ಎಸ್ಸೆಸ್ಸೆಲ್ಸಿ ಫಲಿತಾಂಶ ಕಳೆದ ಬಾರಿಗಿಂತ 10% ಕುಸಿತ! 27% ಮಕ್ಕಳು ಗ್ರೇಸ್‌ಪಾಸ್‌

| Published : May 10 2024, 01:31 AM IST / Updated: May 10 2024, 07:58 AM IST

ಎಸ್ಸೆಸ್ಸೆಲ್ಸಿ ಫಲಿತಾಂಶ ಕಳೆದ ಬಾರಿಗಿಂತ 10% ಕುಸಿತ! 27% ಮಕ್ಕಳು ಗ್ರೇಸ್‌ಪಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಒಟ್ಟಾರೆ ಶೇ.73.40ರಷ್ಟು ಫಲಿತಾಂಶ ದಾಖಲಾಗಿದೆ. ತನ್ಮೂಲಕ ಕಳೆದ ಬಾರಿಗಿಂತ ಶೇ.10.49ರಷ್ಟು ಫಲಿತಾಂಶ ಕಡಿಮೆಯಾಗುವ ಜೊತೆಗೆ ಐದು ವರ್ಷಗಳ ಹಿಂದಕ್ಕೆ ಫಲಿತಾಂಶ ಜಾರಿದೆ.

 ಬೆಂಗಳೂರು :  ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಒಟ್ಟಾರೆ ಶೇ.73.40ರಷ್ಟು ಫಲಿತಾಂಶ ದಾಖಲಾಗಿದೆ. ತನ್ಮೂಲಕ ಕಳೆದ ಬಾರಿಗಿಂತ ಶೇ.10.49ರಷ್ಟು ಫಲಿತಾಂಶ ಕಡಿಮೆಯಾಗುವ ಜೊತೆಗೆ ಐದು ವರ್ಷಗಳ ಹಿಂದಕ್ಕೆ ಫಲಿತಾಂಶ ಜಾರಿದೆ.

ವಿಶೇಷವೆಂದರೆ ಇದುವರೆಗೆ ಶೇ.10ರಷ್ಟಿದ್ದ ಗ್ರೇಸ್‌ ಅಂಕದ ಪ್ರಮಾಣವನ್ನು ಶೇ.20ಕ್ಕೆ ಹೆಚ್ಚಿಸುವ ಜೊತೆಗೆ ಗ್ರೇಸ್‌ ಅಂಕ ಪಡೆಯಲು ಯಾವುದಾದರೂ ಮೂರು ವಿಷಯಗಳಲ್ಲಿ ಪಾಸ್‌ ಅಂಕದ ಜೊತೆಗೆ ಎಲ್ಲಾ ಆರೂ ವಿಷಯಗಳಿಂದ ಕಡ್ಡಾಯವಾಗಿ ಶೇ.35ರಷ್ಟು (175 ಅಂಕ) ಗಳಿಸಬೇಕಿದ್ದ ಅಂಕಗಳ ಪ್ರಮಾಣವನ್ನು ಶೇ.25ಕ್ಕೆ(125 ಅಂಕ) ಇಳಿಸಿದ ಪರಿಣಾಮ ಬರೋಬ್ಬರಿ 1.23 ಲಕ್ಷ (ಶೇ.20) ವಿದ್ಯಾರ್ಥಿಗಳು ಗ್ರೇಸ್‌ ಅಂಕದಿಂದಲೇ ಪಾಸಾಗುವುದರೊಂದಿಗೆ ಒಟ್ಟಾರೆ ಫಲಿತಾಂಶ ಶೇ.73.40ರಷ್ಟು ಬಂದಿದೆ. ಇಲ್ಲದೆ ಹೋಗಿದ್ದರೆ ಫಲಿತಾಂಶ ಸುಮಾರು ಶೇ.54ರಷ್ಟು ಮಾತ್ರವೇ ಬರುತ್ತಿತ್ತು. ಇದರಿಂದ ಕಳೆದ ವರ್ಷದ ಫಲಿತಾಂಶಕ್ಕಿಂತ ಶೇ.30ರಷ್ಟು ಫಲಿತಾಂಶ ಕುಸಿತವಾಗಿ ಸರ್ಕಾರ ತೀವ್ರ ಮುಜುಗರ ಅನುಭವಿಸಬೇಕಾಗಿತ್ತು. ಇದನ್ನು ತಪ್ಪಿಸಿಕೊಳ್ಳಲು ಗ್ರೇಸ್‌ ಅಂಕದ ಮ್ಯಾಜಿಕ್‌ ನಡೆಸಲಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಅವರು ಗುರುವಾರ ಫಲಿತಾಂಶ ಪ್ರಕಟಿಸಿದರು. ಈ ಬಾರಿ ಪರೀಕ್ಷೆ ಬರೆದಿದ್ದ 8.59 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಶೇ.73.40 ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷದ ಶೇ 83.89ರಷ್ಟು ಫಲಿತಾಂಶಕ್ಕೆ ಹೋಲಿಸಿದರೆ ಶೇ.10.49ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದರು.

ಈವರೆಗೆ ಗರಿಷ್ಠ ಮೂರು ವಿಷಯಗಳಲ್ಲಿ ಕೆಲವೇ ಅಂಕಗಳಿಂದ ಫೇಲಾಗುವ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲು ಅಳವಡಿಸಿಕೊಂಡಿದ್ದ ಶೇ.10ರಷ್ಟು ಗ್ರೇಸ್‌ ಅಂಕದ ಪ್ರಮಾಣವನ್ನು ಸರ್ಕಾರದ ಅನುಮತಿಯೊಂದಿಗೆ ಈ ಬಾರಿ ಶೇ.20ಕ್ಕೆ ಹೆಚ್ಚಳ ಮಾಡಿದ್ದೇವೆ. ಅಲ್ಲದೆ, ಗ್ರೇಸ್‌ ಅಂಕ ಪಡೆಯಲು ಒಟ್ಟಾರೆ ಆರು ವಿಷಯಗಳ ಲಿಖಿತ ಪರೀಕ್ಷೆಯಲ್ಲಿ ಶೇ.35ರಷ್ಟು (ಆರು ವಿಷಯಗಳಿಂದ 175) ಅಂಕ ಗಳಿಸಬೇಕೆಂಬ ಮಾನದಂಡವನ್ನು ಈ ಬಾರಿ ಶೇ.25ಕ್ಕೆ(125 ಅಂಕ) ಇಳಿಸಲಾಗಿದೆ. ಇದರಿಂದ ಮೂರು ವಿಷಯಗಳಲ್ಲಿ ಪಾಸಾಗಿದ್ದು, ಇನ್ನು ಮೂರು ವಿಷಯಗಳಲ್ಲಿ ಫೇಲಾಗಿದ್ದರೂ ಒಟ್ಟಾರೆ ಆರೂ ವಿಷಯಗಳಿಂದ 125 ಅಂಕಗಳನ್ನು(ಲಿಖಿತ ಪರೀಕ್ಷೆಯಲ್ಲಿ) ಪಡೆದಿರುವ ವಿದ್ಯಾರ್ಥಿಗಳಿಗೆ ಶೇ.20ರಷ್ಟು ಗ್ರೇಸ್‌ ಅಂಕ ನೀಡಿ ಪಾಸು ಮಾಡಲಾಗಿದೆ. ಆ ರೀತಿಯಲ್ಲಿ 1.70 ಲಕ್ಷ ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ವಿವರಿಸಿದರು.

ಈ ಗ್ರೇಸ್‌ ಅಂಕವನ್ನು ದುಪ್ಪಟ್ಟುಗೊಳಿಸದೇ ಹೋಗಿದ್ದರೆ ಫಲಿತಾಂಶ ಶೇ.54ಕ್ಕೆ ಕುಸಿಯುತ್ತಿತ್ತು. ಅಂದರೆ ಕಳೆದ ವರ್ಷಕ್ಕಿಂತ ಸುಮಾರು ಶೇ.30ರಷ್ಟು ಫಲಿತಾಂಶ ಇಳಿಕೆಯಾಗುತ್ತಿತ್ತು. ಸರ್ಕಾರ ಗ್ರೇಸ್‌ ಅಂಕ ದುಪ್ಪಟ್ಟುಗೊಳಿಸಲು ಅನುಮತಿಸಿದ್ದರಿಂದ ಫಲಿತಾಂಶ ಶೇ.73.40ರಷ್ಟು ಬಂದಿದೆ ಎಂದು ಅಂಕಿ ಅಂಶಗಳ ಸಹಿತ ವಿವರಿಸಿದರು.

ಬಾಲಕಿಯರೇ ಮೇಲುಗೈ:  ಎಂದಿನಂತೆ ಒಟ್ಟಾರೆ ಫಲಿತಾಂಶ ಹಾಗೂ ಟಾಪರ್‌ಗಳಲ್ಲಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಮುಧೋಳದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್‌ ಆಗಿದ್ದಾರೆ. 2288 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿದ್ದರೆ, 78 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ.

ಪರೀಕ್ಷೆ ಬರೆದಿದ್ದ 4.23 ಲಕ್ಷ ವಿದ್ಯಾರ್ಥಿನಿಯರಲ್ಲಿ 3.43 ಲಕ್ಷಕ್ಕೂ ಹೆಚ್ಚು ಮಂದಿ (ಶೇ.81.11) ಉತ್ತೀರ್ಣರಾದರೆ, 4.36 ಲಕ್ಷ ಬಾಲಕರ ಪೈಕಿ 2.87 ಲಕ್ಷ ಮಂದಿ (ಶೇ.65.90) ಮಾತ್ರ ಪಾಸಾಗಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳ ಪೈಕಿ ಶೇ.72.83ರಷ್ಟು ತೇರ್ಗಡೆಯಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೇ.74.17ರಷ್ಟು ಮಂದಿ ಪಾಸಾಗಿದ್ದಾರೆ.

ಫಲಿತಾಂಶ ಕುಸಿತಕ್ಕೆ ಕಾರಣ:  ಈ ಬಾರಿ ಪರೀಕ್ಷಾ ಕೇಂದ್ರದ ಪ್ರಮುಖ ಸ್ಥಳಗಳು ಮಾತ್ರವಲ್ಲದೆ, ಪ್ರತಿ ಕೊಠಡಿಯಲ್ಲೂ ಸಿಸಿ ಕ್ಯಾಮರಾ ಅಳವಡಿಕೆ ಮತ್ತು ಆ ಕೊಠಡಿಗಳ ಚಿತ್ರಣ ಪರಿಶೀಲನೆಗೆ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಆಯಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು ಪ್ರತಿ ಪರೀಕ್ಷಾ ಕೇಂದ್ರಗಳ ವೆಬ್‌ಕಾಸ್ಟಿಂಗ್‌ ಪರಿಶೀಲಿಸಿದ್ದರು. ಹೀಗಾಗಿ ಪರೀಕ್ಷಾ ಅಕ್ರಮಗಳಿಗೂ ಸಂಪೂರ್ಣ ಕಡಿವಾಣ ಬಿದ್ದ ಪರಿಣಾಮ ಈ ಬಾರಿಯ ಫಲಿತಾಂಶ ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಹೇಳಿದರು.

ಖಾಸಗಿ ಶಾಲೆಗಳ ಫಲಿತಾಂಶವೇ ಹೆಚ್ಚು :  ಸರ್ಕಾರಿ ಶಾಲೆಗಳ ಫಲಿತಾಂಶ ಶೇ.72.46ರಷ್ಟು ಬಂದಿದೆ. ಅನುದಾನಿತ ಶಾಲೆಗಳ ಫಲಿತಾಂಶ ಶೇ.72.22, ಅನುದಾನ ರಹಿತ ಖಾಸಗಿ ಶಾಲೆಗಳ ಶೇ.86.46 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿದವರು ಶೇ.85.59, ಆಂಗ್ಲ ಮಾಧ್ಯಮದವರು ಶೇ.91.66ರಷ್ಟು ಮಂದಿ ಉತ್ತಿರ್ಣರಾಗಿದ್ದಾರೆ. ಉರ್ದು, ಮರಾಠಿ, ತೆಲುಗು, ತಮಿಳು, ಹಿಂದಿ ಮಾಧ್ಯಮಗಳ ಪೈಕಿ ಅತಿ ಕಡಿಮೆ ಎಂದರೆ ತಮಿಳು ಮಾಧ್ಯಮದಲ್ಲಿ ಪರೀಕ್ಷೆ ಬರೆದವರು ಶೇ.50ರಷ್ಟು ಮಾತ್ರ ಪಾಸಾಗಿದ್ದಾರೆ.

ಉಡುಪಿ ಪ್ರಥಮ- ಯಾದಗಿರಿ ಲಾಸ್ಟ್‌:  ಜಿಲ್ಲಾವಾರು ಫಲಿತಾಂಶದಲ್ಲಿ ಕಳೆದ ಬಾರಿ 14ಕ್ಕೆ ಇಳಿದಿದ್ದ ಉಡುಪಿ ಶೇ.94ರಷ್ಟು ಫಲಿತಾಂಶದೊಂದಿಗೆ ಈ ಬಾರಿ ಮತ್ತೆ ಮೊದಲನೇ ಸ್ಥಾನಕ್ಕೆ ಏರಿದೆ. 17ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ದ್ವಿತೀಯ, 28ನೇ ಸ್ಥಾನದಲ್ಲಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗ ದಿಢೀರನೆ ಮೂರನೇ ಸ್ಥಾನಕ್ಕೆ ಜಿಗಿದಿದೆ. ಉಳಿದ ಜಿಲ್ಲೆಗಳ ಸ್ಥಾನಮಾನಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ, ಕೊನೆಯ ಸ್ಥಾನದಲ್ಲಿದ್ದ ಯಾದಗಿರಿ ಈ ಬಾರಿಯೂ ಮೇಲೆದ್ದಿಲ್ಲ.

ಸುದ್ದಿಗೋಷ್ಠಿಯಲ್ಲಿ ಮಂಡಳಿಯ ನಿರ್ದೇಶಕ (ಪರೀಕ್ಷೆಗಳು) ಗೋಪಾಲಕೃಷ್ಣ ಉಪಸ್ಥಿತರಿದ್ದರು.

ಮುಧೋಳದ ಸರ್ಕಾರಿ ಶಾಲೆಯ ಅಂಕಿತ ಪ್ರಥಮ :  ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಲ್ಲಿಗೆರೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸವಪ್ಪ ಕೊಣ್ಣೂರು ಮಾತ್ರ 625ಕ್ಕೆ625 ಅಂಕ ಪಡೆದು ರಾಜ್ಯಕ್ಕೆ ಟಾಪರ್‌ ಆಗಿದ್ದಾರೆ. 2022-23ರಲ್ಲಿ ನಾಲ್ವರು, 2021-22ರಲ್ಲಿ 145 ಮಂದಿ, 2020-21ರ ಕೋವಿಡ್‌ ವರ್ಷದಲ್ಲಿ 158 ಮಂದಿ 625 ಅಂಕ ಪಡೆದಿದ್ದರು.

ಉಳಿದಂತೆ ಬೆಂಗಳೂರಿನ ಹೋಲಿ ಬಾಲಕಿಯರ ಪ್ರೌಢ ಶಾಲೆಯ ಮೇಧಾ ಪಿ.ಶೆಟ್ಟಿ, ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ವಾಸವಿ ಇಂಗ್ಲಿಷ್‌ ಹೈಸ್ಕೂಲ್‌ನ ಹರ್ಷಿತಾ ಡಿ.ಎಂ., ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಚಿನ್ಮಯ್‌ ಜಿ.ಕೆ., ಚಿಕ್ಕೋಡಿಯ ಅಥಣಿ ತಾಲ್ಲೂಕಿನ ಶ್ರಮನ್‌ರತ್ನ ಶ್ರೀ 108 ಆಚಾರ್ಯ ಸುಬಾಲಸಾಗರ ಪ್ರೌಢ ವಿದ್ಯಾಮಂದಿರದ ಸಿದ್ಧಾಂತ್‌ ನಾಯ್ಕ ಗಡಗೆ, ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸರ್ಕಾರಿ ಮಾರಿಕಾಂಬ ಪಿಯು ಕಾಲೇಜಿನ ದರ್ಶನ್‌ ಸುಬ್ರಾಯ ಭಟ್‌, ಸಿದ್ಧಿವಿನಾಯಕ ಹೈಸ್ಕೂಲ್‌ನ ಚಿನ್ಮಯಿ ಶ್ರೀಪಾದ ಹೆಗಡೆ ಮತ್ತು ಶಾರದಾಂಬ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶ್ರೀರಾಮ್‌ ಕೆ.ಎಂ. 625ಕ್ಕೆ ತಲಾ 624 ಅಂಕಗಳನ್ನು ಪಡೆದು ಎರಡನೇ ಟಾಪರ್‌ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಅದೇ ರೀತಿ ವಿವಿಧ ಶಾಲೆಯ 14 ಮಂದಿ 623 ಅಂಕಗಳನ್ನು ಪಡೆದು ಮೂರನೇ ಟಾಪರ್‌ಗಳಾಗಿ ಸಾಧನೆ ಮಾಡಿದ್ದಾರೆ. 21 ಮಂದಿ 622 ಅಂಕ, 44 ಮಂದಿ 621 ಅಂಕ, 64 ಮಂದಿ 620 ಅಂಕ ಪಡೆದು ಅತಿ ಹೆಚ್ಚು ಅಂಕ ಗಳಿಸಿದವರಾಗಿದ್ದಾರೆ.

ವಿಷಯವಾರು ಶೇ.100 ಫಲಿತಾಂಶ:  ಪ್ರಥಮ ಭಾಷೆ ಕನ್ನಡದಲ್ಲಿ 7,664 ಮಂದಿ, ದ್ವಿತೀಯ ಭಾಷೆಯಲ್ಲಿ 5,593 ವಿದ್ಯಾರ್ಥಿಗಳು, ತೃತೀಯ ಭಾಷೆಯಲ್ಲಿ 10,890, ಗಣಿತದಲ್ಲಿ 784, ವಿಜ್ಞಾನದಲ್ಲಿ 277, ಸಮಾಜ ವಿಜ್ಞಾನದಲ್ಲಿ 2,060 ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಅಂಕ ಪಡೆದು ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ.

2288 ಶಾಲೆಗಳಿಗೆ 100%, 78 ಶಾಲೆಗೆ 0% ಫಲಿತಾಂಶ : ರಾಜ್ಯದಲ್ಲಿರುವ 15,300ಕ್ಕೂ ಹೆಚ್ಚು ಪ್ರೌಢ ಶಾಲೆಗಳ ಪೈಕಿ ಈ ಬಾರಿ 2288 ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ. ಇದರಲ್ಲಿ 785 ಸರ್ಕಾರಿ, 206 ಅನುದಾನಿತ ಮತ್ತು 1,297 ಅನುದಾನರಹಿತ ಶಾಲೆಗಳಾಗಿವೆ. ಅದೇ ರೀತಿ 3 ಸರ್ಕಾರಿ ಶಾಲೆ, 13 ಅನುದಾನಿತ ಮತ್ತು 62 ಅನುದಾನ ರಹಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

1.70 ಲಕ್ಷ ವಿದ್ಯಾರ್ಥಿಗಳಿಗ ಗ್ರೇಸ್ ಅಂಕ :  ಈ ಬಾರಿ 1.70 ಲಕ್ಷ ವಿದ್ಯಾರ್ಥಿಗಳಿಗೆ ಗರಿಷ್ಠ 3 ವಿಷಯಗಳಲ್ಲಿ ಶೇ.20ರಷ್ಟು ಗ್ರೇಸ್‌ ಅಂಕ ನೀಡಿ ಪಾಸು ಮಾಡಲಾಗಿದೆ. ಇದುವರೆಗೆ ಗರಿಷ್ಠ ಮೂರು ವಿಷಯಗಳಲ್ಲಿ ಶೇ.10ರಷ್ಟು ಗ್ರೇಸ್‌ ಅಂಕ ನೀಡಲು ಮಾತ್ರ ಅವಕಾಶವಿತ್ತು. ಈ ಬಾರಿ ಇದನ್ನು ಏಕಾಏಕಿ ಶೇ.20ಕ್ಕೆ ಸರ್ಕಾರ ಹೆಚ್ಚಿಸಿದೆ. ಅಲ್ಲದೆ, ಗ್ರೇಸ್‌ ಅಂಕ ಪಡೆಯಲು ಆರು ವಿಷಯಗಳಿಂದ ಒಟ್ಟು 500 ಅಂಕಗಳಿಗೆ ಬರೆದ ಲಿಖಿತ ಪರೀಕ್ಷೆಯಲ್ಲಿ ಶೇ.35ರಷ್ಟು ಅಂದರೆ 175 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿತ್ತು. ಜೊತೆಗೆ ಯಾವುದಾದರೂ ಮೂರು ವಿಷಯಗಳಲ್ಲಿ ಪಾಸ್ ಆಗಿರಬೇಕಿತ್ತು. ಈ ಬಾರಿ ಇದನ್ನು ಶೇ.25ಕ್ಕೆ ಇಳಿಸಿ ಅಂದರೆ ಆರೂ ವಿಷಯಗಳಿಂದ 125 ಅಂಕ ಪಡೆದವರಿಗೂ ಮೂರು ವಿಷಯಗಳಲ್ಲಿ ಶೇ.20ರಷ್ಟು ಗ್ರೇಸ್‌ ಅಂಕ ನೀಡಿ ಪಾಸು ಮಾಡಲಾಗಿದೆ. ಇದರಿಂದ 1.70 ಲಕ್ಷ ವಿದ್ಯಾರ್ಥಿಗಳು ಈ ಅವಕಾಶದಿಂದ ಉತ್ತೀರ್ಣರಾಗಿದ್ದಾರೆ ಎಂದು ಕೆಎಸ್‌ಇಎಬಿ ಅಧಿಕಾರಿಗಳು ಮಾಹಿತಿ ನೀಡಿದರು.

ಫಲಿತಾಂಶ ಉತ್ತಮಗೊಳಿಸಲು ಈ ಹಿಂದೆ ಎರಡು ವಿಷಯಗಳಲ್ಲಿ ತಲಾ ಶೇ.5ರಷ್ಟು ಗ್ರೇಸ್ ಅಂಕ ನೀಡಲು ಅವಕಾಶವಿತ್ತು. ಇದನ್ನು 2022ರಲ್ಲಿ ಕೋವಿಡ್‌ ಕಾರಣದಿಂದ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆಂಬ ಕಾರಣಕ್ಕೆ ಮೂರು ವಿಷಯಗಳಲ್ಲಿ ಶೇ.10ರಷ್ಟು ಗ್ರೇಸ್‌ ಅಂಕ ನೀಡಲು ಸರ್ಕಾರ ನಿರ್ಧರಿಸಿ ಮುಂದುವರೆಸಿಕೊಂಡು ಬಂದಿತ್ತು. ಈಗ ಅದನ್ನು ಶೇ.20ಕ್ಕೆ ಹೆಚ್ಚಿಸಿದೆ.

ಫಲಿತಾಂಶ ಕುಸಿತ ಆಗಿದ್ದಕ್ಕೆ ಕಾರಣ ಏನು?

ಈ ಬಾರಿ ಪರೀಕ್ಷಾ ಕೇಂದ್ರದ ಪ್ರಮುಖ ಸ್ಥಳಗಳು ಮಾತ್ರವಲ್ಲದೆ, ಪ್ರತಿ ಕೊಠಡಿಯಲ್ಲೂ ಸಿಸಿಕ್ಯಾಮರಾ ಅಳವಡಿಕೆ ಮತ್ತು ಆ ಕೊಠಡಿಗಳ ಚಿತ್ರಣ ಪರಿಶೀಲನೆಗೆ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಆಯಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು ಪ್ರತಿ ಪರೀಕ್ಷಾ ಕೇಂದ್ರಗಳ ವೆಬ್‌ಕಾಸ್ಟಿಂಗ್‌ ಪರಿಶೀಲಿಸಿದ್ದರು. ಹೀಗಾಗಿ ಪರೀಕ್ಷಾ ಅಕ್ರಮಗಳಿಗೂ ಸಂಪೂರ್ಣ ಕಡಿವಾಣ ಬಿದ್ದ ಪರಿಣಾಮ ಈ ಬಾರಿಯ ಫಲಿತಾಂಶ ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ.

--ಗ್ರೇಸ್‌ ಮ್ಯಾಜಿಕ್!

 ಹಿಂದಿನ ವರ್ಷದ ಪರೀಕ್ಷೆಯಲ್ಲಿ ಗ್ರೇಸ್‌ ಅಂಕದ ಪ್ರಮಾಣದ ಶೇ.10ರಷ್ಟಿತ್ತು- ಈ ಬಾರಿ ಕೃಪಾಂಕ ಪ್ರಮಾಣವನ್ನು ಪರೀಕ್ಷಾ ಮಂಡಳಿ ಶೇ.20ಕ್ಕೆ ಹೆಚ್ಚಿಸಿದೆ- 3 ವಿಷಯ ಪಾಸ್‌ ಜತೆಗೆ 6 ವಿಷಯಗಳಿಂದ 175 ಅಂಕ ಗಳಿಸಿದ್ದರೆ ಗ್ರೇಸ್‌ ಪಾಸ್‌ ಮಾಡಲಾಗುತ್ತಿತ್ತು

- ಇದೀಗ 6 ವಿಷಯಗಳಿಂದ ಗಳಿಸಬೇಕಾದ ಅಂಕದ ಪ್ರಮಾಣವನ್ನು 125ಕ್ಕೆ ಇಳಿಸಲಾಗಿದೆ- ಇದರಿಂದಾಗಿ 1.23 ಲಕ್ಷ ವಿದ್ಯಾರ್ಥಿಗಳು ಗ್ರೇಸ್‌ ಅಂಕ ಪಡೆದೇ ಪಾಸಾಗಿದ್ದಾರೆ- ಇಲ್ಲದೆ ಹೋಗಿದ್ದರೆ ಈ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.53ರ ಆಸುಪಾಸಿಗೆ ಇಳಿಯುತ್ತಿತ್ತು- ಆ ಮುಜುಗರದಿಂದ ಪಾರಾಗಲು ಗ್ರೇಸ್‌ ಅಂಕಗಳ ಕರಾಮತ್ತು ನಡೆಸಲಾಗಿದೆ ಎನ್ನಲಾಗುತ್ತಿದೆ---