ಲೋಕಸಭಾ ಚುನಾವಣೆಯಲ್ಲಿ ರಾಘವೇಂದ್ರರಿಂದ ಷಡ್ಯಂತ್ರ: ಈಶ್ವರಪ್ಪ

| Published : May 10 2024, 01:32 AM IST

ಸಾರಾಂಶ

ಈ ಚುನಾವಣೆಯಲ್ಲಿ ರಾಘವೇಂದ್ರರಿಂದ ಷಡ್ಯಂತ್ರ ನಡೆದಿದೆ. ಚುನಾವಣೆಯಲ್ಲಿ ನನ್ನ ಪರ ಜನ ಬಂದಿದ್ದನ್ನು ಕಂಡು ಕಚೇರಿ ಎದುರು ವಾಮಾಚಾರ ಮಾಡಿಸಿದರು. ಶಿರಾಳಕೊಪ್ಪದಲ್ಲಿ ಸಭೆ ನಡೆಸಲು ಬಿಡಲಿಲ್ಲ. ಇದು ಸಾಲದು ಎಂಬಂತೆ ಮತದಾನ ಹಿಂದಿನ ದಿನ ಸಾಮಾಜಿಕ ಜಾಲತಾಣದಲ್ಲಿ ತಿರುಚಿದ ವಿಡಿಯೋ ಮಾಡಿದ್ದಾರೆ. ನನ್ನ ಪರವಾಗಿ ಬಿಜೆಪಿಗೆ ಮತ ಹಾಕಿ ಎನ್ನುವ ರೀತಿಯಲ್ಲಿ ಸುದ್ದಿ ಹಬ್ಬಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮತದಾನದ ಹಿಂದಿನ ದಿನ ನನ್ನ ಹಳೆಯ ಭಾಷಣದ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಹಿಂದೆ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಚುನಾವಣೆಯಲ್ಲಿ ರಾಘವೇಂದ್ರರಿಂದ ಷಡ್ಯಂತ್ರ ನಡೆದಿದೆ. ಚುನಾವಣೆಯಲ್ಲಿ ನನ್ನ ಪರ ಜನ ಬಂದಿದ್ದನ್ನು ಕಂಡು ಕಚೇರಿ ಎದುರು ವಾಮಾಚಾರ ಮಾಡಿಸಿದರು. ಶಿರಾಳಕೊಪ್ಪದಲ್ಲಿ ಸಭೆ ನಡೆಸಲು ಬಿಡಲಿಲ್ಲ. ಇದು ಸಾಲದು ಎಂಬಂತೆ ಮತದಾನ ಹಿಂದಿನ ದಿನ ಸಾಮಾಜಿಕ ಜಾಲತಾಣದಲ್ಲಿ ತಿರುಚಿದ ವಿಡಿಯೋ ಮಾಡಿದ್ದಾರೆ. ನನ್ನ ಪರವಾಗಿ ಬಿಜೆಪಿಗೆ ಮತ ಹಾಕಿ ಎನ್ನುವ ರೀತಿಯಲ್ಲಿ ಸುದ್ದಿ ಹಬ್ಬಿಸಿದ್ದಾರೆ. ಈ ಸುಳ್ಳು ಸುದ್ದಿಯಿಂದ ನನಗೆ ಅನೇಕ ವೋಟ್ ಅನ್ಯಾಯ ಆಗಿದೆ. ನನಗೆ ವೋಟ್ ಮಾಡಲು ಬಂದವರಿಗೆ ಗೊಂದಲ ಉಂಟಾಗಿದ್ದು, ನನಗೆ ಮತ ಕಡಿಮೆಯಾಗಬೇಕು ಎಂದು ರಾಘವೇಂದ್ರ ಈ ರೀತಿ ಕುತಂತ್ರ ನಡೆಸಿದ್ದಾರೆ ದೂರಿದರು.

ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದೇನೆ. ಕೂಡಲೇ ಸಂಸದ ರಾಘವೇಂದ್ರರನ್ನು ಅರೆಸ್ಟ್ ಮಾಡಬೇಕು. ಮೇ 15ರೊಳಗೆ ಸಂಸದ ರಾಘವೇಂದ್ರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಳ್ಳ ಕಳ್ಳತನ ಒಪ್ಪಿಕೊಳ್ಳುತ್ತಾನಾ? ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಇದಕ್ಕಾಗಿ ರಾಘವೇಂದ್ರ ಮೇಲೆ ಎಫ್ಐಆರ್ ದಾಖಲಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹಿಂದುತ್ವದ ಮೇಲೆ ನಾನು ಗೆಲ್ಲುವೆ:

ಜಾತಿ ಮೇಲೆ ಅಲ್ಲಾ, ಹಿಂದುತ್ವದ ಮೇಲೆ ನಾನು ಗೆಲ್ಲುತ್ತೇನೆ. ಇಡೀ ಮುಸ್ಲಿಂ ಸಮುದಾಯದ ಜಾಗೃತವಾಗಿದೆ. ಅತಿ ಹೆಚ್ಚು ಮುಸ್ಲಿಮರ ಈ ಬಾರಿ ಮತದಾನ ಮಾಡಿದ್ದಾರೆ. ಇದನ್ನು ಹಿಂದೂ ಸಮಾಜ ಗಮನಿಸಬೇಕು. ಹಿಂದೂ ಸಮಾಜವನ್ನು ಜಾತಿ ಹೆಸರಿನಲ್ಲಿ ರಾಷ್ಟ್ರೀಯ ಪಕ್ಷಗಳು ಹೊಡೆಯುತ್ತಿದೆ. ಎಲ್ಲಾ ಸಮುದಾಯಗಳು ನನಗೆ ಬೆಂಬಲ ನೀಡಿದೆ. ಭಾರತೀಯ ಜನತಾ ಪಾರ್ಟಿ ಶುದ್ಧೀಕರಣ ಮಾಡಲು ನನಗೆ ಮತಹಾಕಿದ್ದಾರೆ. ನನ್ನ ವಿಚಾರ ಈ ಚುನಾವಣೆಯಲ್ಲಿ ಯಶಸ್ವಿಯಾಗಿದೆ. ಈ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ ಎಂದರು.