ನಾಳೆ ಕುಷ್ಟಗಿಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ

| Published : Apr 28 2024, 01:22 AM IST

ಸಾರಾಂಶ

ಏ. 29ರಂದು ಮಧ್ಯಾಹ್ನ 3 ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕುಷ್ಟಗಿ ಪಟ್ಟಣಕ್ಕೆ ಆಗಮಿಸಲಿದ್ದಾರೆ. 30 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ

ಕುಷ್ಟಗಿ: ಏ. 29ರಂದು ಮಧ್ಯಾಹ್ನ 3 ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕುಷ್ಟಗಿ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಅಂಗವಾಗಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರವಾಗಿ ಮತಯಾಚನೆ ಮಾಡಲು ಅವರು ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮ ಕುಷ್ಟಗಿ ಪಟ್ಟಣದ ತಾವರಗೇರಾ ರಸ್ತೆಯಲ್ಲಿರುವ ಹಾಲಿನ ಡೈರಿ ಹತ್ತಿರ ಖಾಲಿ ಜಾಗದಲ್ಲಿ ನಡೆಯಲಿದ್ದು, 30 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಲೋಕಸಭಾ ಕ್ಷೇತ್ರದ ಜಿಪಂ ವ್ಯಾಪ್ತಿಯಲ್ಲಿ ನಾನು ಹಾಗೂ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ ಹಾಗೂ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ ಸೇರಿದಂತೆ ವಿವಿಧ ಗಣ್ಯರ ನೇತೃತ್ವದಲ್ಲಿ ಪ್ರಚಾರ ಕಾರ್ಯಕ್ರಮವನ್ನು ನಡೆಸಿದ್ದು, ನಮ್ಮ ಪಕ್ಷದ ಪರವಾಗಿ ಮತದಾರರು ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ನಮ್ಮ ಅಭ್ಯರ್ಥಿಯಾದ ರಾಜಶೇಖರ ಹಿಟ್ನಾಳ ಅವರು ಸುಮಾರು 1.5 ಲಕ್ಷ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಬಸವರಾಜ ಹಿಟ್ನಾಳ, ಮಾಲತಿ ನಾಯಕ, ಚಂದ್ರು ನಾಲತವಾಡ, ಮೈನೂದ್ದೀನ್ ಮುಲ್ಲಾ ಇದ್ದರು.

ವೇದಿಕೆ ಪರಿಶೀಲನೆ ನಡೆಸಿದ ಸಚಿವ ತಂಗಡಗಿ

ಲೋಕಸಭಾ ಚುನಾವಣೆ ಅಂಗವಾಗಿ ಪ್ರಚಾರ ಕಾರ್ಯಕ್ರಮಕ್ಕೆ ಕುಷ್ಟಗಿ ಪಟ್ಟಣಕ್ಕೆ ಏ. 29ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಗಮನ ಹಿನ್ನೆಲೆಯಲ್ಲಿ ಸಿದ್ದಗೊಳ್ಳುತ್ತಿರುವ ವೇದಿಕೆಯನ್ನು ಸಚಿವ ಶಿವರಾಜ ತಂಗಡಗಿ, ಕಾಡಾ ನಿಗಮದ ಅಧ್ಯಕ್ಷ ಹಸನ್‌ಸಾಬ್‌ ದೋಟಿಹಾಳ ಪರಿಶೀಲನೆ ನಡೆಸಿದರು. ಕಾಂಗ್ರೆಸ್ ಮುಖಂಡರಾದ ದೊಡ್ಡಬಸವನಗೌಡ ಪಾಟೀಲ, ಲಾಡ್ಲೇಮಷಾಕ ದೋಟಿಹಾಳ, ಮಾಲತಿ ನಾಯಕ, ಶೇಖರಗೌಡ ಮಾಲಿಪಾಟೀಲ, ಮೈನುದ್ದೀನ್‌ ಮುಲ್ಲಾ ಇದ್ದರು.