ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಅಂಕಿತಾ ಕೊಣ್ಣೂರ ಟಾಪರ್‌

| Published : May 10 2024, 01:32 AM IST

ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಅಂಕಿತಾ ಕೊಣ್ಣೂರ ಟಾಪರ್‌
Share this Article
  • FB
  • TW
  • Linkdin
  • Email

ಸಾರಾಂಶ

2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮುಧೋಳ

2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವಜ್ಜರಮಟ್ಟಿ ಗ್ರಾಮದ ನಿವಾಸಿ ಅಂಕಿತಾ ಬಸಪ್ಪ ಕೊಣ್ಣೂರ ಆರಂಭದಿಂದಲೂ ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದವರು. ಮೊರಾರ್ಜಿ ವಸತಿ ಶಾಲೆಯಲ್ಲಿ ಕಲಿತು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ವಿದ್ಯಾರ್ಥಿನಿ ಅಂಕಿತಾ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾನಾ ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಲ್ಲದೆ, ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸಿದ್ದಾರೆ.

ಬಡ, ಕೃಷಿಕ ಕುಟುಂಬದಲ್ಲಿ ಜನಿಸಿದ ಅಂಕಿತಾ ಪ್ರಾಥಮಿಕ ಹಂತದಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿ. ನಿರಂತರ ಅಧ್ಯಯನ ಹಾಗೂ ಶಿಕ್ಷಕರ ಮಾರ್ಗದರ್ಶನ, ಜತೆಗೆ ತಾಯಿ, ತಂದೆ ಹಾಗೂ ಗುರು-ಹಿರಿಯರ ಆಶೀರ್ವಾದ ನನ್ನ ಸಾಧನೆಗೆ ಸ್ಫೂರ್ತಿ ಎಂದು ಸಂತಸ ವ್ಯಕ್ತಪಡಿಸಿದ್ದಾಳೆ. ಈಕೆಯ ತಂದೆ - ತಾಯಿ ಕೃಷಿಯನ್ನೇ ನಂಬಿಕೊಂಡಿದ್ದು, ಅದರಲ್ಲಿಯೇ ಅವರ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

ಮೊಬೈಲ್‌ ಬ್ಯಾನ್‌ ಮಾಡಿದ್ದು ಓದಿಗೆ ನೆರವಾಯ್ತು:

ಹಿಂದಿನ ಪ್ರಶ್ನೇ ಪತ್ರಿಕೆಗಳನ್ನು ಬಿಡಿಸುವುದು, ಅರ್ಥವಾಗದ ಪ್ರಶ್ನೆಪತ್ರಿಕೆಗಳಿಗೆ ಶಿಕ್ಷಕರಿಂದ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದೆ. ಹಾಸ್ಟೆಲ್‌ನಲ್ಲಿ ಮೊಬೈಲ್ ಬ್ಯಾನ್ ಮಾಡಿದ್ದರಿಂದ ಓದಲು ಮತ್ತಷ್ಟು ಸಮಯ ಸಿಕ್ಕಿತು. ಓದಿರುವ ಎಲ್ಲ ವಿಷಯಗಳನ್ನು ಮನನ ಮಾಡಿಕೊಳ್ಳುತ್ತಿದ್ದೆ. ಹೀಗಾಗಿ ಪರೀಕ್ಷೆ ಬರೆಯಲು ನನಗೆ ಬಹಳ ಸರಳವಾಯಿತು. ಪರೀಕ್ಷೆ ಎದುರಿಸುವುದಕ್ಕೆ ಅಷ್ಟೇನೂ ಭಯ ಅನಿಸಲಿಲ್ಲ. ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು ಐಎಎಸ್ ಅಧಿಕಾರಿ ಆಗಬೇಕೆಂಬ ಕನಸು ಹೊಂದಿದ್ದೇನೆ ಎಂದು ತನ್ನ ಮುಂದಿನ ಗುರಿಯನ್ನು ಬಿಚ್ಚಿಟ್ಟಳು ಅಂಕಿತಾ.

ಅಂಕಿತಾ 1ರಿಂದ 5ನೇ ತರಗತಿಯ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಮುಗಿಸಿ ಬಳಿಕ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗೆ ಪ್ರೌಢಶಿಕ್ಷಣ ಪಡೆದಿದ್ದಾಳೆ.

ಜಿಲ್ಲಾಧಿಕಾರಿ ಅಭಿನಂದನೆ:

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯ ಟಾಪರ್‌ ಆದ ವಿದ್ಯಾರ್ಥಿನಿಯ ಸಾಧನೆಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಾಗೂ ಜಿಪಂ ಸಿಇಒ ಶಶಿಧರ ಕುರೇರ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಜಿಲ್ಲೆಗೆ ಪ್ರಥಮ ರ್‍ಯಾಂಕ್ ಬಂದಿದ್ದಕ್ಕೆ ವಿದ್ಯಾರ್ಥಿನಿಯನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಅಂಕಿತಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಪ್ರತಿಷ್ಠೆ ಹೆಚ್ಚಿಸಿದ್ದು, ಅವಳ ಈ ಸಾಧನೆಗೆ ಜಿಲ್ಲಾಡಳಿತ ಪರವಾಗಿ ಹುತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಅಂಕಿತಾ ಎಲ್ಲ ಮಕ್ಕಳಿಗೆ ಮಾದರಿಯಾಗಿದ್ದು, ಅವಳ ಸಾಧನೆ 8ನೇ ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದರು.

ಅವಳ ಮುಂದಿನ ಭವಿಷ್ಯ ಹಾಗೂ ಉತ್ತಮ ಶಿಕ್ಷಣಕ್ಕಾಗಿ ಜಿಲ್ಲಾಡಳಿತ ಎಲ್ಲ ರೀತಿಯ ಸಹಕಾರ ನೀಡಲಿದೆ. ಅವಳ ಮುಂದಿನ ವಿದ್ಯಾಭ್ಯಾಸ ಕೂಡ ಇದೇ ರೀತಿ ಉನ್ನತವಾಗಿರಲಿ. ಅವಳ ಕನಸು ನನಸು ಮಾಡಲು ಪ್ರಯತ್ನ ಇದೇ ರೀತಿ ಸಾಗಲಿ. ಇನ್ನುಳಿದ ವಿದ್ಯಾರ್ಥಿಗಳು ಕೂಡ ಅವಳ ಸಾಧನೆಯನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಸಾಧನೆ ಮಾಡಿ ಉನ್ನತ ಮಟ್ಟದ ಸ್ಥಾನ ಪಡೆಯಬೇಕೆಂದು ಆಶಿಸಿದರು. ಜಿಲ್ಲೆಗೆ ಉತ್ತಮ ಫಲಿತಾಂಶ ತಂದುಕೊಡುವಲ್ಲಿ ಶ್ರಮಿಸಿದ ಅಧಿಕಾರಿ ಹಾಗೂ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದ ಡಿಸಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಧೃತಿಗೆಡದೇ ಬರುವ ಪರೀಕ್ಷೆ-2ರಲ್ಲಿ ಉತ್ತಮ ಸಾಧನೆ ಮಾಡಲು ತಿಳಿಸಿದರು.

ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಶಿಕ್ಷಣ ಇಲಾಖೆಯವರು ಅಂಕಿತಾ ಕೊಣ್ಣೂರ ಅವಳಿಗೆ ಸಿಹಿ ತಿನಿಸಿ ಅಭಿನಂದಿಸಿದರು.

ಅಂಕಿತಾ ಬಸಪ್ಪ ಕೊಣ್ಣೂರ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು, ತಾಲೂಕು ಆಡಳಿತ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ವಿವಿಧ ಸಂಘಟನೆಗಳ ಪ್ರಮುಖರು, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಮನೆಗೆ ತೆರಳಿ ಹೂಮಾಲೆ ಹಾಕಿ, ಶಾಲು ಹೊದಿಸಿ, ಸಿಹಿ, ತಿನಿಸಿ ಸನ್ಮಾನಿಸಿ ಅಭಿನಂದಿಸಿದರು.ಹಿಂದಿನ ಪ್ರಶ್ನೇ ಪತ್ರಿಕೆಗಳನ್ನು ಬಿಡಿಸುವುದು, ಅರ್ಥವಾಗದ ಪ್ರಶ್ನೆಪತ್ರಿಕೆಗಳಿಗೆ ಶಿಕ್ಷಕರಿಂದ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದೆ. ಹಾಸ್ಟೆಲ್‌ನಲ್ಲಿ ಮೊಬೈಲ್ ಬ್ಯಾನ್ ಮಾಡಿದ್ದರಿಂದ ಓದಲು ಮತ್ತಷ್ಟು ಸಮಯ ಸಿಕ್ಕಿತು. ಓದಿರುವ ಎಲ್ಲ ವಿಷಯಗಳನ್ನು ಮನನ ಮಾಡಿಕೊಳ್ಳುತ್ತಿದ್ದೆ. ಹೀಗಾಗಿ ಪರೀಕ್ಷೆ ಬರೆಯಲು ನನಗೆ ಬಹಳ ಸರಳವಾಯಿತು.

- ಅಂಕಿತಾ ಕೊಣ್ಣೂರ, ಎಸ್ಸೆಸ್ಸೆಲ್ಸಿ ಟಾಪರ್‌