ಮಕ್ಕಳಿಗೆ ಮೊಬೈಲ್, ಟಿವಿ ಹುಚ್ಚು ಬೇಡ

| Published : May 10 2024, 01:32 AM IST

ಸಾರಾಂಶ

ವಿದ್ಯಾರ್ಥಿಗಳು ಮೊಬೈಲ್ ಸೋಸಿಯಲ್ ಮಿಡಿಯಾದಲ್ಲಿ ಹಾಗೂ ಟಿವಿ ನೋಡುವುದರಲ್ಲಿ ತಲ್ಲೀನರಾಗಿದ್ದಾರೆ. ಹೀಗಾಗಿ ಅವರಲ್ಲಿ ವಿಚಾರಶಕ್ತಿ, ತರ್ಕ, ಚಿಂತನಾಶೀಲತೆ ಮಂಕಾಗುತ್ತಿದೆ.

ಗದಗ:

ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿವಿಯನ್ನು ಹಿತಮಿತವಾಗಿ ಬಳಸಿ, ಜ್ಞಾನಾರ್ಜನೆಗೆ ಒತ್ತು ನೀಡಬೇಕು. ಅವುಗಳ ಹುಚ್ಚು ಸರಿಯಲ್ಲ ಎಂದು ಗದಗ ಜಿಮ್ಸ್ ಆಸ್ಪತ್ರೆಯ ಡಾ. ಈರಣ್ಣ ಹಳೇಮನಿ ಹೇಳಿದರು.

ಅವರು ನಗರದ ಹುಡ್ಕೋ ಕಾಲನಿಯ ನಮನ್ ಪ್ಲಾಜಾದಲ್ಲಿರುವ ಬ್ರೈನ್ ಜಿಮ್ ಅಕಾಡೆಮಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಇತ್ತೀಚೆಗೆ ವಿದ್ಯಾರ್ಥಿಗಳು ಮೊಬೈಲ್ ಸೋಸಿಯಲ್ ಮಿಡಿಯಾದಲ್ಲಿ ಹಾಗೂ ಟಿವಿ ನೋಡುವುದರಲ್ಲಿ ತಲ್ಲೀನರಾಗಿದ್ದಾರೆ. ಹೀಗಾಗಿ ಅವರಲ್ಲಿ ವಿಚಾರಶಕ್ತಿ, ತರ್ಕ, ಚಿಂತನಾಶೀಲತೆ ಮಂಕಾಗುತ್ತಿದೆ. ಆದ್ದರಿಂದ ಮಕ್ಕಳು ಪಾಲಕ ಪೋಷಕರ, ಶಿಕ್ಷಕರ ಮಾತು ಕೇಳಬೇಕು, ಸಲಹೆ ಸೂಚನೆ ಆಲಿಸಿ ಸನ್ಮಾರ್ಗದಲ್ಲಿ ಮುನ್ನಡೆದರೆ ಅವರ ಜೀವನ ಶ್ರೇಷ್ಠತೆಯನ್ನು ಪಡೆದುಕೊಳ್ಳುವುದು. ಅಂತಹ ಸಾಧನೆ-ನೆಮ್ಮದಿಯ ಬದುಕು ಮಕ್ಕಳದ್ದಾಗಲಿ. ಅವರ ಜೀವನ ಉಜ್ವಲವಾಗಲಿ ಎಂದರು.

ಡಿಡಿಪಿಐ ಕಚೇರಿಯ ತಾಂತ್ರಿಕ ನೆರವು ವಿಭಾಗದ ಶಿವಾನಂದ ಗಿಡ್ನಂದಿ ಮಾತನಾಡಿ, ಬೇಸಿಗೆ ಶಿಬಿರದ ನೆಪದಲ್ಲಿ ಬ್ರೈನ್ ಜಿಮ್ ಅಕಾಡೆಮಿ ವಿದ್ಯಾರ್ಥಿಗಳಲ್ಲಿ ಕಲಿಕಾ ಪ್ರವೃತ್ತಿಯನ್ನು ಹೆಚ್ಚಿಸುವ, ಮನೋವಿಕಾಸಕ್ಕೆ ವೈವಿಧ್ಯಮಯ ತರಬೇತಿ, ಮಾರ್ಗದರ್ಶನ ನೀಡುತ್ತಿರುವ ಸ್ವಾಗತಾರ್ಹ. ವೇದಿಕ್ ಮ್ಯಾಥ್ಸ್, ಅಬ್ಯಾಕಸ್‌ನಂತ ಹವ್ಯಾಸವನ್ನು ರೂಢಿಸುವ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನ ಬೆಳೆಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯ ಎಂದರು.

ಗದಗ ಬ್ರೈನ್ ಜಿಮ್ ಅಕಾಡೆಮಿಯ ಅಧ್ಯಕ್ಷ ಟಿ.ವೈ. ಹಡಪದ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಕಾರ್ಯಕಲಾಪಗಳನ್ನು ರೂಪಿಸಿದ್ದು, ಬರಲಿರುವ ದಿನಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.

ಈ ವೇಳೆ ವೇದಿಕ್ ಮ್ಯಾಥ್ಸ್ ಲೈವ್ ಸ್ಪರ್ಧೆಯಲ್ಲಿ ವಿಜಯಶಾಲಿಯಾದ ಸ್ನೇಹಾ ವೇರ್ಣೇಕರ ಅವರಿಗೆ ₹೭ ಸಾವಿರ ಮೌಲ್ಯದ ಸೈಕಲ್‌ನ್ನು ಬಹುಮಾನವಾಗಿ ವಿತರಿಸಿ, ಪ್ರೋತ್ಸಾಹಿಸಲಾಯಿತು.

ಉಪಾಧ್ಯಕ್ಷ ವಿ.ಬಿ. ಹಡಪದ, ರಾಜೇಶ ಲಿಂಗದಾಳ, ಯಶೋದಾ ಹಡಪದ ಸೇರಿದಂತೆ ತರಬೇತುದಾರರು, ವಿದ್ಯಾರ್ಥಿಗಳು, ಇದ್ದರು. ಕವನಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.