ಪಿವಿಎನ್‌, ಚರಣ್‌ ಸಿಂಗ್‌ ಸೇರಿ ನಾಲ್ವರಿಗೆ ಮರಣೋತ್ತರ ಭಾರತರತ್ನ ಪ್ರದಾನ

| Published : Mar 31 2024, 02:08 AM IST / Updated: Mar 31 2024, 09:25 AM IST

ಪಿವಿಎನ್‌, ಚರಣ್‌ ಸಿಂಗ್‌ ಸೇರಿ ನಾಲ್ವರಿಗೆ ಮರಣೋತ್ತರ ಭಾರತರತ್ನ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾಮಿನಾಥನ್‌, ಕರ್ಪೂರಿ ಠಾಕೂರ್‌ಗೂ ಗೌರವ ನೀಡಲಾಗಿದ್ದು, ನಾಲ್ವರ ಕುಟುಂಬಸ್ಥರಿಂದ ಭಾರತರತ್ನ ಸ್ವೀಕಾರ ಆಗಿದೆ.

 ನವದೆಹಲಿ :  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹ ರಾವ್‌, ಚೌಧರಿ ಚರಣ್‌ ಸಿಂಗ್‌, ಕೃಷಿ ವಿಜ್ಞಾನಿ ಎಂ.ಎಸ್‌.ಸ್ವಾಮಿನಾಥನ್‌ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌ ಅವರಿಗೆ ಶನಿವಾರ ಮರಣೋತ್ತರ ಭಾರತರತ್ನ ಗೌರವ ಪ್ರದಾನ ಮಾಡಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ನಾಲ್ವರು ಗಣ್ಯರ ಕುಟುಂಬಸ್ಥರು ದೇಶದ ಅತ್ಯುಚ್ಚ ನಾಗರಿಕ ಗೌರವವನ್ನು ಸ್ವೀಕರಿಸಿದರು.

ನರಸಿಂಹ ರಾವ್‌ ಅವರ ಪುತ್ರ ಪಿ.ವಿ.ಪ್ರಭಾಕರ ರಾವ್‌, ಚರಣ್‌ ಸಿಂಗ್‌ ಅವರ ಪುತ್ರ ಜಯಂತ ಚೌಧರಿ, ಸ್ವಾಮಿನಾಥನ್‌ ಅವರ ಪುತ್ರಿ ನಿತ್ಯಾ ರಾವ್‌ ಹಾಗೂ ಕರ್ಪೂರಿ ಠಾಕೂರ್‌ ಅವರ ಪುತ್ರ ರಾಮನಾಥ್‌ ಠಾಕೂರ್‌ ಅವರು ರಾಷ್ಟ್ರಪತಿಗಳಿಂದ ತಮ್ಮ ತಂದೆಗೆ ಸಂದ ಗೌರವವನ್ನು ಸ್ವೀಕರಿಸಿದರು.

ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಇದೇ ವೇಳೆ ಭಾರತರತ್ನ ಪುರಸ್ಕೃತರ ಸಾಧನೆಯನ್ನು ‘ಎಕ್ಸ್‌’ನಲ್ಲಿ ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ, ‘ಆಧುನಿಕ ಭಾರತದ ನಿರ್ಮಾಣಕ್ಕೆ ಪಿವಿಎನ್‌ ನೀಡಿದ ಕೊಡುಗೆ ಬಹಳ ದೊಡ್ಡದು. ಕರ್ಪೂರಿ ಠಾಕೂರ್‌ ಅವರು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಸ್ವಾಮಿನಾಥನ್‌ ಅವರು ಕೃಷಿ ವಿಜ್ಞಾನ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.

ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಸೇರಿದಂತೆ ಐವರು ಸಾಧಕರಿಗೆ ಈ ವರ್ಷ ಭಾರತರತ್ನ ಘೋಷಿಸಲಾಗಿದೆ. ಅವರಲ್ಲಿ ನಾಲ್ವರಿಗೆ ಮರಣೋತ್ತರವಾಗಿ ಗೌರವ ಸಂದಿದೆ.