ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣ : ಪ್ರಜ್ವಲ್‌ಗೆ ಬ್ಲೂಕಾರ್ನರ್‌ ಬಿಸಿ

| Published : May 08 2024, 01:34 AM IST / Updated: May 08 2024, 07:05 AM IST

ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣ : ಪ್ರಜ್ವಲ್‌ಗೆ ಬ್ಲೂಕಾರ್ನರ್‌ ಬಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಯಾಗಿದೆ.

 ಬೆಂಗಳೂರು :  ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಯಾಗಿದೆ.

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್‌ ಬಗ್ಗೆ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸಿಬಿಐ ಮುಖಾಂತರ ಇಂಟರ್‌ಪೋಲ್‌ಗೆ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೆ ಮನವಿ ಮಾಡಿದ್ದರು. ಎಸ್ಐಟಿ ಅಧಿಕಾರಿಗಳಿಂದ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದ ಸಿಬಿಐ ಆ ಮಾಹಿತಿಯನ್ನು ಇಂಟರ್‌ಪೋಲ್‌ಗೆ ನೀಡಿತ್ತು. ಇದರ ಬೆನ್ನಲ್ಲೇ ಇಂಟರ್‌ಪೋಲ್‌ ಪ್ರಜ್ವಲ್‌ ರೇವಣ್ಣ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಜಾರಿಗೊಳಿಸಿದೆ. ಈ ಬಗ್ಗೆ ಇಂಟರ್‌ಪೋಲ್‌ ಅಧಿಕಾರಿಗಳು ಎಸ್‌ಐಟಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿದೇಶದಲ್ಲಿ ಪ್ರಜ್ವಲ್‌ ಮೇಲೆ ನಿಗಾ:

ಬ್ಲೂ ಕಾರ್ನರ್‌ ನೋಟಿಸ್‌ ಅನ್ವಯ ತನ್ನ 196 ಸದಸ್ಯ ರಾಷ್ಟ್ರಗಳಿಗೆ ಇಂಟರ್‌ಪೋಲ್‌ ಪ್ರಜ್ವಲ್‌ ರೇವಣ್ಣ ಬಗ್ಗೆ ಮಾಹಿತಿ ನೀಡಿದೆ. ಹೀಗಾಗಿ ಇನ್ನುಮುಂದೆ ಪ್ರಜ್ವಲ್‌ ಈ ದೇಶಗಳ ವಿಮಾನ ನಿಲ್ದಾಣ, ಬಂದರು, ಗಡಿ ಪ್ರದೇಶಗಳಲ್ಲಿ ಕಾಣಿಸಿಕೊಂಡರೆ ಸ್ಥಳೀಯ ಪೊಲೀಸರು, ಇಂಟರ್‌ಪೋಲ್‌ಗೆ ಮಾಹಿತಿ ನೀಡಲಿದ್ದಾರೆ. ಇಂಟರ್‌ಪೋಲ್‌ ಅಧಿಕಾರಿಗಳು ಎಸ್ಐಟಿ ಅಧಿಕಾರಿಗಳಿಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಈ ಮೂಲಕ ಎಸ್‌ಐಟಿ ಅಧಿಕಾರಿಗಳು ಆರೋಪಿ ಪ್ರಜ್ವಲ್‌ ರೇವಣ್ಣ ಅವರ ವಿದೇಶದಲ್ಲಿನ ಚಲನವಲನದ ಮೇಲೆ ನಿಗಾ ವಹಿಸಲಿದ್ದಾರೆ.

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಎರಡು ದಿನ ಇರುವಾಗ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಮತದಾನ ಮುಗಿದ ಮಾರನೇ ಮುಂಜಾನೆಯೇ ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್‌ ಪಡೆದು ಜರ್ಮನಿಗೆ ತೆರಳಿದ್ದರು.

ಎರಡು ಬಾರಿ ನೋಟಿಸ್, ಲುಕೌಟ್‌ ನೋಟಿಸ್‌:

ಪ್ರಜ್ವಲ್‌ ವಿರುದ್ಧ ಹೊಳೆನರಸೀಪುರ ಟೌನ್‌ ಪೊಲೀಸ್‌ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಸಿಐಡಿ ಠಾಣೆಯಲ್ಲಿ ಅತ್ಯಾಚಾರ ಆರೋಪದಡಿ ಪ್ರತ್ಯೇಕವಾಗಿ ಎರಡು ಎಫ್‌ಐಆರ್‌ ದಾಖಲಾಗಿವೆ. ಪ್ರಜ್ವಲ್‌ ಇದ್ದಾರೆ ಎನ್ನಲಾದ ಅಶ್ಲೀಲ ವಿಡಿಯೊಗಳ ಸಂಬಂಧ ಎಸ್‌ಐಟಿ ತನಿಖೆ ಕೈಗೊಂಡಿದ್ದು, ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್‌ಗೆ ನೋಟಿಸ್‌ ನೀಡಿತ್ತು. ಆದರೆ, ಪ್ರಜ್ವಲ್‌ ವಿದೇಶದಲ್ಲಿ ಇರುವುದರಿಂದ ಗೈರು ಹಾಜರಾಗಿದ್ದಾರೆ.

ಈಗಾಗಲೇ ಎಸ್ಐಟಿ ಲುಕೌಟ್‌ ನೋಟಿಸ್‌ ಹೊರಡಿಸಿದೆ. ಎಸ್ಐಟಿಯ ಒಂದು ತಂಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಮೊಕ್ಕಾಂ ಹೂಡಿದೆ. ವಿದೇಶದಿಂದ ಬರುವ ಪ್ರತಿ ವಿಮಾನದ ಪ್ರಯಾಣಿಕರ ಮಾಹಿತಿಯನ್ನು ಪರಿಶೀಲಿಸುತ್ತಿದೆ. ಪ್ರಜ್ವಲ್‌ ಒಂದು ವೇಳೆ ವಾಪಸ್‌ ಆದರೆ, ವಿಮಾನ ನಿಲ್ದಾಣದಲ್ಲೇ ಎಸ್‌ಐಟಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆಯಲಿದ್ದಾರೆ.