ನರಸಿಂಹರಾಜಪುರದಲ್ಲಿ ಶೇ 91.86 ಫಲಿತಾಂಶ: ಕೆ.ಆರ್.ಪುಷ್ಪ

| Published : May 10 2024, 01:31 AM IST

ನರಸಿಂಹರಾಜಪುರದಲ್ಲಿ ಶೇ 91.86 ಫಲಿತಾಂಶ: ಕೆ.ಆರ್.ಪುಷ್ಪ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿಗೆ ಶೇ.91.86 ರಷ್ಟು ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪ ತಿಳಿಸಿದ್ದಾರೆ.

ಜಿಲ್ಲೆಗೆ 3 ನೇ ಸ್ಥಾನ । 11 ಶಾಲೆಗಳು ಶೇ 100 ರಷ್ಟು ಫಲಿತಾಂಶ

ಕನ್ನಡಪ್ರಭ ವಾರ್ತೆ , ನರಸಿಂಹರಾಜಪುರ

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿಗೆ ಶೇ.91.86 ರಷ್ಟು ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪ ತಿಳಿಸಿದ್ದಾರೆ.

ಒಟ್ಟು ಪರೀಕ್ಷೆ ಬರೆದಿದ್ದ 835 ಮಂದಿಯಲ್ಲಿ 767 ಮಂದಿ ಉತ್ತೀರ್ಣರಾಗಿದ್ದಾರೆ. 358 ಬಾಲಕರು ಹಾಗೂ 409 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಜಿಲ್ಲೆಗೆ 6 ನೇ ಸ್ಥಾನದಲ್ಲಿತ್ತು. ಈ ವರ್ಷ ಜಿಲ್ಲೆಗೆ 3 ನೇ ಸ್ಥಾನ ಬಂದಿದ್ದೇವೆ. ತಾಲೂಕಿನಲ್ಲಿ 22 ಪ್ರೌಢ ಶಾಲೆಗಳಿದ್ದು ಇದರಲ್ಲಿ 11 ಪ್ರೌಢ ಶಾಲೆಗಳು ಶೇ.100 ಫಲಿತಾಂಶ ಪಡೆದಿದೆ. ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆ, ಗಡಿಗೇಶ್ವರ ಸರ್ಕಾರಿ ಪ್ರೌಢ ಶಾಲೆ ಹಾಗೂ ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆ ಶೇ.100 ರಷ್ಟು ಫಲಿತಾಂಶ ಪಡೆದಿದೆ.

ಉಳಿದಂತೆ ದೀಪ್ತಿ ಪ್ರೌಢ ಶಾಲೆ, ಡಿಸಿಎಂಸಿ ಪ್ರೌಢ ಶಾಲೆ, ಜೀವನ್ ಜ್ಯೋತಿ ಆಂಗ್ಲ ಮಾದ್ಯಮ ಪ್ರೌಢ ಶಾಲೆ, ಹೋನಿ ಪ್ರಾಫೆಟ್ ಪ್ರೌಢ ಶಾಲೆ ಹಾಗೂ ನಿರ್ಮಲ ಕಾನ್ವೆಂಟ್ ಪ್ರೌಢ ಶಾಲೆ ಶೇ 100 ರಷ್ಟು ಫಲಿತಾಂಶ ಪಡೆದಿದೆ. ವಸತಿ ಶಾಲೆ ಗಳಾದ ಅಳಲಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಮೌಲಾನ ಆಜಾದ್ ಪ್ರೌಢ ಶಾಲೆಗಳು ಶೇ 100 ರಷ್ಟು ಫಲಿತಾಂಶ ಪಡೆದುಕೊಂಡಿದೆ.

ಅವನಿ ಎಂ.ಗೌಡ ಪ್ರಥಮ:

ತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆ ಅವನಿ ಎಂ ಗೌಡ 625 ಕ್ಕೆ 615 (ಶೇ 98.4) ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಬಾಳೆಹೊನ್ನೂರಿನ ನಿರ್ಮಲ ಆಂಗ್ಲ ಪ್ರೌಢ ಶಾಲೆ ರೀವಾ ಕ್ಯಾಸ್ಟಲಿನ 625 ಕ್ಕೆ 607 ( ಶೇ 97.1) ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾಳೆ. ಇದೇ ಶಾಲೆಯ ನಮಿತ ಲೋಬೋ 625 ಕ್ಕೆ 605 ( ಶೇ.96.8) ಅಂಕ ಪಡೆದು ತಾಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾಳೆ.

--- ಬಾಕ್ಸ್ ---

ಎಸ್.ಎಸ್.ಎಲ್.ಸಿ.ಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವುದಕ್ಕೆ ನನಗೆ ಖುಷಿ ತಂದಿದೆ ಎಂದು 625 ಕ್ಕೆ 615 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಅವನಿ ಎಂ.ಗೌಡ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ನಾನು ಮೊದಲನೇ ತರಗತಿಯಿಂದಲೂ ಸರ್ಕಾರಿ ಶಾಲೆಯಲ್ಲೇ ಓದಿದ್ದೇನೆ. ಎಸ್.ಎಸ್.ಎಲ್.ಸಿ.ಯಲ್ಲಿ 625 ಕ್ಕೆ 615 ಅಂಕ ಪಡೆಯಲು ನನ್ನ ಪರಿಶ್ರಮದ ಜೊತೆಗೆ ಶಿಕ್ಷಕರು, ತಂದೆ,ತಾಯಿಗಳ ಪ್ರೋತ್ಸಾಹವೂ ಕಾರಣವಾಗಿದೆ.ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆ ಶಿಕ್ಷಕರು ಪಾಠ ಮಾಡಿದ್ದಾರೆ.