ಬಿಸಿಲು ಲೆಕ್ಕಿಸದೆ ಉತ್ಸಾಹದಿಂದ ಮತದಾನ

| Published : May 09 2024, 01:01 AM IST

ಸಾರಾಂಶ

ಲೋಕಸಭಾ ಚುನಾವಣೆಯ ಮತದಾನ ತಾಲೂಕಿನಲ್ಲಿ ಬಿರುಸಿನಿಂದ ಜರುಗಿತು. ಗ್ರಾಮೀಣ ಪ್ರದೇಶದಲ್ಲಿ ಜನರು ಬಿಸಲು ಲೆಕ್ಕಿಸದೆ ತೆರಳಿ ಮತದಾನ ಮಾಡಿದರು.

ಹಕ್ಕು ಚಲಾಯಿಸಿದ ವಿಶೇಷಚೇತನರು, ಮಂಗಳಮುಖಿಯರು, ಶತಾಯುಷಿಗಳು । ಪ್ರಥಮ ಬಾರಿಗೆ ಮತದಾನ ಮಾಡಿ ಸಂತಸ ಪಟ್ಟ ಯುವಕರುಕನ್ನಡಪ್ರಭ ವಾರ್ತೆ ಕುಕನೂರು

ಲೋಕಸಭಾ ಚುನಾವಣೆಯ ಮತದಾನ ತಾಲೂಕಿನಲ್ಲಿ ಬಿರುಸಿನಿಂದ ಜರುಗಿತು. ಗ್ರಾಮೀಣ ಪ್ರದೇಶದಲ್ಲಿ ಜನರು ಬಿಸಲು ಲೆಕ್ಕಿಸದೆ ತೆರಳಿ ಮತದಾನ ಮಾಡಿದರು.

ವಿಶೇಷ ಚೇತನರು, ಹಿರಿಯ ನಾಗರಿಕರು, ಮಹಿಳೆಯರು, ಯುವ ಮತದಾರರು ಹೀಗೆ ಅನೇಕರು ತಮ್ಮ ಹಕನ್ನು ಚಲಾವಣೆ ಮಾಡಿದರು.

ಮಂಗಳಮುಖಿ ಮತದಾನ:ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಮಂಗಳಮುಖಿ ಫಕೀರಪ್ಪ ಕನಕಪ್ಪ ಕದ್ರಳ್ಳಿ ಮತದಾನ ಮಾಡಿದರು. ಎಲ್ಲರಂತೆ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿ ಇತರರಿಗೆ ಪ್ರೇರಣೆಯಾದರು. ಮತದಾನದಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ನರೇಗಾ ಯೋಜನೆಯ ಕಾಮಗಾರಿಯಲ್ಲಿ ಪಾಲ್ಗೊಳ್ಳಲು ವಿಶೇಷ ಜಾಬ್ ಕಾರ್ಡ್‌ ಪಡೆದಿದ್ದಾರೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು, ಗಂಡು ಹೆಣ್ಣು ಭೇದವಿಲ್ಲದೇ ಎಲ್ಲರೂ ಮತದಾನ ಮಾಡಬೇಕು. ನನ್ನಂತ ಮಂಗಳಮುಖಿಯರೂ ಸಹ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಮಂಗಳಮುಖಿ ಫಕೀರಪ್ಪ ಕದ್ರಳ್ಳಿ ಅನಿಸಿಕೆ ವ್ಯಕ್ತಪಡಿಸಿದರು.

ಮೊದಲ ಸಲ ಮತದಾನ:

ಮೊದಲ ಸಲ ಮತದಾನ ಮಾಡಿರುವುದು ನನಗೆ ಖುಷಿ ನೀಡಿದೆ ಎಂದು ಬಿಎಸ್ಸಿ ಮೊದಲ ವರ್ಷ ವ್ಯಾಸಂಗ ಮಾಡುತ್ತಿರುವ ಲಕ್ಷ್ಮೀ ರಾಮಣ್ಣ ಕೌದಿ ಹೇಳಿದರು.

ತಾಲೂಕಿನ ಇಟಗಿ ಗ್ರಾಮದಲ್ಲಿ ಹೆತ್ತವರೊಡನೆ ಮೊದಲ ಸಲ ಮತದಾನ ಮಾಡಿ ಸಂತಸ ಹಂಚಿಕೊಂಡು, ಮತದಾನ ಒಂದು ಪವಿತ್ರ ಹಕ್ಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅದು ಸಾಕಾರಗೊಳಿಸುತ್ತದೆ. ಮೊದಲ ಸಲ ಮತದಾನ ಮಾಡಿರುವ ಈ ದಿನ ಎಂದಿಗೂ ಮರೆಯಲಾಗದು. ದೇಶ ಸೇವೆಗೆ ನನ್ನ ಮತದಾನ ಸಹ ಒಂದು ಶಕ್ತಿಯಾಗಲಿದೆ ಎಂಬ ಭಾವ ನನ್ನಲ್ಲಿ ಮೂಡಿದೆ ಎಂದಳು.

ಯುವತಿ ಪಾಲಕರಾದ ರಾಮಣ್ಣ ಕೌದಿ, ಕಾವೇರಿ ರಾಮಣ್ಣ ಕೌದಿ, ಪ್ರಮುಖರಾದ ಶಿವಕುಮಾರ ಗುಳಗಣ್ಣವರ್, ಬಸವರೆಡ್ಡಿ ಆಡೂರು ಇದ್ದರು.

ಶತಾಯುಷಿ ಮತದಾನ:

ತಾಲೂಕಿನ ಕುದರಿಮೋತಿ ಗ್ರಾಮದ 105 ವರ್ಷದ ‌ಶತಾಯುಷಿ ನೀಲಕಂಠಯ್ಯ ಹಿರೇಮಠ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.

ನೀಲಕಂಠಯ್ಯ ಹಿರೇಮಠ ಸಂಬಂಧಿಯೊಬ್ಬರ ಸಹಾಯದೊಂದಿಗೆ ಬಂದು ಮತ ಚಲಾಯಿಸಿದರು. ಮನೆಯಲ್ಲಿ ಮತದಾನಕ್ಕೆ ಅವಕಾಶ ಇದ್ದರೂ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಇಳಿ ವಯಸ್ಸಿನಲ್ಲಿ ಕೂಡಾ ಬಂದು ಮತದಾನ ಮಾಡಿ ಎಲ್ಲರಿಗೂ ಆದರ್ಶರಾದರು.

ಮತದಾನ ಮಾಡಿದ ವಿಶೇಷಚೇತನರು:

ತಾಲೂಕಿನ ನಾನಾ ಗ್ರಾಮದಲ್ಲಿ ವಿಶೇಷಚೇತನರು ವೀಲ್‌ಚೇರಿನಲ್ಲಿ ಬಂದು ಮತದಾನ ಮಾಡಿದರು. ಮತಗಟ್ಟೆ ಸಿಬ್ಬಂದಿ ವಿಶೇಷಚೇತನರಿಗೆ ವ್ಹೀಲ್ ಚೇರ್ ವ್ಯವಸ್ಥೆ ಕಲ್ಪಿಸಿದ್ದರು. ಅಂಧರು ಬೂತ್ ಕನ್ನಡಿ ಮೂಲಕ ಮತದಾನ ಮಾಡಿದರು.