ಇಂದು ಅಕ್ಷಯ ತೃತೀಯ: ಚಿನ್ನ ಖರೀದಿಗೆ ನಗರದ ಜನ ಸಜ್ಜು

| Published : May 10 2024, 01:33 AM IST

ಸಾರಾಂಶ

ಅಕ್ಷಯ ತೃತೀಯದ ಹಬ್ಬಕ್ಕೆ ನಗರ ಸಜ್ಜಾಗಿದ್ದು, ಹಬ್ಬದ ಮುನ್ನಾದಿನವೇ ಗ್ರಾಹಕರು ಮುಂಗಡವಾಗಿ ಚಿನ್ನ ಖರೀದಿಸಿದ್ದು, ಶುಕ್ರವಾರ ಮನೆಯಲ್ಲಿ ಪೂಜಿಸಲು ಅಣಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಕ್ಷಯ ತೃತೀಯದ ಹಬ್ಬಕ್ಕೆ ನಗರ ಸಜ್ಜಾಗಿದ್ದು, ಹಬ್ಬದ ಮುನ್ನಾದಿನವೇ ಗ್ರಾಹಕರು ಮುಂಗಡವಾಗಿ ಚಿನ್ನ ಖರೀದಿಸಿದ್ದು, ಶುಕ್ರವಾರ ಮನೆಯಲ್ಲಿ ಪೂಜಿಸಲು ಅಣಿಯಾಗಿದ್ದಾರೆ.

ಮೊದಲೇ ಮುಂಗಡ ಬುಕ್ಕಿಂಗ್‌ ಮಾಡಿದ್ದವರು ಶುಕ್ರವಾರ ಚಿನ್ನವನ್ನು ಖರೀದಿಸಲಿದ್ದಾರೆ. ದರ ಹೆಚ್ಚಳದ ನಡುವೆಯೂ ಕಳೆದ ವರ್ಷಕ್ಕಿಂತ ಶೇ.20ಕ್ಕಿಂತಲೂ ಅಧಿಕ ಆಭರಣ ಖರೀದಿ ಆಗಲಿದೆ ಎಂದು ವರ್ತಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಭರಣ ಮಳಿಗೆಗಳು ಗ್ರಾಹಕರನ್ನು ಸೆಳೆಯಲು ಹೆಚ್ಚು ಖರೀದಿಗೆ ರಿಯಾಯಿತಿ, ಉಚಿತ ಚಿನ್ನ ಅಥವಾ ಬೆಳ್ಳಿ, ಮೇಕಿಂಗ್ ಚಾರ್ಜ್‌ನಿಂದ ವಿನಾಯಿತಿಯಂತಹ ಕೊಡುಗೆ ಪ್ರಕಟಿಸಿವೆ. ಹಬ್ಬಕ್ಕಾಗಿ ಆಭರಣ ಮಳಿಗೆಗಳು ಅದಕ್ಕಾಗಿಯೇ ಪ್ರತ್ಯೇಕವಾಗಿ 1 ಗ್ರಾಂ, 5 ಗ್ರಾಂ, 10 ಗ್ರಾಂ ಹಾಗೂ ಅದಕ್ಕೂ ಹೆಚ್ಚಿನ ತೂಕದ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್‌ನ ಚಿನ್ನದ ನಾಣ್ಯಗಳನ್ನು ಸಿದ್ಧಪಡಿಸಿಟ್ಟುಕೊಂಡಿವೆ. ಗ್ರಾಹಕರನ್ನು ಸೆಳೆಯಲು ಆಕರ್ಷಕ ವಿನ್ಯಾಸಗಳ ಆಭರಣಗಳನ್ನು ತರಿಸಲಾಗಿದೆ ಎಂದು ವರ್ತಕರು ಹೇಳಿದರು.

ಬಾಕ್ಸ್...

ಉಡುಗೊರೆಯಾಗಿ ಬಾಲರಾಮ

ಅಕ್ಷಯ ತೃತೀಯ ಪ್ರಯುಕ್ತ ₹50,000 ಮೇಲ್ಪಟ್ಟು ಚಿನ್ನಾಭರಣ ಖರೀದಿಸಿದ ಗ್ರಾಹಕರಿಗೆ ಅಯೋಧ್ಯೆಯ ಶ್ರೀ ಬಾಲರಾಮ ಸನ್ನಿಧಾನದಲ್ಲಿ ಪೂಜಿಸಲ್ಪಟ್ಟ ಬೆಳ್ಳಿ ವಿಗ್ರಹವನ್ನು ಉಡುಗೊರೆಯಾಗಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಕಡೆಯಿಂದ ನೀಡಲಾಗುತ್ತದೆ. ಅಕ್ಷಯ ತೃತೀಯದಂದು ಬೆಳಗ್ಗೆ 7 ರಿಂದ ಸಂಜೆ 11ರ ವರೆಗೂ ಎಲ್ಲ ಶಾಖೆಗಳು ತೆರೆದಿರುತ್ತದೆ. ಕಾರ್ಯಕ್ರಮಕ್ಕೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ರಾಯಬಾರಿ ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಆಗಮಿಸಲಿದ್ದಾರೆ ಎಂದು ಸಾಯಿ ಗೋಲ್ಡ್ ಪ್ಯಾಲೇಸ್‌ನ ಟಿ.ಎ.ಶರವಣ ತಿಳಿಸಿದ್ದಾರೆ.ಚಿನ್ನದರ (ಗುರುವಾರ)22 ಕ್ಯಾರೆಟ್‌₹66,150

24 ಕ್ಯಾರೆಟ್‌₹72,160