ಬಸವೇಶ್ವರ ಜಾತ್ರೆ: ಪೂರ್ಣಕುಂಭಗಳ ಮೆರವಣಿಗೆ

| Published : May 10 2024, 11:47 PM IST

ಸಾರಾಂಶ

251 ಪೂರ್ಣ ಕುಂಭಗಳ ಮೆರವಣಿಗೆ ಹಾಗೂ ಬಸವಣ್ಣನವರ ಭಾವಚಿತ್ರವನ್ನು ಅಲಂಕೃತ ವಾಹನದಲ್ಲಿರಿಸಿ ನಾಡಿನ ಅನೇಕ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಮುದಗಲ್: ಪಟ್ಟಣದ ಕುಂಬಾರಪೇಟೆ ಆರಾಧ್ಯ ದೈವ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಶುಕ್ರವಾರ ಸಂಪನ್ನವಾಯಿತು.

ಜಾತ್ರೆ ನಿಮಿತ್ತ ಕಳೆದ 11 ದಿನಗಳಿಂದಲೂ ಗುಡ್ಡಾಪುರದ ದಾನಮ್ಮ ದೇವಿ ಚರಿತಾಮೃತದ ಪುರಾಣವನ್ನು ತಿಮ್ಮಾಪೂರ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಸಾಲಿಮಠ ನೇತ್ರತ್ವದಲ್ಲಿ ಜರುಗಿತು. ಜಾತ್ರೆ ನಿಮಿತ್ತ ಶುಕ್ರವಾರ ಬೆಳಗಿನ ಜಾವ ಬಸವಣ್ಣನ ಮೂರ್ತಿಗೆ ರುದ್ರಾಭಿಷೇಕ, ಎಲೆಚೆಟ್ಟು ಸೇವೆ ಸೇರಿ ಅನೇಕ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.

ನಂತರ ಬಸವಣ್ಣ ದೇವರ ಗುಡಿಯಿಂದ 251 ಪೂರ್ಣ ಕುಂಭಗಳ ಮೆರವಣಿಗೆ ಹಾಗೂ ಬಸವಣ್ಣನವರ ಭಾವಚಿತ್ರವನ್ನು ಅಲಂಕೃತ ವಾಹನದಲ್ಲಿರಿಸಿ ನಾಡಿನ ಅನೇಕ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಮೆರವಣಿಗೆಯುದ್ದಕ್ಕೂ ಯುವಕರು ಬಸವಣ್ಣನವರ ಜಯಘೋಷಣೆ ಕೂಗಿದರು. ಮೆರವಣಿಗೆಯಲ್ಲಿ ಕುಂಬಾರ ಪೇಟೆ ಯ ಸಮಸ್ತ ಗುರು ಹಿರಿಯರು, ಮಹಿಳೆಯರು ಸೇರಿ ಪಟ್ಟಣದ ಗಣ್ಯರಿದ್ದರು.