2022-23ರಲ್ಲಿ 60 ಸಾವಿರ ಬಾಲ್ಯವಿವಾಹಗಳಿಗೆ ತಡೆ

| Published : Mar 31 2024, 02:09 AM IST / Updated: Mar 31 2024, 05:24 AM IST

ಸಾರಾಂಶ

ಇದರ ಪೈಕಿ 9551 ಬಾಲ್ಯವಿವಾಹಗಳ ಮೇಲೆ ಪ್ರಕರಣ ದಾಖಲು ಆಗಿದ್ದು, ಬಿಹಾರದಲ್ಲಿ ಅತಿಹೆಚ್ಚು ಬಾಲ್ಯವಿವಾಹಗಳಿಗೆ ತಡೆ ನೀಡಲಾಗಿದೆ

ನವದೆಹಲಿ: 2022-23ನೇ ಸಾಲಿನಲ್ಲಿ ದೇಶಾದ್ಯಂತ ಸಾಮುದಾಯಿಕ ಸಹಕಾರದಿಂದಾಗಿ 59,634 ಬಾಲ್ಯವಿವಾಹಗಳನ್ನು ತಡೆಯಲಾಗಿದೆ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.

‘ಎಜುಕೇಟ್‌ ಟು ಎಂಡ್‌ ಚೈಲ್ಡ್‌ ಮ್ಯಾರೇಜ್‌’ ಎಂಬ ಸಂಶೋಧನಾ ವರದಿಯನ್ನು ದೇಶದ 161 ಸಾಮುದಾಯಿಕ ಸಂಘಟನೆಗಳ ‘ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನ’ದಲ್ಲಿ ಮಾಡಲಾದ ಕೆಲಸಗಳನ್ನು ಕ್ರೋಢೀಕರಿಸಿ ತಯಾರಿಸಲಾಗಿದೆ.

ಅದರಲ್ಲಿ ತಿಳಿಸಿರುವಂತೆ ದೇಶಾದ್ಯಂತ 17 ರಾಜ್ಯಗಳ 265 ಜಿಲ್ಲೆಗಳಲ್ಲಿ 9551 ಬಾಲ್ಯವಿವಾಹಗಳಿಗೆ ಸಂಬಂಧಪಟ್ಟ ಪ್ರಕರಣಗಳು ಈ ಅವಧಿಯಲ್ಲಿ ದಾಖಲಾಗಿವೆ. ಅದರ ಪೈಕಿ ಪಶ್ಚಿಮ ಬಂಗಾಳದಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಲಾಗಿದ್ದು (32%) ಬಿಹಾರ, ಅಸ್ಸಾಂ, ಒಡಿಶಾ ಮತ್ತು ಮಹಾರಾಷ್ಟ್ರ ಪಟ್ಟಿಯಲ್ಲಿ ಅಗ್ರ 5 ಸ್ಥಾನಗಳನ್ನು ಅಲಂಕರಿಸಿವೆ.

ಜೊತೆಗೆ ಬಿಹಾರದಲ್ಲಿ ಅತಿಹೆಚ್ಚು ಬಾಲ್ಯವಿವಾಹಗಳನ್ನು ನಿಲ್ಲಿಸಲಾಗಿದ್ದು (31%), ಪಶ್ಚಿಮ ಬಂಗಾಳ (11%), ಉತ್ತರ ಪ್ರದೇಶ (11%), ಜಾರ್ಖಂಡ್‌ (10%) ಮತ್ತು ರಾಜಸ್ಥಾನ (10%) ನಂತರದ ಸ್ಥಾನದಲ್ಲಿವೆ.

ಈ ಅವಧಿಯಲ್ಲಿ ರಾಜಸ್ಥಾನದಲ್ಲಿ (29%) ಅತಿಹೆಚ್ಚು ಬಾಲ್ಯವಿವಾಹಗಳಿಗೆ ನ್ಯಾಯಾಲಯ ತಡೆ ನೀಡಿದೆ. ಮಕ್ಕಳ ಹಿತರಕ್ಷಣಾ ಸಮಿತಿಯಿಂದ ಮಹಾರಾಷ್ಟ್ರದಲ್ಲಿ (21%) ಅತಿಹೆಚ್ಚು ಬಾಲ್ಯವಿವಾಹಗಳಿಗೆ ತಡೆ ನೀಡಿದ್ದರೆ, ಸಮುದಾಯದ ಸಹಕಾರದಿಂದ ಬಿಹಾರದಲ್ಲಿ ಶೇ.36ರಷ್ಟು ಬಾಲ್ಯವಿವಾಹಗಳನ್ನು ನಿಲ್ಲಿಸಲಾಗಿದೆ.

ಈ ಪೈಕಿ ಶೇ.60ರಷ್ಟು ಯುವತಿಯರು 15-18 ವಯಸ್ಸಿನವರಾಗಿದ್ದರೆ, ಶೇ.26ರಷ್ಟು ಯುವತಿಯರು 10-14 ವಯಸ್ಸಿನವರಾಗಿದ್ದಾರೆ. ಅಲ್ಲದೆ ಅತಿಹೆಚ್ಚು ಮಹಿಳಾ ಸಾಕ್ಷರತೆಯನ್ನು ಹೊಂದಿರುವ ಕೇರಳದಲ್ಲಿ ಕೇವಲ ಶೇ.6ರಷ್ಟು ಬಾಲ್ಯವಿವಾಹ ದಾಖಲಾಗಿದ್ದರೆ, ಅತೀ ಕಡಿಮೆ ಮಹಿಳಾ ಸಾಕ್ಷರತೆಯನ್ನು ಹೊಂದಿರುವ ಬಿಹಾರದಲ್ಲಿ ಶೇ.61ರಷ್ಟು ಬಾಲ್ಯವಿವಾಹ ದಾಖಲಾಗುವುದರೊಂದಿಗೆ ಅಗ್ರಸ್ಥಾನದಲ್ಲಿದೆ.