ದಲಿತರ ಮೀಸಲಾತಿ ತೆಗೆದು ಮುಸ್ಲಿಮರಿಗೆ ನೀಡುವ ಹುನ್ನಾರ: ಜೋಶಿ

| Published : Apr 26 2024, 12:51 AM IST

ದಲಿತರ ಮೀಸಲಾತಿ ತೆಗೆದು ಮುಸ್ಲಿಮರಿಗೆ ನೀಡುವ ಹುನ್ನಾರ: ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ನಾಯಕರು ಕರ್ನಾಟಕಕ್ಕೆ ವಸೂಲಿಗೆ ಬರುತ್ತಾರೆ ಅಷ್ಟೇ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ.

ಹುಬ್ಬಳ್ಳಿ:

ಮಾತೆತ್ತಿದರೆ ಅಹಿಂದ, ದಲಿತ ಪರ ಎನ್ನುವ ಕಾಂಗ್ರೆಸ್ ಸರ್ಕಾರವೇ ಈಗ ಒಬಿಸಿ ಮತ್ತು ದಲಿತರಿಗಿದ್ದ ಮೀಸಲಾತಿ ಕಿತ್ತುಕೊಂಡು ಮುಸ್ಲಿಂರಿಗೆ ಕೊಡಲು ಹೊರಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಸ್ಲಿಂ ಓಲೈಕೆಗಾಗಿ ದಲಿತರಿಗೆ ಹೀಗೆ ಅನ್ಯಾಯ ಮಾಡುತ್ತಿದ್ದಾರೆ. ಅಂಬೇಡ್ಕರ್, ಬಾಬು ಜಗಜೀವನ ರಾಮ್ ಅವರಿಗೆ ಅವಮಾನ ಮಾಡಿದ್ದು, ಕಾಂಗ್ರೆಸ್ ಅವಕಾಶವಾದಿ ರಾಜಕಾರಣ ಮಾಡುತ್ತಿದೆ ಎಂದ ಅವರು, ಕಾಂಗ್ರೆಸ್ಸಿನವರೇ ಹೀಗೆ ಡಬಲ್ ಸ್ಟ್ಯಾಂಡ್ ತೆಗೆದುಕೊಳ್ಳುತ್ತಿದ್ದಾರೆ, ನಾವಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕಕ್ಕೆ ವಸೂಲಿಗೆ ಬರುತ್ತಾರೆ:

ಕಾಂಗ್ರೆಸ್ ನಾಯಕರು ಕರ್ನಾಟಕಕ್ಕೆ ವಸೂಲಿಗೆ ಬರುತ್ತಾರೆ ಅಷ್ಟೇ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ ಎಂದು ತಿರುಗೇಟು ನೀಡಿದರು. ಕರ್ನಾಟಕ, ತೆಲಂಗಾಣ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಹಿಮಾಚಲ ಪ್ರದೇಶದಲ್ಲಿ ಅವರ ಸರ್ಕಾರ ತೇಲಾಡುತ್ತಿದೆ. ದೇಶದ ಜನ ಕಾಂಗ್ರೆಸಿಗರ ಡಬಲ್ ಸ್ಟ್ಯಾಂಡ್ ಅನ್ನು ನೋಡಿಬಿಟ್ಟಿದ್ದಾರೆ. ಹಾಗಾಗಿ ಈ ಸ್ಥಿತಿಗೆ ತಂದಿದ್ದಾರೆ ಎಂದು ಲೇವಡಿ ಮಾಡಿದರು.

ವಸೂಲಿಗೆ ಬಂದಿದ್ದ ಸುರ್ಜೇವಾಲಾಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್‌ ಸುರ್ಜೆವಾಲಾ ಕರ್ನಾಟಕಕ್ಕೆ ವಸೂಲಿಗೆ ಬಂದಿದ್ದರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗಂಭೀರ ಆರೋಪ ಮಾಡಿದ್ದಾರೆ. ಕರ್ನಾಟಕದಿಂದ ತೆಗೆದುಕೊಂಡು ಹೋಗಿ ಬೇರೆ ಕಡೆ ಕೊಡುತ್ತಾರೆ. ಅವರಿಗೆ ಕರ್ನಾಟಕ ಒಂದೇ ಎಟಿಎಂ ಎಂದು ಹೇಳಿದರು.ಕಾಂಗ್ರೆಸ್‌ ಮಾಡುತ್ತಿರುವ ತುಷ್ಟೀಕರಣದ ಪರಿಣಾಮವಾಗಿ ನೇಹಾಗೆ ನ್ಯಾಯ ಕೊಡಿಸಲು ವಿಫಲವಾಗಿದೆ. ಜನರೇ ನಿಂತು ಹೋರಾಟ ಮಾಡಿದರು. ಆಗ ನೇಹಾ ಹಿರೇಮಠ ಪರ ಇವರು ಮಾತನಾಡಿದರು. ಹಾಗೆಯೇ, ದಲಿತ ವ್ಯಕ್ತಿ ಮೇಲೆಯೂ ಹಲ್ಲೆ ಆಗಿದೆ. ಅಲ್ಲೂ ಇವರಿಗೆ ಮರುಕವಿಲ್ಲ. ಏಕೆಂದರೆ ಅಲ್ಲಿ ಹೋರಾಟವಾಗಲಿಲ್ಲ. ಅಲ್ಲಿ ಪ್ರತಿಭಟನೆ ಆಗಲಿಲ್ಲ. ಆದರೆ, ನೇಹಾ ವಿಷಯದಲ್ಲಿ ಹೋರಾಟ ಆಗಿದ್ದಕ್ಕೆ ಸ್ಪಂದಿಸಿದ್ದಾರೆ. ಇದು ಕಾಂಗ್ರೆಸ್‌ನ ದ್ವಿಮುಖ ನೀತಿಯ ಡಿಎನ್ಎ ಎಂದು ಜೋಶಿ ಟೀಕಿಸಿದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜೋಶಿ, ಕೇಂದ್ರದಲ್ಲಿ ಸರ್ಕಾರ ರಚಿಸಲು 272 ಸ್ಥಾನ ಬೇಕು. ಇವರು ಸ್ಪರ್ಧಿಸಿದ್ದು 230 ಸ್ಥಾನ. ಇವರು ಚೊಂಬು ಹಿಡಿದು ನಿಂತಿದ್ದಾರೆ. ನರೇಂದ್ರ ಮೋದಿ ಬರುವ ಮೊದಲು ಕಾಂಗ್ರೆಸಿಗರು ಚೊಂಬು ಹಿಡಿದು ಹೋಗುತ್ತಿದ್ದರು. ಮೋದಿ ಬಂದ ಮೇಲೆ ನಿಲ್ಲಿಸಿದ್ದು, ಈಗ ಮತ್ತೆ ಚೊಂಬು ಹಿಡಿದು ಹೊರಟಿದ್ದಾರೆ ಎಂದ ಜೋಶಿ, ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಚೊಂಬು ಇಟ್ಟು ಫೋಟೋ ಎಡಿಟ್ ವಿಚಾರವಾಗಿ ಕಾಂಗ್ರೆಸ್‌ ಮುಖಂಡ ರಜತ್‌ ಉಳ್ಳಾಗಡ್ಡಿಮಠ ವಿರುದ್ಧ ಹರಿಹಾಯ್ದರು. ಕಿತ್ತೂರು ರಾಣಿ ಚೆನ್ನಮ್ಮಗೆ ರಜತ್ ಅವಮಾನ ಮಾಡಿದ್ದಾರೆ. ಅಲ್ಲಿ ಚೊಂಬು ಇಡಬಾರದು. ಹೀಗಾಗಿ ಇವರು ಚೊಂಬು ಹಿಡಿದೇ ಹೋಗುತ್ತಾರೆ ಎಂದು ವಾಗ್ದಾಳಿ ಮಾಡಿದರು.