ಮಂಡ್ಯ ಜಿಲ್ಲೆಯಲ್ಲಿ ಸುಗಮವಾಗಿ ನಡೆದ ಮಸ್ಟರಿಂಗ್ ಕಾರ್ಯ

| Published : Apr 26 2024, 12:51 AM IST

ಮಂಡ್ಯ ಜಿಲ್ಲೆಯಲ್ಲಿ ಸುಗಮವಾಗಿ ನಡೆದ ಮಸ್ಟರಿಂಗ್ ಕಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಮತಗಟ್ಟೆಗೆ ಒಬ್ಬರು ಅಧಿಕಾರಿ, ಸಹಾಯಕ ಅಧಿಕಾರಿ ಸಹಿತ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತಮ್ಮನ್ನು ಚುನಾವಣಾ ಕಾರ್ಯಕ್ಕೆ ನಿಯುಕ್ತಿಗೊಳಿಸಿರುವ ಸ್ಥಳಗಳಿಗೆ ಮತಯಂತ್ರ, ವಿವಿ ಪ್ಯಾಟ್, ಬ್ಯಾಲೆಟ್ ಯೂನಿಟ್, ಗ್ರೀನ್ ಪೇಪರ್ ಸೀಲ್, ಪಿಂಕ್ ಪೇಪರ್ ಸೀಲ್, ಅಳಿಸಲಾಗದ ಶಾಯಿ ಸೇರಿದಂತೆ ಇನ್ನಿತರ ಪರಿಕರಗಳನ್ನು ಪರಿಶೀಲಿಸಿ ತೆಗೆದುಕೊಂಡು ಹೋದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಲೋಕಸಭಾ ಚುನಾವಣೆ ಮತದಾನದ ಮುನ್ನಾ ದಿನವಾದ ಗುರುವಾರ ನಗರ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಕಾರ್ಯ ಸುಗಮವಾಗಿ ನಡೆಯಿತು.

ಮಳವಳ್ಳಿಯ ಶಾಂತಿ ಪದವಿ ಪೂರ್ವ ಕಾಲೇಜು, ಮದ್ದೂರಿನ ಎಚ್.ಕೆ.ವೀರಣ್ಣಗೌಡ ಪದವಿ ಪೂರ್ವ ಕಾಲೇಜು, ಮೇಲುಕೋಟೆ ವಿಧಾನ ಸಭಾ ಕ್ಷೇತ್ರಕ್ಕೆ ಪಾಂಡವಪುರದ ಪಿಎಸ್‌ಎಸ್‌ಕೆ ಪ್ರೌಢಶಾಲೆ, ಮಂಡ್ಯದಲ್ಲಿ ಮಂಡ್ಯ ವಿಶ್ವವಿದ್ಯಾಲಯ, ಶ್ರೀರಂಗಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ನಾಗಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆ.ಆರ್.ಪೇಟೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಗೂ ಕೆ.ಆರ್.ನಗರದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ನಡೆದ ಮಸ್ಟರಿಂಗ್ ಕಾರ್ಯದಲ್ಲಿ ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಮತಗಟ್ಟೆ ಕೇಂದ್ರಗಳಿಗೆ ಮತಯಂತ್ರ ರವಾನೆ:

ಪ್ರತಿ ಮತಗಟ್ಟೆಗೆ ಒಬ್ಬರು ಅಧಿಕಾರಿ, ಸಹಾಯಕ ಅಧಿಕಾರಿ ಸಹಿತ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತಮ್ಮನ್ನು ಚುನಾವಣಾ ಕಾರ್ಯಕ್ಕೆ ನಿಯುಕ್ತಿಗೊಳಿಸಿರುವ ಸ್ಥಳಗಳಿಗೆ ಮತಯಂತ್ರ, ವಿವಿ ಪ್ಯಾಟ್, ಬ್ಯಾಲೆಟ್ ಯೂನಿಟ್, ಗ್ರೀನ್ ಪೇಪರ್ ಸೀಲ್, ಪಿಂಕ್ ಪೇಪರ್ ಸೀಲ್, ಅಳಿಸಲಾಗದ ಶಾಯಿ ಸೇರಿದಂತೆ ಇನ್ನಿತರ ಪರಿಕರಗಳನ್ನು ಪರಿಶೀಲಿಸಿ ತೆಗೆದುಕೊಂಡು ಹೋದರು.

ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆಗೆ ಕರೆದೊಯ್ಯಲು ೨೭೪ ಬಸ್, ೨೭ ಮಿನಿಬಸ್, ೩೪ ಮ್ಯಾಕ್ಸಿಕ್ಯಾಬ್, ೩೮ ಜೀಪ್ ಸೇರಿದಂತೆ ೩೭೩ ವಾಹನಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ನಿಯೋಜಿತ ಮತಗಟ್ಟೆ ಅಧಿಕಾರಿ ಸಿಬ್ಬಂದಿ ತಾಲೂಕಿನ ನಿಗದಿತ ಸ್ಥಳದಲ್ಲಿ ಕಡ್ಡಾಯವಾಗಿ ಹಾಜರಿದ್ದು, ನಿಯೋಜನೆಗೊಂಡಿರುವ ಕ್ಷೇತ್ರಕ್ಕೆ ತೆರಳುವುದು ಹಾಗೂ ಡಿ-ಮಸ್ಟರಿಂಗ್ ದಿನದಂದು ಅದೇ ಬಸ್ಸಿನಿಂದ ಕೇಂದ್ರ ಸ್ಥಾನಕ್ಕೆ ಹಿಂತಿರುಗುವುದು. ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾಗುವ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಪ್ರಜಾಪ್ರತಿನಿಧ್ಯ ಕಾಯ್ದೆ - ೧೯೫೧ ರಡಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.

ಕೈ ಬೀಸಿ ಕರೆಯುತ್ತಿವೆ ವಿಷಯಾಧಾರಿತ ಮತಗಟ್ಟೆ

ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನದ ಪ್ರಯುಕ್ತ ತೆರೆಯಲಾಗಿರುವ ವಿಷಯಾಧಾರಿತ ಮತಗಟ್ಟೆಗಳು ಮತದಾರರನ್ನು ಕೈಬೀಸಿ ಕರೆಯುವಂತೆ ಆಕರ್ಷಣೀಯವಾಗಿ ಚಿತ್ರಿಸಲಾಗಿದೆ.

ಮತದಾನದ ದಿನದಂದು ಮತದಾರರಿಗೆ ಹಬ್ಬದ ವಾತಾವರಣ ಸೃಷ್ಟಿಸಿ ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಯುವ, ಸಖಿ, ವಿಶೇಷಚೇತನ, ಸಾಂಪ್ರದಾಯಿಕ ಹಾಗೂ ವಿಷಯಧಾರಿತ ಮತಗಟ್ಟೆಗಳನ್ನು ತೆರೆಯಲಾಗಿದೆ. ವಿಭಿನ್ನ ರೀತಿಯ ಮತಗಟ್ಟೆಗಳು ವಿಶೇಷ ರೀತಿಯಲ್ಲಿ ಮತದಾರರ ಕೈ ಬೀಸಿ ಕರೆಯಲಿವೆ.ಮದ್ದೂರು ತಾಲೂಕಿನ ಬನ್ನಹಳ್ಳಿ ಮತಗಟ್ಟೆ ವಿಷಯಾಧಾರಿತ ಮತಗಟ್ಟೆಯಾಗಿದ್ದು, ಈ ಮತಗಟ್ಟೆಯಲ್ಲಿ ಕೊಕ್ಕರೆ ಬೆಳ್ಳೂರು ಪಕ್ಷಿಧಾಮವನ್ನು ಗೋಡೆ ಬರಹಗಳ ಮೂಲಕ ಆಕರ್ಷಿಣೀಯವಾಗಿ ಚಿತ್ರ ಮೂಡಿಸಿ ಮತದಾರರ ಮನಸೂರೆಗೊಳ್ಳುವಂತೆ ನಿರ್ಮಿಸಿರುವುದು ಗಮನ ಸೆಳೆದಿದೆ.