ಗೋಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ

| Published : May 09 2024, 01:12 AM IST

ಸಾರಾಂಶ

ಚುನಾವಣೆ ಮುಗಿಯುತ್ತಿದ್ದಂತೆ ಮೊದಲು ಮೂಕಪ್ರಾಣಿಗಳ ವೇದನೆ ಅರಿಯಲು ಶಾಸಕರು ಸಮಯ ಮೀಸಲಾಗಿರಿಸಿದ್ದರು. ಗೋಶಾಲೆಯಲ್ಲಿ ಮತ್ತಷ್ಟು ನೀರಿನ ತೊಟ್ಟಿಗಳು ಆಗಬೇಕು, ಮೇವಿನ ಸಮಸ್ಯೆಯಾಗದಂತೆ ನಿತ್ಯ ಜಾಗೃತಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಮನವರಿಕೆ ಮಾಡಿಕೊಟ್ಟರು.

ಭೀಮಣ್ಣ ಗಜಾಪುರ

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ವಿಜಯನಗರ ಜಿಲ್ಲೆಯಲ್ಲಿರುವ ಏಕೈಕ ಗೋಶಾಲೆಗೆ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಚುನಾವಣೆ ಮಾರನೇ ದಿನವೇ ಭೇಟಿ ನೀಡಿ ಜಾನುವಾರುಗಳಿಗೆ ಮೇವು, ನೀರು ನೆರಳಿನ ಬಗ್ಗೆ ಪರಿಶೀಲನೆ ನಡೆಸಿದರು. ಈ ಮೂಲಕ 1 ತಿಂಗಳಿನಿಂದಲೂ ಚುನಾವಣೆ ಗುಂಗಿನಲ್ಲಿರುವ ಅಧಿಕಾರಿಗಳು ಕರ್ತವ್ಯಕ್ಕೆ ಮರುಳುವಂತೆ ಬಿಸಿ ಮುಟ್ಟಿಸಿದರು.

ಚುನಾವಣೆಯ ಗುಂಗಿನಲ್ಲಿ ಅಧಿಕಾರಿಗಳು ತಾಲೂಕಿನ ಗಂಡಬೊಮ್ಮನಹಳ್ಳಿಯಲ್ಲಿರುವ ಗೋಶಾಲೆಯ ಜಾನುವಾರುಗಳಿಗೆ ಸೂಕ್ತ ನೀರು, ನೆರಳಿನ ವ್ಯವಸ್ಥೆ ಮಾಡಿರಲಿಲ್ಲ. ಚುನಾವಣೆ ನೀತಿ ಸಂಹಿತೆ ಇದ್ದುದರಿಂದ ಶಾಸಕರು ಗೋಶಾಲೆಗೆ ಹೋಗಿರಲಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಮೊದಲು ಮೂಕಪ್ರಾಣಿಗಳ ವೇದನೆ ಅರಿಯಲು ಶಾಸಕರು ಸಮಯ ಮೀಸಲಾಗಿರಿಸಿದ್ದರು. ಗೋಶಾಲೆಯಲ್ಲಿ ಮತ್ತಷ್ಟು ನೀರಿನ ತೊಟ್ಟಿಗಳು ಆಗಬೇಕು, ಮೇವಿನ ಸಮಸ್ಯೆಯಾಗದಂತೆ ನಿತ್ಯ ಜಾಗೃತಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಮನವರಿಕೆ ಮಾಡಿಕೊಟ್ಟರು.

ವಿಜಯನಗರ ಜಿಲ್ಲೆಯಲ್ಲಿ ಕೂಡ್ಲಿಗಿ ತಾಲೂಕಿನ ಮೊದಲ ಗೋಶಾಲೆ ಆರಂಭವಾಗಿರುವುದು ಗಂಡಬೊಮ್ಮನಹಳ್ಳಿಯಲ್ಲಿ ಮಾತ್ರ. ಇಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜಾನುವಾರು ಮೇವು ನೀರಿಗಾಗಿ ಬಂದಿವೆ. ಶೀಘ್ರ ಪೂರ್ಣಗೊಳಿಸಿ

ತಾತ್ಕಾಲಿಕ ಶೆಡ್ ನಾಲ್ಕೈದು ದಿನದಲ್ಲಿ ಪೂರ್ಣಗೊಳಿಸಬೇಕು. ಅಲ್ಲದೆ ಅಗತ್ಯವಿರುವ ನೀರಿನ ತೊಟ್ಟಿಯ ಕಾರ್ಮಗಾರಿ ಆರಂಭಿಸಬೇಕು. ಮಳೆ ಬರುವ ಲಕ್ಷಣ ಕಾಣುತ್ತಿಲ್ಲ. ಅದಕ್ಕೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಪೂರ್ಣ ಪ್ರಮಾಣದ ಗೋಶಾಲೆಯಾಗಿ ಪರಿರ್ವತಿಸಲು ಶ್ರಮಿಸುವೆ.

ಡಾ. ಎನ್.ಟಿ. ಶ್ರೀನಿವಾಸ್, ಶಾಸಕಮೇವು ಬ್ಯಾಂಕ್ ಸ್ಥಾಪನೆ ಮಾಡಿ

ಕೂಡ್ಲಿಗಿ ತಾಲೂಕಿನಲ್ಲಿ ದೇಶಿತಳಿಯ ಹಸುಗಳು, ಜಾನುವಾರುಗಳಿದ್ದು ಮೇವು ನೀರಿಲ್ಲದೇ ಬರ ಬಂದಿದ್ದರಿಂದ ಕೆಲ ರೈತರು ಮಾರಾಟ ಮಾಡಿದ್ದಾರೆ. ಕೆಲವು ಭಾಗಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡಿ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು. ಇದನ್ನು ಮೊದಲ ಆದ್ಯತೆಯಾಗಿ ತೆಗೆದುಕೊಳ್ಳಬೇಕು.

ಓಬಣ್ಣ, ಗುಡೇಕೋಟೆಯ ರೈತ