ಕಾಂಗ್ರೆಸ್‌ನಿಂದ ಬೋಗಸ್ ಗ್ಯಾರಂಟಿ ಕಾರ್ಡ್ ಹಂಚಿಕೆ: ಹಾಲಪ್ಪ

| Published : Apr 26 2024, 12:54 AM IST

ಸಾರಾಂಶ

ಕಾಂಗ್ರೆಸ್ ಚುನಾವಣಾ ಪ್ರಯುಕ್ತ ಬೊಗಸ್ ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ನೀಡಿದೆ.

ಕಾಂಗ್ರೆಸ್‌ನಿಂದ ಬೋಗಸ್ ಗ್ಯಾರಂಟಿ ಕಾರ್ಡ್ ಹಂಚಿಕೆ । ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿಕೆ

ಕನ್ನಡಪ್ರಭ ವಾರ್ತೆ ಕುಕನೂರು

ಕಾಂಗ್ರೆಸ್ ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ವರ್ಷಕ್ಕೆ ₹1 ಲಕ್ಷ ಕೊಡುವ ಘೋಷಣೆ ಮಾಡಿದೆ. ರಾಷ್ಟ್ರದಲ್ಲಿ 35 ಕೋಟಿ ಕುಟುಂಬಗಳಿವೆ. ವರ್ಷಕ್ಕೆ ₹35 ಲಕ್ಷ ಕೋಟಿ ಬೇಕು. ಮಹಿಳೆಯರಿಗೆ ₹1 ಲಕ್ಷ ಕೊಡುವುದು ಅಸಾಧ್ಯ. ಕಾಂಗ್ರೆಸ್‌ ಬೋಗಸ್ ಗ್ಯಾರಂಟಿ ಕಾರ್ಡ್ ಹಂಚಿಕೆ ಮಾಡುತ್ತಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಆರೋಪಿಸಿದರು.

ತಾಲೂಕಿನ ಕದ್ರಳ್ಳಿ, ಕುದರಿಮೋತಿ, ನೆಲಜೇರಿ ಗ್ರಾಮದಲ್ಲಿ ಜರುಗಿದ ಬಿಜೆಪಿ ಲೋಕಸಭಾ ಬಹಿರಂಗ ಪ್ರಚಾರದ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಅಭಿವೃದ್ಧಿ ಕೆಲಸಗಳು ಮೂರು ಪಟ್ಟು ವೇಗ ಪಡೆದಿವೆ. ಮೋದಿ ರಾಷ್ಟ್ರದಲ್ಲಿ ಭಯೋತ್ಪಾದನೆ ಹೋಗಲಾಡಿಸಿದರು. ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ. ಮೋದಿ ಎಂದಿಗೂ ಸುಳ್ಳು ಹೇಳಿಲ್ಲ. ಅಭಿವೃದ್ಧಿ ಕೆಲಸ ಮಾಡಿ ಮಾದರಿ ಆಗಿದ್ದಾರೆ ಎಂದರು.

ಕಾಂಗ್ರೆಸ್ ಚುನಾವಣಾ ಪ್ರಯುಕ್ತ ಬೊಗಸ್ ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ನೀಡಿದೆ. ಗಳಿಸಿದ ಆಸ್ತಿಯಲ್ಲಿ ಸರ್ಕಾರಕ್ಕೆ ಪಾಲು ನೀಡುವುದು ಸರಿಯೇ. ಇಂತಹ ಪಾಲುದಾರಿಕೆ ಗ್ಯಾರಂಟಿ ಜನರಿಗೆ ಅನಾನುಕೂಲ ಆಗುತ್ತದೆ.

ಮಹಿಳೆಯರಿಗೆ ಹಣ ನೀಡಲು ₹ 35 ಲಕ್ಷ ಕೋಟಿ ಬೇಕು. ಬಜೆಟ್ ಇರುವೂದು ₹ 45 ಲಕ್ಷ ಕೋಟಿ ಮಾತ್ರ. ಬಜೆಟ್ ಮೀರಿ ಮಹಿಳೆಯರಿಗೆ ಹಣ ನೀಡುವುದು ಅಸಾಧ್ಯ. ಮತ ಪಡೆಯಲು ಕಾಂಗ್ರೆಸ್ ರೂಪಿಸಿರುವ ತಂತ್ರ ಇದು ಎಂದರು.

ಡಿಕೆಶಿ ಸಿಎಂ ಆಗ್ತಿನಿ ಅಂತಾರೆ. ಅತ್ತ ಸಿಎಂ ಸಿದ್ದರಾಮಯ್ಯ ಮತ ಕಾಂಗ್ರೆಸ್‌ಗೆ ಬರಲಿಲ್ಲವೆಂದರೆ ನನ್ನ ಅಧಿಕಾರ ಹೋಗುತ್ತದೆ ಅನ್ನುತ್ತಾರೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಹಲುಬುತ್ತಿದೆ.

ರಾಷ್ಟ್ರದಲ್ಲಿ ಕೇವಲ 200 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಿದೆ. ಅವರು ಹೇಗೆ ಅಧಿಕಾರಕ್ಕೆ ಬರುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ. ಇಂಡಿಯಾ ಒಕ್ಕೂಡದವರು ಸಹ ಒಂದೇ ಅಭಿಪ್ರಾಯದಲ್ಲಿಲ್ಲ. ಬಿಜೆಪಿಗೆ ಗೆಲುವು ಶತಸಿದ್ಧವಾಗಿದೆ. ಮೋದಿ ಇನ್ನೊಮ್ಮೆ ಪ್ರಧಾನಿ ಆಗುವುದರಲ್ಲಿ ಸಂಶಯವಿಲ್ಲ ಎಂದರು.

ಮುಖಂಡ ಸುಧಾಕರ್ ದೇಸಾಯಿ ಮಾತನಾಡಿ, ದೇಶಕ್ಕೆ ಸಮರ್ಥ ವ್ಯಕ್ತಿ ಆಯ್ಕೆ ಮಾಡುವ ಕೆಲಸ ಆಗಬೇಕಾಗಿದೆ. ದೇಶದ ಸಮಗ್ರ ಸುರಕ್ಷತೆಗೆ ಮೋದಿ ಕೊಡುಗೆ ಅಪಾರ ಎಂದರು.

ಜೆಡಿಎಸ್ ವಕ್ತಾರ ಮಲ್ಲನಗೌಡ ಕೋನನಗೌಡ ಮಾತನಾಡಿ, ಈ ಚುನಾವಣೆ ಧರ್ಮದ ಚುನಾವಣೆ ಆಗಿದೆ. ಕಾಂಗ್ರೆಸ್ ಮುಸ್ಲಿಂ ಎಂಬ ಜಾತಿಯ ಬತ್ತಳಿಕೆ ಹಿಡಿದು ರಾಜಕಾರಣ ಮಾಡುತ್ತಿದೆ. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಬಡಾಯಿ ರಾಜಕಾರಣಿ. ಸುಳ್ಳು ಹೇಳುವ ಮೂಲಕ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಮಾಜಿ ಸಚಿವ ಹಾಲಪ್ಪ ಆಚಾರ ನೀರಾವರಿಗೆ ಶ್ರಮಿಸಿದರು. ಆಗಿನ ಸಿಎಂ ಕುಮಾರಸ್ವಾಮಿ ಅವರಿಂದ ಕೃಷ್ಣ ಬೀ ಸ್ಕೀಂಗೆ ₹1750 ಕೋಟಿ ಅನುದಾನ ತಂದರು ಎಂದರು.

ಮುಖಂಡರಾದ ವಕ್ತಾರ ವೀರಣ್ಣ ಹುಬ್ಬಳ್ಳಿ, ಸಿ.ಎಚ್. ಪೋಲಿಸ್ ಪಾಟೀಲ್, ರತನ್ ದೇಸಾಯಿ, ಗುಂಗಾಡಿ ಶರಣಪ್ಪ, ವಿಶ್ವನಾಥ ಮರಿಬಸಪ್ಪನವರ್, ಎಂ.ಬಿ. ಅಳವಂಡಿ, ಅಯ್ಯನಗೌಡ ಕೆಂಚಮ್ಮನವರ್, ದ್ಯಾಮಣ್ಣ ಉಚ್ಚಲಕುಂಟಾ, ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಶ್ರೀನಿವಾಸ ತಿಮ್ಮಾಪೂರ, ಎಸ್ಸಿ ಮೋರ್ಚಾ ಅಧ್ಯಕ್ಷ ಸಿದ್ದು ಮಣ್ಣಿನವರ್, ಸೋಮನಗೌಡ, ಈರಪ್ಪ ರ್‍ಯಾವಣಕಿ, ಅಮರೇಶ ಹುಬ್ಬಳ್ಳಿ, ಗೌರಾ ಬಸವರಾಜ, ಶಿವಪ್ಪ ವಾದಿ ಇತರರಿದ್ದರು.