ಚುನಾವಣೆ ಸಮೀಪಿಸುತ್ತಿದ್ದಂತೆ ಅಕ್ರಮಕ್ಕೆ ತಡೆಗೆ ಕಟ್ಟೆಚ್ಚರ

| Published : Apr 26 2024, 12:54 AM IST

ಸಾರಾಂಶ

ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಯ ಕಾವು ತೀವ್ರವಾಗಿದೆ. ಇದರ ಮಧ್ಯೆ ಅಚ್ಚುಕಟ್ಟು ಚುನಾವಣೆ ನಡೆಸಲು ಜಿಲ್ಲಾಡಳಿತ ಸಹಿತ ಕಾರ್ಯಪ್ರವೃತ್ತವಾಗಿದೆ. ಚುನಾವಣೆ ಭ್ರಷ್ಟಾಚಾರ ತಡೆಯಲು ಅಲ್ಲಲ್ಲಿ ಚೆಕ್ಪೋಸ್ಟ್ಗಳನ್ನು ಹಾಕಿ ಎಚ್ಚರ ವಹಿಸಲಾಗಿದೆ. ಹೀಗಾಗಿಯೇ ಇಲ್ಲಿವರೆಗೂ ₹3.5 ಕೋಟಿ ಅಕ್ರಮ ಹಣ ಜಪ್ತಿ ಮಾಡಲಾಗಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಯ ಕಾವು ತೀವ್ರವಾಗಿದೆ. ಇದರ ಮಧ್ಯೆ ಅಚ್ಚುಕಟ್ಟು ಚುನಾವಣೆ ನಡೆಸಲು ಜಿಲ್ಲಾಡಳಿತ ಸಹಿತ ಕಾರ್ಯಪ್ರವೃತ್ತವಾಗಿದೆ. ಚುನಾವಣೆ ಭ್ರಷ್ಟಾಚಾರ ತಡೆಯಲು ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಿ ಎಚ್ಚರ ವಹಿಸಲಾಗಿದೆ. ಹೀಗಾಗಿಯೇ ಇಲ್ಲಿವರೆಗೂ ₹3.5 ಕೋಟಿ ಅಕ್ರಮ ಹಣ ಜಪ್ತಿ ಮಾಡಲಾಗಿದೆ.

ಭೀಮಾತೀರದಲ್ಲಿ ಜನರು ಭಯಬೀಳಬೇಡಿ, ಯಾರಾದರೂ ಹೆದರಿಸಿದರೆ ನೇರವಾಗಿ ನಮ್ಮನ್ನು ಸಂಪರ್ಕಿಸಿ ಎಂದು ಪೊಲೀಸ್ ಇಲಾಖೆ ಮತದಾರರಲ್ಲಿ ಧೈರ್ಯ ತುಂಬಿದೆ. ಲೋಕಸಭಾ ಚುನಾವಣೆಯನ್ನು ಅಚ್ಚುಕಟ್ಟಾಗಿ ನಡೆಸಲು ಜಿಲ್ಲಾಧಿಕಾರಿ ಹಾಗೂ ಖಾಕಿಗಳು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿನ ಕ್ರಿಮಿನಲ್ಸ್‌ಗಳು ಗಡಿಪಾರಾಗಿದ್ದಾರೆ. ರೌಡಿಗಳಿಂದ ಬಾಂಡ್‌ಓವರ್ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಕೆಲವರ ಮೇಲೆ ಪ್ರಕರಣಗಳನ್ನೂ ದಾಖಲಿಸಿಕೊಂಡಿದ್ದಾರೆ.

ಗಡಿಪಾರು, ಬಾಂಡ್‌ ಓವರ್:

ಜಿಲ್ಲೆಯಲ್ಲಿ ಭಾರೀ ಗಲಭೆಯನ್ನುಂಟು ಮಾಡಬಹುದಾದ 28 ಕ್ರಿಮಿನಲ್ಸ್‌ಗಳ ಗಡಿಪಾರಿಗೆ ಪೊಲೀಸ್ ಇಲಾಖೆಯಿಂದ ಶಿಫಾರಸು ಮಾಡಿದ್ದು, ಅದರಲ್ಲಿ ಈಗಾಗಲೇ 19 ಜನರನ್ನು ಗಡಿಪಾರು ಮಾಡಲಾಗಿದೆ. ಅಪರಾಧಿಕ ಹಿನ್ನೆಲೆ ಉಳ್ಳವರು ಹಾಗೂ 1030 ರೌಡಿಶೀಟರ್‌ಗಳು ಸೇರಿ ಒಟ್ಟು 2562 ಜನರ ಮೇಲೆ ಮುಂಜಾಗ್ರತಾ ಕ್ರಮವಾಗಿ 1130 ಪಿಎಆರ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರವರ ಅಪರಾಧಿಕ ಹಿನ್ನೆಲೆ ಮೇಲೆ ಜಿಲ್ಲೆಯಲ್ಲಿನ ರೌಡಿಶೀಟರ್‌ಗಳಿಂದ ₹15 ಲಕ್ಷವರೆಗೂ ಬಾಂಡ್ ಓವರ್ ಶ್ಯೂರಿಟಿ ಮಾಡಿಸಿಕೊಳ್ಳಲಾಗಿದೆ. ಮತದಾರರಿಗೆ ಧೈರ್ಯ ತುಂಬಲು ಜಿಲ್ಲೆಯ ಎಂಟು ವಿಧಾನಸಭಾ ಮತಕ್ಷೇತ್ರಗಳಲ್ಲಿ ರೂಟ್‌ ಮಾರ್ಚ್ ನಡೆಸಲಾಗುತ್ತಿದೆ.

ಮತದಾನ ವೇಳೆ ಇಂಥದ್ದೆ ಪಕ್ಷಕ್ಕೆ ಮತ ಹಾಕುವಂತೆ ಒತ್ತಡ ಹಾಕುವ ಕ್ರಿಮಿನಲ್ಸ್‌ಗಳ ಮೇಲೆಯೂ ಪೊಲೀಸರು ವಿಶೇಷ ಕಣ್ಗಾವಲಿಟ್ಟಿದ್ದಾರೆ. ಇಂಥ ರೌಡಿಗಳ ಹಳೆಯ ಪ್ರಕರಣಗಳನ್ನು ಜಾಲಾಡುತ್ತಿದ್ದು, ಮತದಾರರನ್ನು ಹೆದರಿಸುವವರ ಮಾಹಿತಿ ಸಿಕ್ಕಲ್ಲಿ ಅವರನ್ನೂ ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಪೊಲೀಸರಿಗೆ ತರಬೇತಿ, ಚೆಕ್‌ಪೋಸ್ಟ್ ನಿರ್ಮಾಣ:

ಚುನಾವಣೆಯಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳು, ತಕ್ಷಣ ಕೈಗೊಳ್ಳಬೇಕಾದ ಕರ್ತವ್ಯದ ಬಗ್ಗೆ ಜಿಲ್ಲೆಯ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇನ್ನೊಂದೆಡೆ ಮಹಾರಾಷ್ಟ್ರದ ಗಡಿ ಭಾಗದಲ್ಲಿ11 ಚೆಕ್‌ಪೋಸ್ಟ್ ಹಾಗೂ ಅಂತರ್‌ಜಿಲ್ಲಾ ಸೇರಿ ಒಟ್ಟು 29 ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಿದ್ದು, ನಿರಂತರವಾಗಿ ವಾಹನಗಳ ತಪಾಸಣೆ ನಡೆದಿದೆ.

ಪೊಲೀಸರು ಅಧಿಕಾರಿಗಳ ಬಳಕೆ:

ಚುನಾವಣೆ ಹಿನ್ನೆಲೆ ಪೊಲೀಸ್ ಇಲಾಕೆಯಿಂದ ಜಿಲ್ಲೆಯಾದ್ಯಂತ 8 ಡಿವೈಎಸ್ಪಿ, 26ಸಿಪಿಐ, 90 ಪಿಎಸ್ಐ ಸೇರಿ 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಬಳಕೆ ಮಾಡಲಾಗುತ್ತಿದೆ. ಇನ್ನು ಪಿಆರ್‌ಒ, ಫ್ಲೈಯಿಂಗ್ ಸ್ಕ್ವಾಡ್, ವಿಜಿಲೆನ್ಸ್, ಪೊಲಿಂಗ್ ಆಫೀಸರ್ಸ್ ಸೇರಿ ಜಿಲ್ಲಾಡಳಿತದ ಒಟ್ಟು 10 ಸಾವಿರಕ್ಕೂ ಅಧಿಕ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ.

------------

ಬಾಕ್ಸ್‌

ಕೋಟಿಗಟ್ಟಲೆ ಹಣ ಸೀಜ್, ಕೇಸ್ ದಾಖಲು

ಚೆಕ್‌ಪೋಸ್ಟ್ ಸೇರಿದಂತೆ ವಿವಿಧೆಡೆ ಮಾಹಿತಿ ಮೇರೆಗೆ ಅಕ್ರಮ ಹಣ, ಮದ್ಯ, ಮಾದಕ ವಸ್ತುಗಳ ಸಾಗಾಟಗಳ ಕುರಿತು 118 ಪ್ರಕರಣಗಳನ್ನು ದಾಖಲಿಸಲಾಗಿವೆ. ಬರೋಬ್ಬರಿ ₹3.5 ಕೋಟಿ ಹಣ ಜಪ್ತಿ ಮಾಡಲಾಗಿದೆ. ಅದರಲ್ಲಿ 50 ಅಬಕಾರಿ‌ ಕೇಸ್ ಹಾಗೂ 3 ಡ್ರಗ್ಸ್ ಕೇಸ್ ಗಳನ್ನು ಪತ್ತೆ ಹಚ್ಚಲಾಗಿದೆ. ರಾಜಕಾರಣಿಗಳ ಮೇಲೆ 3 ಮಾದರಿ ನೀತಿ ಸಂಹಿತಿ ಪ್ರಕರಣ‌ ದಾಖಲಿಸಲಾಗಿದೆ.

---------

ಕೋಟ್:

ಶಾಂತಯುತವಾಗಿ ಮತದಾನ ನಡೆಯಬೇಕು. ಜನರು ನಿರ್ಭೀತಿಯಿಂದ ಮತ ಚಲಾಯಿಸಬೇಕು ಎಂಬ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪುಂಡಾಟಿಕರ ಹಾಗೂ ಸಂಶಯ ಬಂದವರ ಮೇಲೆ ಕಣ್ಣಿಟ್ಟಿದ್ದು, ಯಾರಾದರೂ ಬಾಲ ಬಿಚ್ಚಿದರೆ ಅಂತಹವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾದ್ಯಂತ ಖಾಕಿಗಳು 24 X7 ಅಲರ್ಟ್ ಆಗಿದ್ದು, ಯಾರಿಗಾದರೂ ತೊಂದರೆಯಾದರೆ ಹತ್ತಿರದ ಠಾಣೆ ಅಥವಾ 112ಗೆ ಕರೆ ಮಾಡಬಹುದು.

-ಋಷಿಕೇಶ ಸೋನಾವಣೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

--------

ಚುನಾವಣೆ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯಲ್ಲಿ ಒಟ್ಟು 2363 ಪರವಾನಿಗೆ ಪಡೆದ ಶಸ್ತ್ರಾಸ್ತ್ರಗಳ ಪೈಕಿ 2274 ಶಸ್ತ್ರಾಸ್ತ್ರ ಗಳ ಠೇವಣಿ ಪಡೆಯಲಾಗಿದೆ. ಬ್ಯಾಂಕ್ ಹಾಗೂ ಜೀವ ಬೆದರಿಕೆ ಪ್ರಕರಣ ಸೇರಿದಂತೆ ಒಟ್ಟು 54 ಶಸ್ತ್ರಾಸ್ತ್ರ ಗಳಿಗೆ ಮಾತ್ರ ವಿನಾಯತಿ ನೀಡಲಾಗಿದೆ. ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಹಲವು ರಚನಾತ್ಮಕ ಚಟುವಟಿಕೆಗಳನ್ನ ಹಮ್ಮಿಕೊಂಡಿದ್ದು, ಇಲ್ಲಿಯವರೆಗೆ 327 ವಿಭಿನ್ನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. 40 ಮಹಿಳಾ ಮತಗಟ್ಟೆ ಸ್ಥಾಪಿಸಲಾಗುವುದು, 8 ಮತಗಟ್ಟೆಗಳನ್ನು ವಿಶೇಷ ಮಾದರಿ ರೀತಿಯಲ್ಲಿ ಸ್ಥಾಪಿಸಲಾಗುವುದು. ಸೇವಾ ಮತದಾರರಿಗೆ 8 ಮತಗಟ್ಟೆಗಳನ್ನು, ಸ್ಥಾಪಿಸಲಾಗುವುದು.

-ಟಿ.ಭೂಬಾಲನ್, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ.