ಕೆಲಸಕ್ಕಿದ್ದ ಚಿನ್ನ, ವಜ್ರ ಕದ್ದ ಕೆಲಸಗಾರನ ಬಂಧನ

| Published : Apr 24 2024, 02:16 AM IST

ಸಾರಾಂಶ

ಕೆಲಸಕ್ಕೆ ಇದ್ದ ಮನೆಯಲ್ಲೇ 50 ಲಕ್ಷ ಮೌಲ್ಯದ ಚಿನ್ನ, ವಜ್ರದ ಆಭರಣಗಳನ್ನು ದೋಚಿ ಪರಾರಿ ಆಗುತ್ತಿದ್ದ ಕೆಲಸಗಾರನನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮನೆಯಲ್ಲಿ ವಜ್ರ ಸೇರಿದಂತೆ ₹50 ಲಕ್ಷದ ಆಭರಣ ಕದ್ದು ಪರಾರಿಯಾಗಿದ್ದ ಕೆಲಸಗಾರನನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ಸುರೇಂದ್ರ ಕಾಮತ್‌ ಬಂಧಿತನಾಗಿದ್ದು, ಆರೋಪಿಯಿಂದ ₹50 ಲಕ್ಷ ಮೌಲ್ಯದ 502 ಗ್ರಾಂ ಚಿನ್ನಾಭರಣ ಹಾಗೂ 99.5 ಗ್ರಾಂ ವಜ್ರದ ಒಡವೆ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಮನೆ ಮಾಲೀಕ ಪರಿವಾರ ಹೊರ ಹೋಗಿದ್ದಾಗ ಚಿನ್ನಾಭರಣ ಕದ್ದು ಕಾಮತ್‌ ಪರಾರಿಯಾಗಿದ್ದ. ಈ ಬಗ್ಗೆ ಮನೆ ಮಾಲಿಕ ಅಮಿತ್ ಜೈನ್‌ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ತನ್ನೂರು ಬಿಹಾರಕ್ಕೆ ತೆರಳುವ ಮಾರ್ಗ ಮಧ್ಯೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ಆತನನ್ನು ಬಂಧಿಸಿ ಕರೆ ತಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕುಟುಂಬದ ಜತೆ ದೊಡ್ಡನೆಕ್ಕುಂದಿಯ ವಿಲ್ಲಾದಲ್ಲಿ ಅಮಿತ್ ಜೈನ್ ನೆಲೆಸಿದ್ದಾರೆ. ಕಳೆದ ಆರು ತಿಂಗಳಿಂದ ಅವರ ಮನೆಯಲ್ಲಿ ಸುರೇಂದ್ರ ಕಾಮತ್ ಕೆಲಸಕ್ಕಿದ್ದ. ಅದೇ ಮನೆ ಮಹಡಿಯಲ್ಲಿ ಆತ ವಾಸವಾಗಿದ್ದ. ಏ.12ರಂದು ಮನೆ ಮಾಲೀಕರ ಕುಟುಂಬ ಮುಂಬೈ ತೆರಳಿದ ಬಳಿಕ ಆರೋಪಿ, ಮನೆಯಲ್ಲಿದ್ದ ಆಭರಣ ಕದ್ದು ಪರಾರಿಯಾಗಿದ್ದ. ಮೂರು ದಿನಗಳ ಬಳಿಕ ಮನೆಗೆ ಮಾಲಿಕರು ಮರಳಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗುಜರಿ ವ್ಯಾಪಾರಿಯ ಸುಲಿದಿದ್ದ ಪೊಲೀಸ್‌ ಭಾತ್ಮೀದಾರ ಜೈಲಿಗೆಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಪೊಲೀಸರ ಸೋಗಿನಲ್ಲಿ ಗುಜರಿ ವ್ಯಾಪಾರಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಎರಡು ಲಕ್ಷ ರುಪಾಯಿ ಸುಲಿಗೆ ಮಾಡಿದ್ದ ಪೊಲೀಸ್ ಮಾಹಿತಿದಾರನೊಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.

ನಲ್ಲೂರಹಳ್ಳಿಯ ಎಸ್‌.ನಿವಾಸ್ ಬಂಧಿತನಾಗಿದ್ದು, ಈ ಕೃತ್ಯ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿರುವ ಮತ್ತೊಬ್ಬ ಪೊಲೀಸ್ ಮಾಹಿತಿದಾರ ಮೌಶಿಶ್ ಪತ್ತೆಗೆ ತನಿಖೆ ನಡೆದಿದೆ.

ಗುಜರಿ ವಹಿವಾಟು ನಡೆಸುವ ಅಖ್ತರ್, ನಲ್ಲೂರಹಳ್ಳಿ ಕೆರೆ ಸಮೀಪ ನೆಲೆಸಿದ್ದಾರೆ. ಇನ್ನು ಆರೋಪಿಗಳಾದ ನಿವಾಸ್ ಹಾಗೂ ಮೌಶಿಶ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು, ಸ್ಥಳೀಯವಾಗಿ ನಡೆಯುವ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ರಹಸ್ಯವಾಗಿ ಮಾಹಿತಿ ನೀಡುತ್ತಿದ್ದರು. ಪೊಲೀಸರ ಈ ಸ್ನೇಹವನ್ನು ದುರ್ಬಳಕೆ ಮಾಡಿಕೊಂಡ ಆರೋಪಿಗಳು, ಏ.17ರಂದು ಅಖ್ತರ್ ಅವರಿಗೆ ‘ನೀನು ಗುಜರಿ ಹೆಸರಿನಲ್ಲಿ ಅಕ್ರಮ ನಡೆಸುತ್ತಿರುವ ಬಗ್ಗೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ’ ಎಂದು ಬೆದರಿಸಿ ಹಣ ಸುಲಿಗೆ ಮಾಡಿದ್ದರು. ಇದಾದ ಬಳಿಕ ಆರೋಪಿಗಳ ಬಗ್ಗೆ ವಿಚಾರಿಸಿದಾಗ ನಕಲಿ ಪೊಲೀಸರು ಎಂಬುದು ಗೊತ್ತಾಗಿದೆ. ತಕ್ಷಣವೇ ವೈಟ್‌ಫೀಲ್ಡ್‌ ಠಾಣೆಗೆ ತೆರಳಿ ಸಂತ್ರಸ್ತ ದೂರು ಸಲ್ಲಿಸಿದರು. ಅದರನ್ವಯ ಕಾರ್ಯಾಚರಣೆಗಿಳಿದ ಪೊಲೀಸರು, ಸುಲಿಗೆಕೋರರ ಪೈಕಿ ಒಬ್ಬಾತನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.