ಹೊಸಪೇಟೆಯಲ್ಲಿ ಭಾರೀ ಗಾಳಿ ಮಳೆಗೆ ಬಾಳೆ ಧರಾಶಾಹಿ

| Published : May 10 2024, 01:31 AM IST

ಸಾರಾಂಶ

ಮುಂಗಾರು- ಹಿಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕ್ಷೀಣಿಸಿದೆ.

ಹೊಸಪೇಟೆ: ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಗಾಳಿ-ಮಳೆಗೆ 200ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಬಾಳೆ ಬೆಳೆ ನೆಲ್ಲಕುರುಳಿದ್ದು, ಲಕ್ಷಾಂತರ ರುಪಾಯಿ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ತಾಲೂಕಿನ 76 ವೆಂಕಟಾಪುರ ಪ್ರದೇಶದಲ್ಲಿ 130 ಎಕರೆ, ಬುಕ್ಕಸಾಗರ 76 ಎಕರೆ, ಕಮಲಾಪುರ 8 ಎಕರೆ, ನರಸಾಪುರ ಮತ್ತು ಹೊಸೂರು 4 ಎಕರೆ ಪ್ರದೇಶದಲ್ಲಿ ಬಾಳೆ ನೆಲಕ್ಕುರುಳಿ ಹಾನಿ ಸಂಭವಿಸಿದೆ. ಹೊಸಪೇಟೆಯಲ್ಲಿ 1, ವೆಂಕಟಾಪುರದಲ್ಲಿ 1, ಕಮಲಾಪುರದಲ್ಲಿ 2 ಮನೆ ಸೇರಿದಂತೆ ತಾಲೂಕಿನಲ್ಲಿ ಒಟ್ಟು 4 ಮನೆಗಳಿಗೆ ಹಾನಿಯಾಗಿದೆ.

ಈ ಬಾರಿ ಮುಂಗಾರು- ಹಿಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕ್ಷೀಣಿಸಿದೆ. ಈ ನಡುವೆ ತುರ್ತಾ, ರಾಯ, ಬಸವಣ್ಣ ಕಾಲುವೆಗಳ ಜರಿ ನೀರಿನಿಂದ ಸುಗಂಧಿ, ಏಲಕ್ಕಿ ಹಾಗೂ ಸಕ್ಕರೆ ಬಾಳೆಯನ್ನು ರೈತರು ಬೆಳೆದಿದ್ದರು. ಮಳೆಯನ್ನು ಎದುರು ನೋಡುತ್ತಿದ್ದ ರೈತರಿಗೆ ದಿಢೀರ್ ಸುರಿದ ಭಾರೀ ಮಳೆ ದೊಡ್ಡ ಅವಾಂತರ ಸೃಷ್ಟಿಸಿದೆ. ಲಕ್ಷಾಂತರ ರುಪಾಯಿ ಹಾನಿ ಉಂಟು ಮಾಡಿದೆ. ಸಂಕಷ್ಟ ಕಾಲದಲ್ಲಿ ಕೈ ಹಿಡಿಯಬೇಕಾಗಿದ್ದ ಬಾಳೆ ಫಸಲು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಶಾಸಕ ಗವಿಯಪ್ಪ ಭೇಟಿ, ಪರಿಶೀಲನೆ:

ಹಾನಿಗೊಳಗಾದ ವೆಂಕಟಾಪುರ ಹಾಗೂ ಬುಕ್ಕಸಾಗರ ಮಾಗಣಿ ಪ್ರದೇಶಕ್ಕೆ ಶಾಸಕ ಎಚ್.ಆರ್. ಗವಿಯಪ್ಪ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಹಾನಿಗೊಳಗಾದ ರೈತರಿಗೆ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರುತಿ, ಹಿರಿಯ ತೋಟಗಾರಿಕೆ ಅಧಿಕಾರಿ ರಾಘವೇಂದ್ರ ಕೆ.ಎಂ., ಕಮಲಾಪುರ ಕಂದಾಯ ನಿರೀಕ್ಷಕ ಅನೀಲ್ ಕುಮಾರ್, ವೆಂಕಟಾಪುರ ಗ್ರಾಮ ಲೆಕ್ಕಾಧಿಕಾರಿ ಮೌನೇಶ್, ಬುಕ್ಕಸಾಗರ ಗ್ರಾಮ ಲೆಕ್ಕಾಧಿಕಾರಿ ಸುಭಾಷ್ ಹಾಗೂ ರೈತರು ಇದ್ದರು.

ಮಳೆ ಸುರಿದ ವಿವರ:

ಹೊಸಪೇಟೆ ಐಬಿ ಪ್ರದೇಶ: 14.6 ಮಿ.ಮೀ.,

ಹೊಸಪೇಟೆ ರೈಲ್ವೆ ಪ್ರದೇಶ:13.5 ಮಿ.ಮೀ.,

ಟಿ.ಬಿ.ಡ್ಯಾಂ: 2.0 ಮಿ.ಮೀ.

ಕಮಲಾಪುರ: 43 ಮಿ.ಮೀ.

ಗಾದಿಗನೂರು:19.2 ಮಿ.ಮೀ.

ಮರಿಯಮ್ಮನಹಳ್ಳಿ 13.5 ಮಿ.ಮೀ ಮಳೆ ಸುರಿದಿದೆ.