ರೈತ ವಿರೋಧಿ ನೀತಿ, 13ರಂದು ಬ್ಯಾಡಗಿಯಲ್ಲಿ ಪ್ರತಿಭಟನೆ

| Published : May 09 2024, 01:06 AM IST

ಸಾರಾಂಶ

ರೈತ ವಿರೋಧಿ ಧೋರಣೆ ತಳೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮೇ 13ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

ಬ್ಯಾಡಗಿ: ಕೇಂದ್ರ ಸರ್ಕಾರ ರೈತರ ಖಾತೆಗೆ ಬರ ಪರಿಹಾರ ವಿತರಿಸಿದ್ದು ಸ್ವಾಗತಾರ್ಹ. ಆದರೆ ಸದರಿ ಪರಿಹಾರದ ಮೊತ್ತ ತಮ್ಮದೇ ಎನ್ನುವಂತೆ ಬೀಗುತ್ತಿರುವ ರಾಜ್ಯ ಸರ್ಕಾರ ತನ್ನ ಪಾಲಿನ (ಎಸ್.ಡಿ.ಆರ್.ಎಫ್.) ಬಿಡಿಗಾಸನ್ನು ಬಿಡುಗಡೆ ಮಾಡದೇ ರೈತರಿಗೆ ಮೋಸ ಎಸಗಿದೆ. ರೈತ ವಿರೋಧಿ ಧೋರಣೆ ತಳೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮೇ 13ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

ಪಟ್ಟಣದ ರೈತ ಸಂಘದ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಷ್ಟೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್.ಡಿ.ಆರ್.ಎಫ್.) ಪ್ರತಿ ಎಕರೆಗೆ ರು. 3400 ರೈತರ ಖಾತೆಗೆ ಈಗಷ್ಟೇ ಬರುತ್ತಿದೆ. ಆದರೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (ಎಸ್.ಡಿ.ಆರ್.ಎಫ್.) ಪ್ರತಿ ಎಕರೆಗೆ ರು. 3400 ನೀಡಬೇಕಾಗಿದ್ದು, ಈ ಕುರಿತು ಚಕಾರವೆತ್ತದಿರುವ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದರು.

ಗಂಗಣ್ಣ ಎಲಿ ಮಾತನಾಡಿ, ಕಳೆದೊಂದು ವರ್ಷದಿಂದ ಮಳೆಯಾಗದೇ ಮುಂದೇನು? ಎಂಬ ಚಿಂತೆಯಲ್ಲಿ ರೈತರಿದ್ದಾರೆ. ಅಷ್ಟಕ್ಕೂ ಈ ಹಿಂದೆ ಮಾಡಿದ ಸಾಲವನ್ನು ತೀರಿಸಲಾಗದೇ ಒಬ್ಬೊಬ್ಬರಾಗಿ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಈವರೆಗೂ ಮಳೆಯಾಗದೇ ಸಂಕಷ್ಟದಲ್ಲಿದ್ದೇವೆ, ಇದೇ ಸ್ಥಿತಿ ಮುಂದುವರೆದಲ್ಲಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಕಾಲ ದೂರವಿಲ್ಲ. ಕೂಡಲೇ ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರದ ಹಣವನ್ನು ರೈತರ ಖಾತೆಗೆ ಹಾಕುವಂತೆ ಆಗ್ರಹಿಸಿದರು.

ಕಿರಣ ಗಡಿಗೋಳ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ಬಾರಿಯೂ ರೈತರು ಹೋರಾಟದ ನಡೆಸಿದ ಬಳಿಕವಷ್ಟೇ ಹಣ ಬಿಡುಗಡೆ ಮಾಡುತ್ತಿದೆ, ದೇಶಕ್ಕೆ ಅನ್ನ ಹಾಕುವ ರೈತರ ಪರಿಸ್ಥಿತಿ ಹೀಗಿರುವಾಗ ಇನ್ನಿತರ ಗೋಳು ಕೇಳೋರ್ಯಾರು, ಇಂತಹ ಬೇಜವಾಬ್ದಾರಿ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಹೋರಾಟದ ಮೂಲಕ ಬರಗಾಲದ ಅನುಭವ ಮಾಡಿಸದೇ ಬಿಡುವುದಿಲ್ಲ ಎಂದು ಎಚ್ಚರಿಸಿದರು.ಪರಿಹಾರಕ್ಕಾಗಿ ಹೈಕೋರ್ಟ ಮೆಟ್ಟಿಲು:ಪ್ರಕಾಶ ಸಿದ್ದಪ್ಪನವರ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 1.98 ಲಕ್ಷ ರೈತ ಫಲಾನುಭವಿಗಳಿದ್ದಾರೆ. ಆದರೆ ಯಾರೊಬ್ಬರಿಗೂ ರಾಜ್ಯ ವಿಪತ್ತು ಪರಿಹಾರ (ಎಸ್.ಡಿ.ಆರ್.ಎಫ್.) ನಿಧಿಯಿಂದ ಬರ ಪರಿಹಾರದ ಹಣ ಬಂದಿಲ್ಲ ಹೀಗಾಗಿ ರಾಜ್ಯ ಸರ್ಕಾರದ ಪಾಲಿನ ಹಣಕ್ಕಾಗಿ ರೈತ ಸಂಘವು ಹೈಕೋರ್ಟ್‌ ಮೆಟ್ಟಿಲೇರಲು ಚಿಂತನೆ ನಡೆಸಿದ್ದು, ಅದಕ್ಕೂ ಮುನ್ನ ಮೇ 13ರಂದು ರೈತರ ಬೃಹತ್ ಪ್ರತಿಭಟನೆಯೊಂದಿಗೆ ಮನವಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ಚಿಕ್ಕಪ್ಪ ಛತ್ರದ, ಜಾನ್ ಪುನೀತ್, ಮೌನೇಶ ಕಮ್ಮಾರ, ಶಂಕರ ಮರಗಾಲ, ಸಂಜೀವ ಬಿಷ್ಟಂಡನವರ, ಬಸವರಾಜ ಕುಮ್ಮೂರ, ಚಂದ್ರಪ್ಪ ದೇಸಾಯಿ, ಪ್ರವೀಣ ಹೊಸಗೌಡ್ರ, ಮಲಕಪ್ಪ ಶಿಡೇನೂರ ಹಾಗೂ ಇನ್ನಿತರರಿದ್ದರು.