ಜಾಲಿ ಮೂಡ್‌ನಲ್ಲಿ ಬಿಜೆಪಿ ಅಭ್ಯರ್ಥಿ

| Published : May 09 2024, 01:12 AM IST

ಸಾರಾಂಶ

ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಸುಸ್ತಾಗಿರುವ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಮತದಾನದ ಮರು ದಿನ ಬುಧವಾರ ಜಾಲಿ ಮೂಡ್‌ನಲ್ಲಿದ್ದರು.

ಸಂಸದನಾದ ಮೇಲೆಯೂ ವೈದ್ಯನಾಗಿ ಸೇವೆ: ಡಾ. ಬಸವರಾಜ ಕ್ಯಾವಟರ್ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಳೆದೆರಡು ತಿಂಗಳು ಕಾಲ ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಸುಸ್ತಾಗಿರುವ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಮತದಾನದ ಮರು ದಿನ ಬುಧವಾರ ಜಾಲಿ ಮೂಡ್‌ನಲ್ಲಿದ್ದರು. ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.

ಕೊಪ್ಪಳದ ತಮ್ಮ ನಿವಾಸದಲ್ಲಿ ಬೆಳಗ್ಗೆ ತಡವಾಗಿ ಎದ್ದ ಡಾ. ಬಸವರಾಜ, ಕಳೆದೆರಡು ತಿಂಗಳಿಂದ ಆಸ್ಪತ್ರೆಯತ್ತ ಮುಖ ಮಾಡದೆ ಇರುವುದರಿಂದ ಆಸ್ಪತ್ರೆಗೆ ಹೋಗಬೇಕು ಎನ್ನುವ ಬಗ್ಗೆಯೂ ಚಿಂತಿಸುತ್ತಿದ್ದರು. ಅಮಾವಾಸ್ಯೆ ಇದ್ದಿದ್ದರಿಂದ ಗುರುವಾರದಿಂದ ಮತ್ತೆ ನಗರದಲ್ಲಿರುವ ತಮ್ಮದೇ ಕೆ.ಎಸ್. ಆಸ್ಪತ್ರೆಯಲ್ಲಿ ಎಂದಿನಂತೆ ಕಾರ್ಯನಿರ್ವಹಿಸುವುದಾಗಿ ಹೇಳಿಕೊಂಡರು.

ನಾಲ್ಕಾರು ಗಂಟೆ ಮಾತ್ರ ನಿದ್ರೆ:

ಕಳೆದೆರಡು ತಿಂಗಳಿಂದ ಪ್ರತಿನಿತ್ಯ ನಾಲ್ಕಾರು ಗಂಟೆ ಮಾತ್ರ ನಿದ್ರೆ ಮಾಡಲು ಸಾಧ್ಯವಾಗಿದೆ. ಪ್ರತಿ ನಿತ್ಯ ಒಂದು ಗಂಟೆ ವರೆಗೂ ಎಚ್ಚರ ಇರಬೇಕಾಗಿತ್ತು. ಇದಾದ ಮೇಲೆ ಮಲಗಿ, ಮತ್ತೆ ಬೆಳಗ್ಗೆ 5, 6 ಗಂಟೆಗೆ ಎದ್ದು, ಹೊರಡಬೇಕಾಗುತ್ತಿತ್ತು. ಊಟ, ನಿದ್ರೆ ಅಷ್ಟಕ್ಕಷ್ಟೇ ಎನ್ನುವಂತೆ ಆಗಿತ್ತು. ನಿರಂತರ ಪ್ರಚಾರ ಕಾರ್ಯದಲ್ಲಿ ತೊಡಗಬೇಕಾಯಿತು ಎಂದರು.

ನಾನು ಎಷ್ಟು ಕೆಲಸ ಮಾಡಿದ್ದೇನೋ ಗೊತ್ತಿಲ್ಲ, ಆದರೆ, ಬಿಜೆಪಿ ಕಾರ್ಯಕರ್ತರು, ನಾಯಕರು ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರೆಲ್ಲರೂ ನನ್ನ ಗೆಲುವಿಗಾಗಿ ಶ್ರಮಿಸುವುದನ್ನು ನೋಡಿ, ನಾನು ಸಹ ಬಿಡುವಿಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಬೇಕಾಯಿತು.

ಏನೇ ಆಗಲಿ, ನಮ್ಮ ಗೆಲುವು ಪಕ್ಕಾ, ಅನುಮಾನವೇ ಇಲ್ಲ. ಕೊಪ್ಪಳ ಕ್ಷೇತ್ರದಲ್ಲಿ ಒಂಚೂರು ಲೀಡ್ ಕಡಿಮೆಯಾಗಬಹುದು. ಆದರೆ, ಉಳಿದೆಲ್ಲ ಕ್ಷೇತ್ರಗಳಲ್ಲಿಯೂ ನಮಗೆ ಲೀಡ್ ಬರಲಿದೆ. ಕುಷ್ಟಗಿ, ಯಲಬುರ್ಗಾ, ಗಂಗಾವತಿ, ಸಿರಗುಪ್ಪಾ, ಸಿಂಧನೂರು, ಮಸ್ಕಿ ಸೇರಿದಂತೆ ಏಳು ಕ್ಷೇತ್ರಗಳಲ್ಲಿ ನಮಗೆ ಲೀಡ್ ಬಂದೇ ಬರುತ್ತದೆ. ಹೀಗಾಗಿ, 70-80 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎನ್ನುತ್ತಾರೆ.

ಮಾಜಿ ಸಂಸದ ಸಂಗಣ್ಣ ಕರಡಿ ಪಕ್ಷ ತೊರೆದ ಎರಡು-ಮೂರು ದಿನ ಇರಸು-ಮುರಸು ಆಯಿತು. ಆದರೆ, ಅವರು ಪಕ್ಷ ತೊರೆಯುತ್ತಿದ್ದಂತೆ ಎಲ್ಲರೂ ಒಗ್ಗೂಡಿದರು. ಅವರಿದ್ದಾಗಲೇ ಸಮಸ್ಯೆ ಇತ್ತು ಎನ್ನುವಂತೆ ಕಾರ್ಯಕರ್ತರೆಲ್ಲ ಶಕ್ತಿಮೀರಿ ಶ್ರಮಿಸಿದರು.

ಖುದ್ದು ಮಾಜಿ ಸಚಿವ ಸಿ.ಟಿ. ರವಿ ಅವರೇ ಹೇಳಿದ್ದಾರೆ, ಸಂಗಣ್ಣ ಕರಡಿ ಪಕ್ಷದಲ್ಲಿದ್ದಾಗ ಯಾರನ್ನಾದರೂ ಮಾತನಾಡಿಸುವುದು ಕಷ್ಟವಾಗಿತ್ತು. ಯಾರಾದರೂ ಮನೆಗೆ ಕರೆದರೂ ಹೋಗುವುದಕ್ಕೂ ಆಗುತ್ತಿರಲಿಲ್ಲ. ನಮ್ಮ ಹಿತೈಷಿಗಳಿಗೂ ಸಮಸ್ಯೆ ಇತ್ತು. ಈಗ ಅದ್ಯಾವ ಸಮಸ್ಯೆ ಇಲ್ಲ ಎಂದಿದ್ದಾರೆ. ಅಷ್ಟೇ ಯಾಕೆ, ಪಕ್ಷದ ರಾಜ್ಯಾಧ್ಯಕ್ಷ ವಿಜೇಯಂದ್ರ ಸಹ ಕೊಪ್ಪಳ ಜಿಲ್ಲೆಯ ಅನೇಕ ನಾಯಕರು ಮುಂಚೂಣಿಗೆ ಬರುವಂತೆ ಆಯಿತು ಎಂದಿದ್ದಾರೆ. ಮಹಾಂತೇಶ ಪಾಟೀಲ್ ಈಗ 2ನೇ ಹಂತದ ನಾಯಕರಾಗಿ ಬೆಳೆಯುವಂತೆ ಆಗಿದೆ. ಸಿ.ವಿ. ಚಂದ್ರಶೇಖರ ಅವರಿಗೂ ಬಹಳ ಅನುಕೂಲವೇ ಆಗಿದೆ ಎಂದು ಪಕ್ಷದಲ್ಲಿನ ಬೆಳವಣಿಗೆಯ ಕುರಿತು ಡಾ. ಬಸವರಾಜ ಎಳೆ ಎಳೆಯಾಗಿ ಬಿಡಿಸಿ ಹೇಳಿದರು.

ಎದುರಾಳಿ ಅಭ್ಯರ್ಥಿಗಿಂತಲೂ ಹೆಚ್ಚಾಗಿ ನನ್ನನ್ನು ಸೋಲಿಸಲು ಸಂಗಣ್ಣ ಕರಡಿ ಪ್ರಯತ್ನ ಮಾಡಿದ್ದಾರೆ. ಬಿಜೆಪಿಯ ಅನೇಕರಿಗೆ ಕರೆ ಮಾಡಿ, ಕರೆದಿದ್ದಾರೆ. ಆದರೂ ಅದ್ಯಾವುದನ್ನು ತಲೆಕೆಡಿಸಿಕೊಳ್ಳದೆ ಅನೇಕರು ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ.

ಅನೇಕರು ನನ್ನಿಂದಲೇ ಆಪರೇಶನ್‌ ಮಾಡಿಸಿಕೊಳ್ಳಬೇಕು ಎಂದು ಆಸ್ಪತ್ರೆಯಲ್ಲಿ ದಾಖಲಾಗಿ ಕಾಯುತ್ತಿದ್ದಾರೆ. ಹೀಗಾಗಿ, ವೈದ್ಯ ವೃತ್ತಿಯನ್ನು ಮುಂದುವರಿಸುತ್ತೇನೆ. ಸಂಸದನಾದ ಮೇಲೆಯೂ ವೈದ್ಯ ವೃತ್ತಿ ಮುಂದುವರಿಸುವುದಾಗಿ ಹೇಳಿದರು.

ಜಾಲಿ ಮೂಡ್‌ನಲ್ಲಿ:

ಡಾ. ಬಸವರಾಜ ಜಾಲಿ ಮೂಡ್‌ನಲ್ಲಿ ಇದ್ದರು. ಮತದಾನ ಮುಗಿದ ನಿರುಮ್ಮಳತೆ ಅವರಲ್ಲಿ ಎದ್ದು ಕಾಣುತ್ತಿತ್ತು. ಬೆಳಗ್ಗೆ ಮನೆಯಲ್ಲಿ ''''ಕನ್ನಡಪ್ರಭ'''' ಸೇರಿದಂತೆ ಅನೇಕ ಪತ್ರಿಕೆ ಓದುತ್ತಾ ಬೆಳಗಿನ ಕಾಲ ಕಳೆಯುತ್ತಿದ್ದರು. ಈ ಮಧ್ಯೆ ವಿವಿಧೆಡೆಯಿಂದ ಬರುತ್ತಿದ್ದ ಪೋನ್ ಕಾಲ್‌ಗಳಿಗೆ ಉತ್ತರಿಸುತ್ತಿದ್ದರು. ಮತದಾನ ಪ್ರಮಾಣ ಮತ್ತು ಬಿಜೆಪಿಗೆ ಬಂದಿರುವ ಮತಗಳ ಲೆಕ್ಕಾಚಾರದಲ್ಲಿ ತೊಡಗಿದ್ದರು.

ಮನೆಗೆ ಬಂದವರ ಜತೆಗೆ ಚಹ, ಹಣ್ಣಿನ ರಸ ಹೀರುತ್ತಾ ಏನಾಗಬಹುದು ಎನ್ನುವ ಚರ್ಚೆಯಲ್ಲಿ ತೊಡಗಿದ್ದರು. ಕಾರ್ಯಕರ್ತರು ಬೆಳಗ್ಗೆ 10 ಗಂಟೆಯ ಆನಂತರ ಮನೆಗೆ ಬರಲು ಪ್ರಾರಂಭಿಸಿದಾಗ ಅವರೊಂದಿಗೂ ಚರ್ಚೆ ಮಾಡಿದರು.