ಒಂಟಿ ಮಹಿಳೆಯ ಕೊಂದಿದ್ದು ಇನ್‌ಸ್ಟಾಗ್ರಾಂ ಸ್ನೇಹಿತ!

| Published : Apr 24 2024, 02:23 AM IST

ಒಂಟಿ ಮಹಿಳೆಯ ಕೊಂದಿದ್ದು ಇನ್‌ಸ್ಟಾಗ್ರಾಂ ಸ್ನೇಹಿತ!
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಿಗೆಹಳ್ಳಿ ಬಳಿಯ ಗಣೇಶನಗರದಲ್ಲಿ ಒಂಟಿ ಮಹಿಳೆಯ ಕೊಲೆ ರಹಸ್ಯ ಭೇದಿಸಿರುವ ಪೊಲೀಸರು, ಆಕೆಯ ಇನ್‌ಸ್ಟಾಗ್ರಾಂ ಗೆಳೆಯನನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚಿಗೆ ಗಣೇಶ ನಗರದಲ್ಲಿ ನಡೆದಿದ್ದ ಖಾಸಗಿ ಚಾಲನಾ ತರಬೇತಿ ಶಾಲೆಯ ಮುಖ್ಯಸ್ಥೆ ಶೋಭಾ (48) ಕೊಲೆ ಪ್ರಕರಣ ಸಂಬಂಧ ಮೃತಳ ಆನ್‌ಲೈನ್‌ ಸ್ನೇಹಿತನೊಬ್ಬನನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ರಸ್ತೆ ಹೇರೋಹಳ್ಳಿ ನಿವಾಸಿ ನವೀನ್‌ಗೌಡ (28) ಬಂಧಿತನಾಗಿದ್ದು, ಆರೋಪಿಯಿಂದ ಮೊಬೈಲ್ ಜಪ್ತಿ ಮಾಡಲಾಗಿದೆ. ಏ.19 ರಂದು ರಾತ್ರಿ ಶೋಭಾ ಅವರ ಮನೆಗೆ ಬಂದು ಕೊಲೆ ಮಾಡಿ ಕಾರು ಹಾಗೂ ಆಭರಣ ದೋಚಿ ಆತ ಪರಾರಿಯಾಗಿದ್ದ. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ನವೀನ್‌ನನ್ನು ಪತ್ತೆ ಹಚ್ಚಿದ್ದಾರೆ.

ಪ್ರಾಣಕ್ಕೆ ಕುತ್ತು ತಂದ ಇನ್‌ಸ್ಟಾಗ್ರಾಂ ಗೆಳೆಯ:

ಹೆಬ್ಬಾಳ ಸಮೀಪ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಮೈಸೂರಿನ ನವೀನ್‌ಗೌಡ, ಹೇರೊಹಳ್ಳಿಯಲ್ಲಿ ವಾಸವಾಗಿದ್ದ. ಎರಡು ತಿಂಗಳ ಹಿಂದೆ ಆತನಿಗೆ ಇನ್‌ಸ್ಟಾಗ್ರಾಂ ಮೂಲಕ ಶೋಭಾ ಪರಿಚಯವಾಗಿದ್ದಳು. ಬಳಿಕ ಪರಸ್ಪರ ಮೊಬೈಲ್ ನಂಬರ್ ವಿನಿಮಯವಾಗಿ ನಿರಂತರ ಚಾಟಿಂಗ್ ಶುರುವಾಯಿತು. ಈ ಸ್ನೇಹದಲ್ಲಿ ತಿಂಗಳ ಹಿಂದೆ ಸಂಜಯ ನಗರದ ಬಳಿ ಹೋಟೆಲ್‌ಗೆ ಗೆಳೆಯನನ್ನು ಊಟಕ್ಕೆ ಆಕೆ ಆಹ್ವಾನಿಸಿದ್ದಳು. ಈ ಭೇಟಿ ಬಳಿಕ ಅವರಲ್ಲಿ ‘ಆಪ್ತತೆ’ ಹೆಚ್ಚಾಯಿತು.

ಇನ್ನು ಕೊಡಿಗೇಹಳ್ಳಿ ಸಮೀಪ ಚಾಲನಾ ತರಬೇತಿ ಶಾಲೆ ನಡೆಸುತ್ತಿದ್ದ ಶೋಭಾ, ಕಳೆದ ಡಿಸೆಂಬರ್ ತಿಂಗಳಿಂದ ತಮ್ಮ ಎರಡನೇ ಪುತ್ರಿ ಜತೆ ಗಣೇಶನಗರದಲ್ಲಿ ವಾಸವಾಗಿದ್ದರು. ಚಿಕ್ಕಪೇಟೆಯಲ್ಲಿ ಆಕೆ ಪತಿ ಹಾಗೂ ಹಿರಿಯ ಪುತ್ರಿ ವಾಸವಾಗಿದ್ದರು. ಹದಿನೈದು ದಿನಗಳ ಹಿಂದೆ ಅವರ ಎರಡನೇ ಪುತ್ರಿಗೆ ವಿವಾಹವಾಗಿತ್ತು. ಏ.18ರಂದು ಜೆ.ಪಿ.ನಗರದಲ್ಲಿದ್ದ ಗಂಡನ ಮನೆಗೆ ಮಗಳು ತೆರಳಿದ ರಾತ್ರಿಯೇ ಸ್ನೇಹಿತ ನವೀನ್‌ಗೆ ಮನೆಗೆ ಬರುವಂತೆ ಶೋಭಾ ಆಹ್ವಾನಿಸಿದ್ದಳು.

ಅಂತೆಯೇ ಕೊಡಿಗೇಹಳ್ಳಿಗೆ ರಾತ್ರಿ ಬಂದ ಗೆಳೆಯನನ್ನು ತಾನೇ ಕಾರಿನಲ್ಲಿ ಹೋಗಿ ಆಕೆ ಕರೆತಂದಿದ್ದಳು. ನಂತರ ಇಬ್ಬರು ರಾತ್ರಿ ’ಆತ್ಮೀಯ’ವಾಗಿ ಸಮಯ ಕಳೆದಿದ್ದರು. ನಸುಕಿನಲ್ಲಿ ಶೋಭಾಳ ಕುತ್ತಿಗೆ ಹಿಸುಕಿ ಕೊಂದು ಆಕೆ ಕಾರು ತೆಗೆದುಕೊಂಡು ನವೀನ್ ಪರಾರಿಯಾಗಿದ್ದ. ಮರುದಿನ ಬೆಳಗ್ಗೆ ಮೃತಳಿಗೆ ಆಕೆಯ ಮಗಳು ಕರೆ ಮಾಡಿ ಮೊಬೈಲ್ ಸ್ವಿಚ್ಚ್ ಆಫ್ ಆಗಿತ್ತು. ಆಗ ತಾಯಿ ಮನೆಗೆ ಮಗಳು ಬಂದಾಗ ಕೊಲೆ ಕೃತ್ಯ ಬಯಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಶೋಭಾಳಿಗೆ ಕೃತ್ಯ ನಡೆದ ದಿನ ಕರೆ ಮಾಡಿದ್ದ ವ್ಯಕ್ತಿಯ ಜಾಡು ಹಿಡಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಲವು ಸ್ನೇಹಿತರ ಜತೆ ಆತ್ಮೀಯತೆ

ಹತ್ಯೆ ಪ್ರಕರಣದ ತನಿಖೆಗಿಳಿದ ಪೊಲೀಸರು, ಮೃತಳ ಸಂಪರ್ಕ ಜಾಲ ಪರಿಶೀಲಿಸಿದಾಗ ಮೃತಳ ಸ್ನೇಹ ಬಳಗ ದೊಡ್ಡದು ಎಂಬುದು ಗೊತ್ತಾಗಿದೆ. ಆಕೆಯ ಆಪ್ತ ಒಡನಾಟದಲ್ಲಿ ಸುಮಾರು 15ಕ್ಕೂ ಹೆಚ್ಚಿನ ಮಂದಿ ಇದ್ದರು. ಆ ಪೈಕಿ ಕೆಲವರನ್ನು ಪೊಲೀಸರು ವಿಚಾರಣೆ ಕೂಡ ನಡೆಸಿದ್ದಾರೆ. ಆಗಲೇ ನವೀನ್ ಕುರಿತು ಸುಳಿವು ಸಿಕ್ಕಿದೆ ಎನ್ನಲಾಗಿದೆ.

ಸ್ನೇಹ ದುರ್ಬಳಕೆ ಆರೋಪ: ಕೆಲ ಯುವಕರ ಜತೆ ಮೃತ ಶೋಭಾ ಸಲುಗೆ ಹೊಂದಿದ್ದರು. ಈ ಸ್ನೇಹವನ್ನು ದುರ್ಬಳಕೆ ಮಾಡಿಕೊಂಡ ಆಕೆ, ಆ ಯುವಕರ ವೈಯಕ್ತಿಕ ಬದುಕಿಗೆ ಸಹ ತೊಂದರೆ ಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ.