ಆ್ಯಂಬುಲೆನ್ಸ್‌ನಿಂದ ಸರಣಿ ಅಪಘಾತ: 3 ಕಾರು, ಬೈಕ್‌ ಜಖಂ

| Published : Apr 28 2024, 01:22 AM IST / Updated: Apr 28 2024, 04:50 AM IST

ಆ್ಯಂಬುಲೆನ್ಸ್‌ನಿಂದ ಸರಣಿ ಅಪಘಾತ: 3 ಕಾರು, ಬೈಕ್‌ ಜಖಂ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ರಸ್ತೆಯ ಗುಡ್ಡದಹಳ್ಳಿ ಬಳಿ ಆ್ಯಂಬುಲೆನ್ಸ್‌ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂರು ಕಾರು ಮತ್ತು ಒಂದು ದ್ವಿಚಕ್ರ ವಾಹನ ಜಖಂ ಆಗಿರುವ ಘಟನೆ ನಡೆದಿದೆ.

 ಬೆಂಗಳೂರು :  ಮೈಸೂರು ರಸ್ತೆಯ ಗುಡ್ಡದಹಳ್ಳಿ ಬಳಿ ಆ್ಯಂಬುಲೆನ್ಸ್‌ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂರು ಕಾರು ಮತ್ತು ಒಂದು ದ್ವಿಚಕ್ರ ವಾಹನ ಜಖಂ ಆಗಿರುವ ಘಟನೆ ನಡೆದಿದೆ.

ಶುಕ್ರವಾರ ರಾತ್ರಿ 10.45ರ ಸುಮಾರಿಗೆ ಈ ಸರಣಿ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಗರ್ಭಿಣಿ ಮತ್ತು ದ್ವಿಚಕ್ರ ವಾಹನ ಸವಾರನಿಗೆ ಗಾಯಗಳಾಗಿವೆ. ಘಟನೆ ಸಂಬಂಧ ಆ್ಯಂಬುಲೆನ್ಸ್‌ ಚಾಲಕ ಸುಮಂತ್‌(23) ಎಂಬಾತನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ರಸ್ತೆಯಲ್ಲಿ ಕೆ.ಆರ್‌.ಮಾರ್ಕೆಟ್‌ ಕಡೆಯಿಂದ ಗುಡ್ಡದಹಳ್ಳಿ ಮಾರ್ಗವಾಗಿ ಬರುವಾಗ ಈ ಘಟನೆ ನಡೆದಿದೆ. ವೇಗವಾಗಿ ಆ್ಯಂಬುಲೆನ್ಸ್‌ ಚಾಲನೆ ಮಾಡಿದಾಗ ನಿಯಂತ್ರಣ ತಪ್ಪಿದೆ. ಆ್ಯಂಬುಲೆನ್ಸ್‌ ಗುಡ್ಡದಹಳ್ಳಿ ಜಂಕ್ಷನ್‌ನಲ್ಲಿ ಕಾರೊಂದಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಆ್ಯಂಬುಲೆನ್ಸ್‌ ಚಾಲಕ ಸುಮಂತ್‌ ಮತ್ತಷ್ಟು ಗಾಬರಿಗೆ ಒಳಗಾಗಿ ಬ್ರೇಕ್‌ ತುಳಿಯುವ ಬದಲು ಎಕ್ಸಿಲೇಟರ್‌ ತುಳಿದಿದ್ದಾನೆ. ಆಗ ಮತ್ತೆರಡು ಕಾರು ಹಾಗೂ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದೆ.

ಕಾರಿನಲ್ಲಿದ್ದ ಗರ್ಭಿಣಿ ಅಪಾಯದಿಂದ ಪಾರು

ಈ ಸರಣಿ ಅಪಘಾತದ ವೇಳೆ ಕಾರೊಂದರಲ್ಲಿ ಇದ್ದ ನಾಲ್ಕು ತಿಂಗಳ ಗರ್ಭಿಣಿಗೆ ಪೆಟ್ಟು ಬಿದ್ದಿದ್ದು, ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರು ಗಾಯಗಳಿಗೆ ಚಿಕಿತ್ಸೆ ನೀಡಿದ್ದಾರೆ. ಸದ್ಯಕ್ಕೆ ಗಾಯಾಳು ಗರ್ಭಿಣಿಗೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.--

ಆ್ಯಂಬುಲೆನ್ಸ್‌ನಲ್ಲಿ ರೋಗಿ ಇರಲಿಲ್ಲ:

ಸರಣಿ ಅಪಘಾತದ ವೇಳೆ ಆ್ಯಂಬುಲೆನ್ಸ್‌ನಲ್ಲಿ ಯಾವುದೇ ರೋಗಿ ಇರಲಿಲ್ಲ. ರೋಗಿಯನ್ನು ಕರೆತರಲು ತೆರಳುವಾಗ ಚಾಲಕ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಮಾಡಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಆ್ಯಂಬುಲೆನ್ಸ್‌ ಚಾಲಕ ಸುಮಂತ್‌ ಘಟನೆ ವೇಳೆ ಮದ್ಯ ಸೇವಿಸಿರುವುದು ಕಂಡು ಬಂದಿಲ್ಲ. ಆತನಿಗೆ ಚಾಲನೆಯ ಅನುಭವ ಕಡಿಮೆ ಇರುವುದು ತಿಳಿದುಬಂದಿದೆ. ಘಟನೆ ಸಂಬಂಧ ಆ್ಯಂಬುಲೆನ್ಸ್‌ ಜಪ್ತಿ ಮಾಡಲಾಗಿದೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.