನಿಂತಾನೇ ಬರುತ್ತದೆ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

 ಬೆಂಗಳೂರು : ಪೊಲೀಸರಿಗೆ ಸಾಂಸ್ಕೃತಿಕ ಪ್ರಜ್ಞೆ ಇದ್ದರೆ, ಮಾನವೀಯತೆಯೂ ತನ್ನಿಂತಾನೇ ಬರುತ್ತದೆ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಗುರುವಾರ ಕನ್ನಡ ಜನಶಕ್ತಿ ಕೇಂದ್ರ ಕನ್ನಡ ಭವನದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಿವೃತ್ತ ಸಹಾಯಕ ಪೊಲೀಸ್‌ ಆಯುಕ್ತ ಬಿ.ಕೆ.ಶಿವರಾಂ ಅವರಿಗೆ ‘ವರನಟ ಡಾ.ರಾಜಕುಮಾರ್‌ ಸಿರಿಗನ್ನಡ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

ಪೊಲೀಸ್‌ ಅಧಿಕಾರಿಯಾಗಿ ನಿವೃತ್ತರಾದ ನಂತರ ಬಿ.ಕೆ.ಶಿವರಾಂ ಅವರು, ನಿರಂತರವಾಗಿ ಮಲ್ಲೇಶ್ವರದಲ್ಲಿ ಹೆಚ್ಚು ಸದ್ದು ಮಾಡದೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸುತ್ತಿದ್ದಾರೆ. ಇಂತಹ ಸಾಂಸ್ಕೃತಿಕ ಪ್ರಜ್ಞೆ ರಾಜಕಾರಣಿಗಳಿಗೂ ಇರಬೇಕೆಂದು ನಾವು ಬಯಸುತ್ತೇವೆ. ಪೊಲೀಸ್‌ ಅಧಿಕಾರಿಗಳಲ್ಲಿರುವ ಸಾಂಸ್ಕೃತಿಕ ಕಾಳಜಿ ಅವರನ್ನು ಹೆಚ್ಚು ಮನುಷ್ಯರನ್ನಾಗಿ ಮಾಡುತ್ತದೆ. ಬೇರೆಯವರು ಸಹ ಮನುಷ್ಯರು ಎಂದು ತಿಳಿಸುವಂತ ಪ್ರಜ್ಞೆಯನ್ನು ನೀಡುತ್ತದೆ ಎಂದು ಹೇಳಿದರು.

ವರನಟ ಡಾ.ರಾಜ್‌ಕುಮಾರ್‌ ಅವರು ಯಾರನ್ನೂ ಏಕವಚನದಲ್ಲಿ ಕರೆಯುತ್ತಿರಲಿಲ್ಲ. ಅದೇ ರೀತಿ ತಮ್ಮ ಅಧೀನದಲ್ಲಿ ಕೆಲಸ ಮಾಡುತ್ತಿದ್ದವರನ್ನೂ ಬಿ.ಕೆ.ಶಿವರಾಂ ಏಕವಚನದಲ್ಲಿ ಮಾತನಾಡುತ್ತಿರಲ್ಲಿಲ್ಲವಂತೆ. ಇದೊಂದೇ ಮಾನದಂಡ ಸಾಕು ಶಿವರಾಮ ಅವರಿಗೆ ರಾಜಕುಮಾರ್‌ ಪ್ರಶಸ್ತಿ ಕೊಡಲು ಎಂದರು. ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ, ಕೇವಲ ಸಾಹಿತ್ಯ, ಸಿನಿಮಾ ಮಾತ್ರವಲ್ಲ ಕನ್ನಡಪರ ಕೆಲಸ ಮಾಡುತ್ತಿರುವವರನ್ನು ಗುರುತಿಸಬೇಕೆನ್ನುವ ಒಂದು ವಿಶಾಲ ವ್ಯಾಪ್ತಿಯನ್ನು ಕನ್ನಡ ಜನಶಕ್ತಿ ಕೇಂದ್ರ ಇಟ್ಟುಕೊಂಡಿರುವುದು ಸೂಕ್ತವಾಗಿದೆ ಎಂದು ಹೇಳಿದರು.

ಕುವೆಂಪು ಅವರು ‘ನನ್ನ ವಿಶ್ವಮಾನವ ಸಂದೇಶವನ್ನು ಜನಗಳಿಗೆ ನಿಜವಾಗಿ ತಲುಪಿಸುವಂತ ಶಕ್ತಿ ಇರುವುದು ಡಾ.ರಾಜ್‌ಕುಮಾರ್‌ ಅವರಿಗೆ ಎಂದಿದ್ದರು’. ವೈಚಾರಿಕ ಮನೋಧರ್ಮ ಇದ್ದವರು, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದವರೇ ಈ ಮಾತನ್ನು ಹೇಳಿರುವುದು ಡಾ.ರಾಜ್‌ಕುಮಾರ್‌ ಅವರಿಗಿರುವ ಶಕ್ತಿ ಏನೆಂಬುದನ್ನು ಪರಿಚಯಿಸುತ್ತದೆ ಎಂದರು.

ಸಂಸ್ಕೃತಿ ಚಿಂತಕ ಮೋಹನದೇವ ಆಳ್ವ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಆರಕ್ಷಕ ಮಹಾ ನಿರೀಕ್ಷಕ ಗೋಪಾಲ್‌ ಬಿ.ಹೊಸೂರು, ನವಯುಗ ಹೋಟೆಲ್‌ ಮಾಲೀಕ ಕೆ.ಮೋಹನ್‌ರಾವ್‌, ಕನ್ನಡ ಜನಶಕ್ತಿ ಕೇಂದ್ರ ಅಧ್ಯಕ್ಷ ಸಿ.ಕೆ.ರಾಮೇಗೌಡ ಉಪಸ್ಥಿತರಿದ್ದರು.