ಬೀದರ್ ಲೋಕಸಭೆ ಕ್ಷೇತ್ರ: 65.47 ಮತದಾನ ದಾಖಲು

| Published : May 09 2024, 01:18 AM IST / Updated: May 09 2024, 09:13 AM IST

ಸಾರಾಂಶ

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ ಶೇ.66.88. ಭಾಲ್ಕಿಯಲ್ಲಿ ಅತೀ ಹೆಚ್ಚು, ಆಳಂದದಲ್ಲಿ ಕಡಿಮೆ ಮತದಾನ. 

 ಬೀದರ್‌ :  ಬೀದರ್ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಹಾಗೂ ಕಲಬುರಗಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳೊಂದಿಗೆ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿರುವ ಬೀದರ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶೇ.65.47ರಷ್ಟು ಮತದಾನವಾಗಿದೆ.

ಒಟ್ಟು 18 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಮಂಗಳವಾರ ಮತಯಂತ್ರದಲ್ಲಿ ದಾಖಲಾಗಿದ್ದು ಆರಂಭದಲ್ಲಿ ಕೊಂಚ ಬಿರುಸಾಗಿದ್ದ ಮತದಾನ ಪ್ರಕ್ರಿಯೆ ಬಿಸಿಲೇರುತ್ತಿದ್ದಂತೆ ನೀರಸವಾಗಿ 4ರ ನಂತರ ಬಿರುಸು ಕಂಡುಕೊಂಡಿದ್ದು ಕಳೆದ ಬಾರಿಯ ಮತದಾನದ ದಾಖಲೆಯನ್ನು ಮುರಿದಿದೆ.

ಕ್ಷೇತ್ರದಾದ್ಯಂತ ಕಳೆದ 2019ಕ್ಕಿಂತ ಶೇ.2.71ರಷ್ಟು ಹೆಚ್ಚು ಮತದಾನವಾಗಿದ್ದು, ಯುವಕ, ಯುವತಿಯರಷ್ಟೇ ಅಲ್ಲ ಶತಾಯುಷಿಗಳು, ವಿಕಲಚೇತನರೂ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಮತ ಹಕ್ಕಿನ ಮಹತ್ವ ಸಾರಿದ್ದಾರೆ.

ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೀದರ್‌ ಜಿಲ್ಲೆಯ ಬಸವಕಲ್ಯಾಣ, ಹುಮನಾಬಾದ್, ಭಾಲ್ಕಿ, ಔರಾದ್‌, ಬೀದರ್‌ ಹಾಗೂ ಬೀದರ್‌ ದಕ್ಷಿಣ ಕ್ಷೇತ್ರಗಳಿದ್ದರೆ ಪಕ್ಕದ ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಆಳಂದ ಕ್ಷೇತ್ರಗಳಿದ್ದು ಬೀದರ್‌ ಜಿಲ್ಲೆಯ ಮತಕ್ಷೇತ್ರಗಳಲ್ಲಿ ಉತ್ತಮ ಮತದಾನ ದಾಖಲಾಗಿದೆ.

ಬೀದರ್ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಒಟ್ಟಾರೆ 18,92,962 ಮತದಾರರ ಪೈಕಿ 9,71,424 ಪುರುಷ, 9,21,435 ಮಹಿಳೆ ಹಾಗೂ 103 ಇತರ ಮತದಾರರು ಇದ್ದಾರೆ. ಈ ಪೈಕಿ ಪುರುಷರು 6,33,229, ಮಹಿಳೆಯರು 6,06,116 ಹಾಗೂ ಇತರೆ 13 ಮತದಾರರು ಸೇರಿದಂತೆ ಒಟ್ಟು 12,39,358 ಮತದಾರರು ಮತ ಚಲಾಯಿಸಿದ್ದು ಒಟ್ಟಾರೆ ಶೇ. 65.47ರಷ್ಟು ಮತ ಚಲಾವಣೆ ಆದಂತಾಗಿದೆ.

ಅತಿ ಹೆಚ್ಚು ಮತದಾರರನ್ನು ಹೊಂದಿರುವ ಜಿಲ್ಲೆಯ ಹುಮನಾಬಾದ್‌ನಲ್ಲಿ ಒಟ್ಟು 1,70,015 ಮತಗಳು ಚಲಾವಣೆಯಾಗಿದ್ದು ಶೇ. 66.28ರಷ್ಟು ಮತದಾನ ದಾಖಲಾಗಿದೆ.

ಅತೀ ಕಡಿಮೆ ಮತದಾರರನ್ನು ಹೊಂದಿರುವ ಚಿಂಚೋಳಿಯಲ್ಲಿ ಒಟ್ಟು 1,33,905 ಮತ ಚಲಾಯಿಸಿದ್ದು ಶೇ. 63.55ರಷ್ಟು ಮತದಾನ ದಾಖಲಾಗಿದೆ.

ಬಸವಕಲ್ಯಾಣ ಕ್ಷೇತ್ರದಲ್ಲಿ ಒಟ್ಟು 1,60,889 ಮತದಾರರು ಮತ ಚಲಾಯಿಸಿದ್ದು ಶೇ. 63.53ರಷ್ಟು ಮತದಾನ ದಾಖಲಾಗಿದೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ 1,48,659 ಮತದಾರರು ಮತ ಚಲಾಯಿಸಿದ್ದು ಶೇ. 69.8ರಷ್ಟು ಮತದಾನ ದಾಖಲಾಗಿದೆ.

ಬೀದರ್‌ ಕ್ಷೇತ್ರದಲ್ಲಿ 1,58,869 ಮತ ಚಲಾಯಿಸಿದ್ದು ಶೇ. 65.3ರಷ್ಟು ಮತದಾನ ದಾಖಲಾಗಿದೆ. ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನವಾಗಿದ್ದು, 1,66,861 ಮತದಾರರು ಮತ ಚಲಾಯಿಸಿದ್ದು ಶೇ. 70.05ರಷ್ಟು ಮತದಾನ ದಾಖಲಾಗಿದೆ.

ಔರಾದ್‌ ಕ್ಷೇತ್ರದಲ್ಲಿ ಶೇ.66.94ರಷ್ಟು ಮತದಾನ ದಾಖಲಾಗಿದೆ. ಹಾಗೆಯೇ ಆಳಂದ ಕ್ಷೇತ್ರದಲ್ಲಿ 1,33,905 ಮತದಾರರು ಮತ ಚಲಾಯಿಸಿದ್ದು ಶೇ. 59.06ರಷ್ಟು ಮತದಾನ ದಾಖಲಾಗಿದೆ. ಒಟ್ಟಾರೆ ಭಾಲ್ಕಿ ವಿಧಾನಸಭಾ ಕ್ಷೇತ್ರ ಅತಿ ಹೆಚ್ಚು ಮತದಾನವಾಗಿರುವ ಕ್ಷೇತ್ರವಾಗಿದ್ದರೆ ಆಳಂದ ಕ್ಷೇತ್ರ ಅತಿ ಕಡಿಮೆ ಮತದಾನವಾಗಿರುವ ಕ್ಷೇತ್ರವಾಗಿದೆ.