ಅಸ್ಪೃಶ್ಯತೆ ನಿವಾರಣೆ ವಿರುದ್ಧ ಹೋರಾಡಿದ ಧೀಮಂತ ಬಸವಣ್ಣ

| Published : May 10 2024, 11:47 PM IST

ಅಸ್ಪೃಶ್ಯತೆ ನಿವಾರಣೆ ವಿರುದ್ಧ ಹೋರಾಡಿದ ಧೀಮಂತ ಬಸವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಹೊಂಗಿರಣ ಸಭಾಂಗಣದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವುದರ ಮೂಲಕ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.

ಬಳ್ಳಾರಿ: ಕಾಯಕ ತತ್ವ ಪ್ರತಿಪಾದಿಸಿದ ಸಾಮಾಜಿಕ ನ್ಯಾಯದ ಹರಿಕಾರ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಜಿಲ್ಲಾಡಳಿತ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ನಗರದಲ್ಲಿ ಶುಕ್ರವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬಸವೇಶ್ವರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯನ್ನು ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ನಗರದ ಎಚ್.ಆರ್. ಗವಿಯಪ್ಪ ವೃತ್ತದ (ಮೋತಿ ವೃತ್ತ) ಬಳಿ ಇರುವ ಬಸವೇಶ್ವರರ ಪ್ರತಿಮೆಗೆ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಮಾಲಾರ್ಪಣೆ ಮಾಡಿದರು. ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಎಸ್ಪಿ ರಂಜಿತಕುಮಾರ್ ಬಂಡಾರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ನಗರದ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿರುವ ಹೊಂಗಿರಣ ಸಭಾಂಗಣದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವುದರ ಮೂಲಕ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.

ಸಹಾಯಕ ಆಯುಕ್ತ ಹೇಮಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.

ಬಳ್ಳಾರಿ ವಿವಿಯಲ್ಲಿ ಬಸವ ಜಯಂತಿ:

ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಬಸವಜಯಂತಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿವಿಯ ಪ್ರಭಾರ ಕುಲಪತಿ ಪ್ರೊ.ತಿಪ್ಪೇರುದ್ರಪ್ಪ, ಬಸವೇಶ್ವರರು ರಾಜನೀತಿಜ್ಞರಾಗಿ ಮತ್ತು ಸಮಾಜ ಸುಧಾರಕರಾಗಿ ತಮ್ಮ ಕಾವ್ಯ ಮತ್ತು ಬರವಣಿಗೆಯ ಮೂಲಕ ಸಾರ್ವಜನಿಕರಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಅವಿರತವಾಗಿ ಶ್ರಮಿಸಿದರು.

ವಚನ ಸಾಹಿತ್ಯದ ಮೂಲಕ ಲಿಂಗ ಸಮಾನತೆ, ಅಸ್ಪೃಶ್ಯತೆ ನಿವಾರಣೆ ವಿರುದ್ಧ ಹೋರಾಡಿದರು. ವೈಚಾರಿಕತೆ ಮೂಲಕ ಜನರಲ್ಲಿ ಅರಿವು ಮೂಡಿಸಿದರು. ಶರಣರು ಕೇವಲ ಮಾತಿನ ಮಲ್ಲರಾಗಿರದೇ ನಡೆ ಧೀರರಾಗಿದ್ದರು. ಮೊದಲು ನಡೆದು ನಂತರ ನುಡಿಯುವುದು ಅವರ ಜೀವನಾದರ್ಶನವಾಗಿತ್ತು ಎಂದು ಹೇಳಿದರು.

ವಿವಿಯ ಕುಲಸಚಿವ (ಮೌಲ್ಯಮಾಪನ) ಪ್ರೊ. ರಮೇಶ್ ಓಲೇಕಾರ್ , ಪ್ರೊ. ಅರುಣ್ ಕುಮಾರ್ ಲಗಶೆಟ್ಟಿ ಮಾತನಾಡಿದರು. ವಿವಿಯ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಸಂಯೋಜಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

ಸಕ್ಕರೆ ಕರಡೆಪ್ಪ ವಿದ್ಯಾರ್ಥಿನಿಲಯ:

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಜರುಗಿದ ಜಯಂತಿ ಕಾರ್ಯಕ್ರಮದಲ್ಲಿ ಡಿಎಚ್‌ಒ ವೈ.ರಮೇಶಬಾಬು, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ವೀರೇಂದ್ರಕುಮಾರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್.ದಾಸಪ್ಪನವರ್, ವಿಜಯಕುಮಾರ, ಕಚೇರಿ ಅಧೀಕ್ಷಕ ಬಸವರಾಜ್, ರಾಧಿಕಾ, ಅರುಣ್‌ಕುಮಾರ್, ಗಿರೀಶ್, ಬಸಪ್ಪ ಮತ್ತಿತರ ಸಿಬ್ಬಂದಿ ಭಾಗವಹಿಸಿದ್ದರು.

ನಗರದ ಸಕ್ಕರೆ ಕರಡೆಪ್ಪ ಉಚಿತ ವಿದ್ಯಾರ್ಥಿ ನಿಲಯದಲ್ಲಿ ವೀರಶೈವ ತರುಣ ಸಂಘದಿಂದ ಬಸವ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೀರಶೈವ ಸಮಾಜದ ಮುಖಂಡ ಅಲ್ಲಂ ಪ್ರಶಾಂತ್ ಅವರು ಬಸವಣ್ಣನವರ ಸಂದೇಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಹೇಳಿದರು. ತರುಣ ಸಂಘದ ಭದ್ರಿನಾಥ್ ಸೇರಿದಂತೆ ತರುಣ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ಬಸವಜ್ಯೋತಿಗೆ ಸ್ವಾಗತ:

ಬಸವಜಯಂತಿ ಅಂಗವಾಗಿ ವೀವಿ ಸಂಘದ ಯುವ ಮುಖಂಡ ದರೂರು ಶಾಂತನಗೌಡ ಹಾಗೂ ಗೆಳಯರು ಪ್ರತಿವರ್ಷದಂತೆ ಕೂಡಲಸಂಗಮದಿಂದ ಹೊತ್ತುತಂದ ಬಸವಜ್ಯೋತಿಯನ್ನು ನಗರದಲ್ಲಿ ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಯಿತು.

ನಗರದ ಬಸವೇಶ್ವನಗರದಲ್ಲಿರುವ ಬಸವದಳ ಸಭಾಂಗಣಕ್ಕೆ ಆಗಮಿಸಿದ ಜ್ಯೋತಿಯನ್ನು ವೀವಿ ಸಂಘದ ಮುಖಂಡ ಎಚ್‌.ತಿಮ್ಮನಗೌಡ, ಅಲ್ಲಂ ಪ್ರಶಾಂತ್, ಯಾಳ್ಪಿ ಮೇಟಿ ಪಂಪನಗೌಡ ಹಾಗೂ ಸಾಹುಕಾರ್ ಸತೀಶ್ ಬಾಬು ಅವರು ಸ್ವಾಗತಿಸಿಕೊಂಡರು. ಸಮಾಜದ ಪ್ರಮುಖರಾದ ಗೋನಾಳ್ ನಾಗಭೂಷಣಗೌಡ, ಮೇಟಿ ದಿವಾಕರಗೌಡ ಮತ್ತಿತರರಿದ್ದರು.

ಬಸವಜಯಂತಿ ಹಿನ್ನಲೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ನಗರದ ಮೋತಿ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್, ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್, ಚೋರನೂರು ಕೊಟ್ರಪ್ಪ, ಮೇಟಿ ಮೃತ್ಯುಂಜಯ ಮತ್ತಿತರರಿದ್ದರು.

ಮಾದಿಗ ಮೀಸಲಾತಿ ಸಮಿತಿ:

ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ನಗರದಲ್ಲಿ ಬಸವಜಯಂತಿ ಆಚರಿಸಲಾಯಿತು. ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಮಿತಿಯ ಪ್ರಮುಖರು, ಬಸವಾದಿ ಶರಣರು ಸಮ ಸಮಾಜದ ನಿರ್ಮಾಣಕ್ಕೆ ಅಪಾರವಾಗಿ ಶ್ರಮಿಸಿದ್ದಾರೆ. ಬಸವಣ್ಣನವ ನೇತೃತ್ವದಲ್ಲಿ ವೈಚಾರಿಕತೆ ನೆಲೆಯಲ್ಲಿ ಸಮಾಜವನ್ನು ಕಟ್ಟುವ ಕೆಲಸವಾಗಿದೆ ಎಂದು ಸ್ಮರಿಸಿದರು.

ಬಸವ ಜಯಂತಿ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಲ್ಲ, ಬದಲಾಗಿ ಎಲ್ಲ ಸಮುದಾಯಗಳ ಒಳಿತಿಗಾಗಿ ಹೋರಾಟ ನಡೆಸಿದ ಮಹಾನ್ ಚೇತನವಾಗಿದ್ದಾರೆ.

ಕಾಯಕ, ದಾಸೋಹ ತತ್ವಗಳ ಮೂಲಕ ಸಮಾನತೆಯನ್ನು ಸಾರುತ್ತಾ, ಸಕಲಜೀವರಾಶಿಗಳಿಗೂ ಲೇಸನ್ನು ಬಯಸಿದ ಮಹಾನ್ ಮಾನವತಾವಾದಿ ಅಣ್ಣ ಬಸವಣ್ಣನವರ ವಚನಗಳ ತತ್ವ, ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.

ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ, ಸಂಘಟನೆಯ ರಾಜ್ಯ ಕಾರ್ಯದರ್ಶಿ ಎ.ಈಶ್ವರಪ್ಪ, ಜಿಲ್ಲಾ ಸಂಚಾಲಕ ರಾಮಣ್ಣ ಚೇಳ್ಳಗುರ್ಕಿ, ಛಲವಾದಿ ಮೈಲಾರಪ್ಪ, ಎಚ್.ಟಿ.ವರದಿರಾಜ, ಹರೀಶ್, ಹುಲಗಪ್ಪ, ಮಾರೆಪ್ಪ ಮತ್ತಿತರರಿದ್ದರು.

ಕಾಂಗ್ರೆಸ್‌-ದಲಿತ ಸಂಘಟನೆಗಳಿಂದ ಆಚರಣೆ:

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬಸವಜಯಂತಿ ಆಚರಿಸಲಾಯಿತು. ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಅವರು ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. ಹಿರಿಯ ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ ಅವರು ಬಸವಣ್ಣನವರ ಸಾಮಾಜಿಕ ಕೊಡುಗೆಯನ್ನು ಸ್ಮರಿಸಿದರು. ಪಕ್ಷದ ಮುಖಂಡರಾದ ಎಲ್.ಮಾರೆಣ್ಣ, ಉಪಾಧ್ಯಕ್ಷ ಮೇಟಿ ಪಂಪನಗೌಡ, ಮಹಿಳಾ ಘಟಕದ ಅಧ್ಯಕ್ಷೆ ಎಂ.ಎಸ್.ಮಂಜುಳಾ, ಚಾನಾಳ್ ಮಂಜುನಾಥ, ಯರಕುಲಸ್ವಾಮಿ, ಶೇಕ್ ಹುಸೇನ್, ಮೀನಳ್ಳಿ ಚಂದ್ರಶೇಖರಗೌಡ, ಶೋಭಾ ಕಾಳಿಂಗ, ಯತೀಂದ್ರಗೌಡ, ಮಲ್ಲಯ್ಯ, ನಾಗಭೂಷಣ, ಮಲ್ಲೇಶ್ವರಿ, ಶಾಂತಮ್ಮ ಸೇರಿದಂತೆ ಪಕ್ಷದ ಜಿಲ್ಲಾ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಪ್ರೊ.ಕೃಷ್ಣಪ್ಪ ಬಣದ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಬಸವಜಯಂತಿ ಆಚರಿಸಿದರು. ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಬಸವಣ್ಣನವರ ಕೊಡುಗೆಯನ್ನು ಸ್ಮರಿಸಿದರು.

ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಗಿ ನಾಗರಾಜ್, ಸಮಿತಿಯ ಪ್ರಮುಖರಾದ ಜಿ.ಗೋವರ್ಧನ, ಕುಬೇರ, ನಟರಾಜ, ಮುರುಳಿ ಮೋಹನ, ಪೆದ್ದ ಎರಿಸ್ವಾಮಿ ಮತ್ತಿತರರಿದ್ದರು.

ದಲಿತ ಸಂಘರ್ಷ ಸಮಿತಿಯ ಸಾಗರ ಬಣದ ಪದಾಧಿಕಾರಿಗಳು ಬಸವಜಯಂತಿ ಆಚರಿಸಿದರು. ಸಮಿತಿಯ ರಾಜ್ಯ ಸಂಚಾಲಕ ಎ.ಮಾನಯ್ಯ, ಎಚ್.ನಾಗೇಂದ್ರಪ್ಪ, ಬಿ.ರಮೇಶ್, ಎಚ್.ಮಲ್ಲಪ್ಪ, ಎಚ್.ಶಂಕರ್, ಹನುಮಂತಪ್ಪ, ರಾಜಣ್ಣ, ವಿಜಯ್ ಅಸುಂಡಿ, ಮಹೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.