ಇರಾನ್‌ ಮೇಲೆ ಇಸ್ರೇಲ್ ಪ್ರತೀಕಾರ?

| Published : Apr 20 2024, 01:35 AM IST / Updated: Apr 20 2024, 04:05 AM IST

ಸಾರಾಂಶ

ಡ್ರೋನ್‌ಗಳನ್ನು ಹೊಡೆದುರುಳಿಸಿದ ಇರಾನ್‌ ಸೇನೆ ದಾಳಿ ಬಗ್ಗೆ ಇಸ್ರೇಲ್‌, ಇರಾನ್‌ ದೇಶಗಳು ಮೌನ ವಹಿಸಿವೆ. ಈ ಮೂಲಕ 300 ಕ್ಷಿಪಣಿ-ಡ್ರೋನ್‌ ದಾಳಿಗೆ ಇಸ್ರೇಲ್‌ ಪ್ರತ್ಯುತ್ತರ ನೀಡಿದೆಯೇ ಎಂಬ ಪ್ರಶ್ನೆ ಜಾಗತಿಕ ಸಮುದಾಯವನ್ನು ಕಾಡಿದೆ.

ದುಬೈ: ತನ್ನ ಪ್ರಮುಖ ವಾಯುನೆಲೆ ಹಾಗೂ ಅಣ್ವಸ್ತ್ರ ಘಟಕವೊಂದರ ಬಳಿ ಹಾರಾಡುತ್ತಿದ್ದ ಡ್ರೋನ್‌ಗಳನ್ನು ಇರಾನ್‌ ಶುಕ್ರವಾರ ಮುಂಜಾನೆ ಹೊಡೆದುರುಳಿಸಿದೆ. ಕಳೆದ ಶನಿವಾರ 300ಕ್ಕೂ ಹೆಚ್ಚು ಕ್ಷಿಪಣಿ ಹಾಗೂ ಡ್ರೋನ್‌ಗಳ ಮೂಲಕ ದಾಳಿ ನಡೆಸಿದ್ದ ಇರಾನ್‌ ಮೇಲೆ ಇಸ್ರೇಲ್‌ ಡ್ರೋನ್‌ಗಳ ದಾಳಿ ಮೂಲಕ ಪ್ರತೀಕಾರಕ್ಕೆ ಯತ್ನಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಡ್ರೋನ್‌ಗಳನ್ನು ಹೊಡೆದುರುಳಿಸಿರುವ ಬಗ್ಗೆ ಇರಾನ್‌, ಅದನ್ನು ದಾಳಿಗೆ ಉಡಾವಣೆ ಮಾಡಿದ್ದರ ಬಗ್ಗೆ ಇಸ್ರೇಲ್‌ ಅಧಿಕೃತವಾಗಿ ಬಾಯಿಬಿಟ್ಟಿಲ್ಲ.

ಅಮೆರಿಕ ಅಧಿಕಾರಿಗಳು ಕೂಡ ದಾಳಿ ಬಗ್ಗೆ ಮೌನದಿಂದ ಇದ್ದಾರೆ. ಆದರೆ ಅಮೆರಿಕದ ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಗಳನ್ನು ಉಲ್ಲೇಖಿಸಿ ಅಮೆರಿಕದ ಸುದ್ದಿಸಂಸ್ಥೆಗಳು ಇರಾನ್‌ ಮೇಲೆ ಇಸ್ರೇಲ್‌ ದಾಳಿ ನಡೆಸಿದೆ ಎಂದು ವರದಿಯನ್ನು ಮಾಡಿವೆ. ಇರಾನ್‌ನ ಪರಮೋಚ್ಚ ನಾಯಕ ಅಯತೋಲ್ಲಾ ಅಲಿ ಖಮೀನಿ ಅವರ 85ನೇ ಜನ್ಮದಿನದಂದೇ ಈ ದಾಳಿ ನಡೆದಿರುವುದು ಗಮನಾರ್ಹ.

ಡ್ರೋನ್‌ಗಳನ್ನು ಹೊಡೆದುರುಳಿಸಿದ ಬೆನ್ನಲ್ಲೇ ದುಬೈ ಮೂಲದ ವಿಮಾನಯಾನ ಸಂಸ್ಥೆಗಳಾದ ಎಮಿರೇಟ್ಸ್‌ ಹಾಗೂ ಫ್ಲೈ ದುಬೈ ಕಂಪನಿಗಳು ಇರಾನ್‌ ವಾಯು ಮಾರ್ಗದಲ್ಲಿ ಸಂಚರಿಸಬೇಕಿದ್ದ ತಮ್ಮ ವಿಮಾನಗಳ ಮಾರ್ಗವನ್ನು ಬದಲಾವಣೆ ಮಾಡಿವೆ.

4 ದಶಕಗಳಿಂದ ಇರಾನ್‌ ಹಾಗೂ ಇಸ್ರೇಲ್‌ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಆದರೆ ಎಂದೂ ಅದು ಎರಡೂ ದೇಶಗಳ ನಡುವಣ ಯುದ್ಧಕ್ಕೆ ಕಾರಣವಾಗಿರಲಿಲ್ಲ. ಏಪ್ರಿಲ್‌ ಮೊದಲ ವಾರದಲ್ಲಿ ಸಿರಿಯಾದಲ್ಲಿನ ಇರಾನ್‌ ದೂತಾವಾಸದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಇರಾನ್‌ನ ಇಬ್ಬರು ಜನರಲ್‌ಗಳು ಹತರಾಗಿದ್ದರು. ಆ ಬಳಿಕ ಆಕ್ರೋಶದಿಂದ ಕುದಿಯುತ್ತಿದ್ದ ಇರಾನ್‌, ಕಳೆದ ಶನಿವಾರ ಇಸ್ರೇಲ್‌ ಮೇಲೆ 300ಕ್ಕೂ ಹೆಚ್ಚು ಕ್ಷಿಪಣಿ, ಡ್ರೋನ್‌ಗಳನ್ನು ಬಳಸಿ ದಾಳಿ ಮಾಡಿತ್ತು. ಅದರಲ್ಲಿ ಶೇ.99ರಷ್ಟನ್ನು ಇಸ್ರೇಲ್‌ ಹೊಡೆದುರುಳಿಸಿತ್ತು.

ಇರಾನ್‌ನ ಈ ದಾಳಿಗೆ ಸೂಕ್ತ ಸಮಯದಲ್ಲಿ ಪ್ರತ್ಯುತ್ತರ ನೀಡುವುದಾಗಿ ಇಸ್ರೇಲ್‌ ಘೋಷಣೆ ಮಾಡಿತ್ತು. ಹೀಗಾಗಿ ಅಂದಿನಿಂದಲೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇತ್ತು.