ದ.ಕ. ಜಿಲ್ಲೆಯ ಪ್ರಭಾವಿ ನಾಯಕ, ಮಾಜಿ ಶಾಸಕ ವಸಂತ ಬಂಗೇರ ನಿಧನ

| Published : May 09 2024, 01:01 AM IST

ದ.ಕ. ಜಿಲ್ಲೆಯ ಪ್ರಭಾವಿ ನಾಯಕ, ಮಾಜಿ ಶಾಸಕ ವಸಂತ ಬಂಗೇರ ನಿಧನ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯಿಂದ ಎರಡು ಬಾರಿ, ಜನತಾದಳದಿಂದ ಒಂದು ಬಾರಿ ಹಾಗೂ ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿದ್ದು ಅವರ ರಾಜಕಾರಣದ ಇತಿಹಾಸವಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ನಾಯಕರಾದ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು (79) ಬುಧವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಸಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.

ಕೇದೆ ಸುಬ್ಬ ಪೂಜಾರಿ - ದೇವಕಿ ದಂಪತಿಯ ಪ್ರಥಮ ಪುತ್ರನಾಗಿ 1946ರ ಜನವರಿ 15ರಂದು ಜನಿಸಿದ್ದರು. ತುರ್ತು ಪರಿಸ್ಥಿತಿಯ ಕರಾಳ ಸಂದರ್ಭದಲ್ಲಿ ಕಾಂಗ್ರೆಸ್‌ ವಿರೋಧಿ ಬಣದ ಸ್ವತಂತ್ರ ಅಭ್ಯರ್ಥಿಯಾಗಿ 1978ರಲ್ಲಿ ಕುವೆಟ್ಟು (ಗುರುವಾಯನಕೆರೆ) ಗ್ರಾ.ಪಂ. ಅಧ್ಯಕ್ಷರಾಗಿ ಅವಿರೋಧ ಆಯ್ಕೆಯೊಂದಿಗೆ ಜನಪ್ರತಿನಿಧಿಯಾಗಿ ರಾಜಕಾರಣ ಪ್ರವೇಶಿಸಿದ್ದರು. 1982 ರಲ್ಲಿ ಬಿಜೆಪಿ ಚಿಹ್ನೆಯಡಿಯಲ್ಲಿ ಶಾಸಕರಾಗಿ ಗೆದ್ದು ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಗೆ ಪ್ರವೇಶಿಸಿದರು. 1985ರಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದರು. ಆಗ ವಿಧಾನ ಸಭೆಯಲ್ಲಿ ಬಿಜೆಪಿಯ ಸದಸ್ಯರಿದ್ದದ್ದು ಇಬ್ಬರೇ. ಒಬ್ಬರು ಬಿ.ಎಸ್. ಯಡಿಯೂರಪ್ಪ ಹಾಗೂ ವಸಂತ ಬಂಗೇರ ಮಾತ್ರ.

1989ರಲ್ಲಿ ಬಿಜೆಪಿಯನ್ನು ಬಿಟ್ಟು ಜನತಾ ದಳದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಸೋತರು. ಮತ್ತೆ 1994ರ ಚುನಾವಣೆಯಲ್ಲಿ ಜನತಾದಳದಿಂದ ಗೆದ್ದರು. ಬಳಿಕದ 1999ರಲ್ಲಿ, 2004ರಲ್ಲಿ ತನ್ನ ಕಿರಿಯ ಸಹೋದರ ಪ್ರಭಾಕರ ಬಂಗೇರ ಅವರ ಎದುರು ಸೋತರು. 2008ರಲ್ಲಿ ಕಾಂಗ್ರೆಸ್‌ ಪಕ್ಷ ಸೇರಿದ ಅವರು ಮತ್ತೆ ಶಾಸಕರಾಗಿ ಆಯ್ಕೆಯಾದರು. 2013ರಲ್ಲೂ ಅವರೇ ಗೆದ್ದು ಐದನೇ ಬಾರಿಗೆ ಶಾಸಕರಾದರು. ಹೀಗೆ ಬಿಜೆಪಿಯಿಂದ ಎರಡು ಬಾರಿ, ಜನತಾದಳದಿಂದ ಒಂದು ಬಾರಿ ಹಾಗೂ ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿದ್ದು ಅವರ ರಾಜಕಾರಣದ ಇತಿಹಾಸವಾಗಿದೆ.

ಮಂಗನ ಕಾಯಿಲೆ ಸಂತ್ರಸ್ತರಿಗೆ ಪರಿಹಾರ ಕೊಡಿಸಿದ್ದರು: ರಾಮಕೃಷ್ಣ ಹೆಗಡೆಯವರು ಬಂಗೇರ ಅವರನ್ನು ನೀಲಿ ಕಣ್ಣಿನ ಹುಡುಗ ಎಂದು ಕರೆಯುತ್ತಿದ್ದರು. 1982ರಲ್ಲಿ ತಾಲೂಕಿನಲ್ಲಿ ಮಂಗನಕಾಯಿಲೆ ಪ್ರಾರಂಭವಾದಾಗ ಬಂಗೇರರು ಕಾಯಿಲೆಗೊಳಗಾದವರ ಮನೆಗಳಿಗೆ ನಿರ್ಭಿತಿಯಿಂದ ಹೋಗಿದ್ದರು. ಈ ಸಂದರ್ಭ ಬಂಗೇರರು ವಿಧಾನ ಸಭೆಯಲ್ಲಿ ಕಾಯಿಲೆಯಿಂದ ಆದ ಕಷ್ಟಗಳನ್ನು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ಮನದಟ್ಟು ಮಾಡಿದರು. ಇದರಿಂದಾಗಿ ಬೆಳ್ತಂಗಡಿಗೆ ಸ್ವತಃ ಮುಖ್ಯಮಂತ್ರಿಯವರೇ ಬಂದು ಪರಿಶೀಲಿಸಿದರು. ಮಂಗನ ಕಾಯಿಲೆಯಿಂದ ತೊಂದರೆಗೊಳಗಾದವರಿಗೆ ಪರಿಹಾರ ಕೊಡಬೇಕು ಎಂದು ಬೇಡಿಕೆಯಿಟ್ಟರು. ಆದರೆ ಹೆಗಡೆಯವರು ಆ ವ್ಯವಸ್ಥೆ ಇಲ್ಲ ಎಂದು ತಿರಸ್ಕರಿಸಿದ್ದರು. ಈ ಸಂದರ್ಭದಲ್ಲಿ ‘ಇಲ್ಲೇ ಬಿರಡೆಯನ್ನು ತೆರೆದು ಉಣುಗನ್ನು ಬಿಡುತ್ತೇನೆ. ಕಾಯಿಲೆ ನಮಗೆಲ್ಲರಿಗೂ ಬರಲಿ’ ಎಂದು ಬಂಗೇರರು ಮಂಗನ ಕಾಯಿಲೆಯ ಉಣುಗನ್ನು ಒಂದು ಬಿರಡೆಯಲ್ಲಿ ತುಂಬಿ ಭದ್ರ ಮಾಡಿಕೊಂಡು ಪ್ಯಾಂಟ್ ಕಿಸೆಯಲ್ಲಿರಿಸಿಕೊಂಡು ವಿಧಾನ ಸಭೆಗೂ ಹೋಗಿದ್ದರು. ಆದರೆ ಆ ಕೆಲಸವನ್ನು ಅವರು ಮಾಡಲಿಲ್ಲ. ಕೊನೆಗೆ ಪತ್ರಿಕಾಗೋಷ್ಠಿಯ ಮೂಲಕ ಮುಖ್ಯಮಂತ್ರಿಯವರ ಗಮನ ಸೆಳೆದು ಪರಿಹಾರ ತರಿಸುವಲ್ಲಿ ಯಶಸ್ವಿಯಾಗಿದ್ದರು. ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಬೆಳ್ತಂಗಡಿಯಿಂದ ಮಂಗಳೂರಿಗೆ ಅವರು ಜಾಥಾವನ್ನು ನಡೆಸಿದ್ದರು.

ತುಳು ಭಾಷೆಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಅವರು ತುಳುವಿನಲ್ಲೇ ಪ್ರಮಾಣವಚನ ಸ್ವೀಕರಿಸಿದ್ದರು. 2006ರಲ್ಲಿ ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಸ್ಥಾಪಿಸಿ ಪದವಿ ಪೂರ್ವ ಹಾಗೂ ಪದವಿ ಕಾಲೇಜನ್ನು ಸ್ಥಾಪಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಶೃಂಗೇರಿ ಶ್ರೀಗಳು ಬಂಗೇರರ ಮನೆಗೇ ಬಂದು ಆಶೀರ್ವದಿಸಿ ಹೋಗಿದ್ದರು. ಇಂದು ಬೆಳ್ತಂಗಡಿಗೆ ಪಾರ್ಥಿವ ಶರೀರ

ಇತ್ತೀಚಿನ ದಿನಗಳಲ್ಲಿ ಬಂಗೇರರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೇ 9ರಂದು ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕರ್ನಾಟಕ ಸರ್ಕಾರ ಬಂಗೇರರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು ಮೃತರ ಗೌರವಾರ್ಥ ಅವರ ಅಂತ್ಯಕ್ರಿಯೆಯನ್ನು ಸಕಲ ಪೋಲಿಸ್ ಗೌರವದೊಂದಿಗೆ ನೆರವೇರಿಸಲು ಆದೇಶಿಸಿದೆ.

---

ಗಣ್ಯರ ಸಂತಾಪ

ಗ್ರಾಮೀಣ ಪರಿಸರದ ಓರ್ವ ವ್ಯಕ್ತಿ ಸ್ವಪ್ರಯತ್ನದಿಂದ, ಸಾಮಾಜಿಕ ಸೇವೆಯಿಂದ ಜನ ಸಂಘಟನೆಯಿಂದ ಜನಪ್ರಿಯರಾಗಿ, ರಾಜಕೀಯದ ಗಣ್ಯ ವ್ಯಕ್ತಿಯಾಗಿದ್ದ ಮಾಜಿ ಶಾಸಕ ವಸಂತ ಬಂಗೇರ ಅವರ ನಿಧನ ತೀವ್ರ ದುಃಖ ತಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಕಂಬನಿ ಮಿಡಿದಿದ್ದಾರೆ.

---

ವಸಂತ ಬಂಗೇರ ಅವರ ನಿಧನಕ್ಕೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ. ಬಂಗೇರರವರು ಸ್ವರ್ಗಸ್ಥರಾದ ವಿಚಾರ ತಿಳಿದು ವಿಷಾದವಾಯಿತು. ಅವರು ನಮ್ಮ ತಾಲೂಕಿನ ಶಾಸಕರಾಗಿ ಜನಸ್ನೇಹಿಯಾಗಿದ್ದರು. ಸಾಮಾನ್ಯ ಜನರೊಳಗೆ ಹಾಗೂ ಕುಟುಂಬದಲ್ಲಿ ವಿಚಾರ- ಬೇಧಗಳು ಬಂದಾಗ ನಮ್ಮ ತುಳುನಾಡಿನಲ್ಲಿ ಹೇಳುವಂತೆ ಪಂಚಾತಿಕೆ ಅಂದರೆ ಒಗ್ಗೂಡಿಸುವಿಕೆಗೆ ಪ್ರಯತ್ನ ಮಾಡುತ್ತಿದ್ದರು. ಅವರ ಈ ಹವ್ಯಾಸದಿಂದ ಅವರಿಗೆ ಎಷ್ಟೇ ಕಷ್ಟವಾದರೂ ಸಮಾಜದ ಅನೇಕ ಕುಟುಂಬಗಳನ್ನು ಒಗ್ಗೂಡಿಸಿ ಸಮಸ್ಯೆ ಪರಿಹಾರ ಮಾಡುತ್ತಿದ್ದರು. ಅವರ ಈ ಸಾಧನೆಯಿಂದಾಗಿ ಸಮಾಜದಲ್ಲಿರುವ ಬಿರುಕು ಬಿಟ್ಟ ಅನೇಕ ಕುಟುಂಬಗಳು ಒಟ್ಟಾಗುತ್ತಿದ್ದವು.ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಅವರು ಪ್ರಾರ್ಥಿಸಿದ್ದಾರೆ.----

ಕನ್ಯಾಡಿ ಶ್ರಿಗಳಿಂದ ಸಂತಾಪ

ಸಮಾಜ ನೊಂದವರ ಪಾಲಿಗೆ ದ್ವನಿಯಾಗಿ ನಿಂತ ಐದು ಭಾರಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರಾಗಿದ್ದ ಮಾಜಿ ಶಾಸಕ ಕೆ ವಸಂತ ಬಂಗೇರರವರು ನಿಧನರಾಗಿದ್ದು ಇಡೀ ಸಮಾಜಕ್ಕೆ ನೋವುಂಟು ಮಾಡಿದೆ.ಕನ್ಯಾಡಿ ಶ್ರಿ ರಾಮಕ್ಷೇತ್ರದ ಟ್ರಷ್ಟಿಯಾಗಿ ಕ್ಷೇತ್ರದ ಬೆಳವಣಿಗೆ ಶಕ್ತಿಯಾದವರು. ಇವರ ಸಾವಿನ ಸುದ್ದಿಯಿಂದ ನೋವುಂಟಾಗಿದೆ ಎಂದು ಅಯೋಧ್ಯೆ ಪ್ರವಾಸದಲ್ಲಿರುವ ಕನ್ಯಾಡಿ ಶ್ರಿ ರಾಮ ಕ್ಷೇತ್ರದ ಪೀಠಾಧೀಶರಾದ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

---ಶಾಸಕ ಹರೀಶ್‌ ಪೂಂಜ ಸಂತಾಪ

ವಸಂತ ಬಂಗೇರರ ನಿಧನಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಪ್ರಮುಖ ಮೂರು ರಾಜಕೀಯ ಪಕ್ಷಗಳಡಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದ ಜಿಲ್ಲೆಯ ಏಕೈಕ ರಾಜಕಾರಣಿ ವಸಂತ ಬಂಗೇರರಾಗಿದ್ದು, ಪಕ್ಷಾತೀತವಾಗಿ ಜನತೆ ಅವರನ್ನು ಬೆಂಬಲಿಸಿದುದರ ನಿದರ್ಶನವಾಗಿದೆ. 1983- 85ರ ಅವಧಿಯಲ್ಲಿ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳ ಜನತೆ ಮಂಗನ ಕಾಯಿಲೆಯಿಂದ ತತ್ತರಿಸಿದಾಗ ಮಿಡಿದ ಅವರ ಸಹೃದಯಿ ಮನ. ಅವರ ನಿಧನ ವೈಯಕ್ತಿಕವಾಗಿಯೂ ತಾಲೂಕಿನ ಜನತೆಗೂ ಅಪಾರ ದುಃಖವನ್ನು ತಂದಿದ್ದು, ಮೃತರ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ ಎಂದು ಶಾಸಕ ಪೂಂಜ ನುಡಿನಮನ ಸಲ್ಲಿಸಿದ್ದಾರೆ.