ಅಕ್ಕಮಹಾದೇವಿ ಮಹಿಳಾ ಸ್ವಾಭಿಮಾನದ ಸಂಕೇತ: ಸೋಮಶೇಖರ್‌

| Published : Apr 28 2024, 01:28 AM IST

ಸಾರಾಂಶ

ವಚನಕಾರೆ ಅಕ್ಕಮಹಾದೇವಿ ಅವರು ನಾಡಿನ, ರಾಷ್ಟ್ರದ, ವಿಶ್ವದ ಮಹಿಳಾ ಸ್ವಾಭಿಮಾನದ ಸಂಕೇತವಾಗಿದ್ದಾರೆ. ತಮ್ಮ ವಚನ ಕಾವ್ಯ ರಮಣೀಯತೆಯಿಂದ ಕ್ರಾಂತಿ ಮೂಡಿಸಿದ್ದಾರೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ। ಸಿ.ಸೋಮಶೇಖರ್‌ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಚನಕಾರೆ ಅಕ್ಕಮಹಾದೇವಿ ಅವರು ನಾಡಿನ, ರಾಷ್ಟ್ರದ, ವಿಶ್ವದ ಮಹಿಳಾ ಸ್ವಾಭಿಮಾನದ ಸಂಕೇತವಾಗಿದ್ದಾರೆ. ತಮ್ಮ ವಚನ ಕಾವ್ಯ ರಮಣೀಯತೆಯಿಂದ ಕ್ರಾಂತಿ ಮೂಡಿಸಿದ್ದಾರೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ। ಸಿ.ಸೋಮಶೇಖರ್‌ ಬಣ್ಣಿಸಿದರು.

ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌, ಕದಳಿ ಮಹಿಳಾ ವೇದಿಕೆ ಮತ್ತು ಲಂಡನ್‌ನ ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನದಿಂದ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ವಚನ ಸಂಭ್ರಮ ಹಾಗೂ ನೈಜೀರಿಯಾದ ಅಂತಾರಾಷ್ಟ್ರೀಯ ಕಾವ್ಯ ಪ್ರಶಸ್ತಿ ಪುರಸ್ಕೃತೆ ಡಾ। ಮಮತಾ ಸಾಗರ್‌ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಕ್ಕಮಹಾದೇವಿ ಅವರು ಆತ್ಮವಿಶ್ವಾಸ, ಛಲ, ದೃಢತೆ ಹೊಂದಿದ್ದರು. ಕೌಶಿಕ ಮಹಾರಾಜನನ್ನು ಧಿಕ್ಕರಿಸಿ ಕಾಡಿನಲ್ಲಿ ಏಕಾಂತವಾಗಿ ಸಂಚರಿಸಿ ಚನ್ನಮಲ್ಲಿಕಾರ್ಜುನನನ್ನು ಅರಸುತ್ತಾ ಮೃಗಗಳ ಜೊತೆ ಅನುಸಂಧಾನ ನಡೆಸುತ್ತಾ ಹೋಗುತ್ತಾರೆ. ದಿಗಂಬರವೇ ಅವರ ದಿವ್ಯಾಭರಣವಾಯಿತು. ಮಹಿಳಾ ಸಂವೇದನೆಯ ಅಂಕೇತವಾಗಿರುವ ಅಕ್ಕ, ಮಹಿಳಾ ಶಕ್ತಿಯ ಸಂಕೇತವೂ ಹೌದು. ತಮ್ಮ ವಚನಗಳ ಮೂಲಕ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ ಎಂದು ಸ್ಮರಿಸಿದರು.

ವಚನಗಳ ಸಾರ ಅರ್ಥ ಮಾಡಿಕೊಳ್ಳಿ

ಬಸವಣ್ಣವರ ವಚನಗಳಲ್ಲಿ ಮೃದುತ್ವ, ಅಲ್ಲಮಪ್ರಭುವಿನಲ್ಲಿ ಪ್ರಭುತ್ವ, ಸಿದ್ದರಾಮೇಶ್ವರರಲ್ಲಿ ತಾಳ್ಮೆಯ ಸಂದೇಶ, ಅಕ್ಕಮಹಾದೇವಿ ಅವರ ವಚನಗಳಲ್ಲಿ ಸ್ವಾಭಿಮಾನ, ಮಹಿಳಾ ಸಂವೇದನೆಯನ್ನು ಹೆಚ್ಚಾಗಿ ಕಾಣುತ್ತೇವೆ. ನಾಗರಿಕ ಸಮಾಜದಲ್ಲೇ ಮೃಗಗಳಿರುವುದರಿಂದ ಈ ವಚನಗಳ ಸಾರವನ್ನು ನಮ್ಮ ಮಕ್ಕಳು, ಅದಲ್ಲೂ ವಿಶೇಷವಾಗಿ ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಆರ್ಥಿಕ ಅಸಮಾನತೆ, ಸಾಮಾಜಿಕ ವಿಷಮತೆ, ಮೂಢನಂಬಿಕೆಗಳು ಅಟ್ಟಹಾಸ ಹಾಕುತ್ತಿದ್ದ 12 ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಕ್ರಾಂತಿಯಾಗಿದ್ದು ವಿಶ್ವದ ಅದೃಷ್ಟವಾಗಿದೆ. ಕಾಯಕ, ದಾಸೋಹ ತತ್ವದ ಮೂಲಕ ಬಸವಾದಿ ಶರಣರು ಕ್ರಾಂತಿ ಮೂಡಿಸಿದರು. ಇದರ ಅನರ್ಘ್ಯ ರತ್ನ ಅಕ್ಕಮಹಾದೇವಿ ಆಗಿದ್ದಾರೆ. ಲಿಂಗ, ವರ್ಣ, ವರ್ಗ ಬೇಧವಿಲ್ಲದೇ ಜೀವಕಾರುಣ್ಯದ ಪ್ರೀತಿಯನ್ನು ಅನುಭವ ಮಂಟಪದ ಮೂಲಕ ಉಣಬಡಿಸಲಾಯಿತು ಎಂದು ಪ್ರಶಂಸಿಸಿದರು.

ಇದೇ ಸಂದರ್ಭದಲ್ಲಿ ಕವಯತ್ರಿ ಡಾ। ಮಮತಾ ಸಾಗರ್‌ ಅವರನ್ನು ಅಭಿನಂದಿಸಲಾಯಿತು. ಮಾಜಿ ಸಚಿವ ಲೀಲಾದೇವಿ ಆರ್‌.ಪ್ರಸಾದ್‌, ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಸುಶಿಲಮ್ಮ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ। ಎಚ್‌.ಎಲ್‌.ಪುಷ್ಪಾ, ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ ಹಾಜರಿದ್ದರು.