ಕೊನೆ ಓವರ್‌ ಥ್ರಿಲ್ಲರ್‌ ಗೆದ್ದ ರಾಯಲ್ಸ್‌!

| Published : Apr 14 2024, 01:47 AM IST / Updated: Apr 14 2024, 05:19 AM IST

ಸಾರಾಂಶ

ಕೊನೆ ಓವರ್‌ ಥ್ರಿಲ್ಲರ್‌ ಗೆದ್ದ ರಾಜಸ್ಥಾನ ರಾಯಲ್ಸ್‌. ಪಂಜಾಬ್‌ ಕಿಂಗ್ಸ್‌ ವಿರುದ್ಧ 3 ವಿಕೆಟ್‌ಗಳ ರೋಚಕ ಗೆಲುವು. ಕೊನೆ ಓವರಲ್ಲಿ 2 ಸಿಕ್ಸರ್‌ ಸಿಡಿಸಿ ರಾಯಲ್ಸ್‌ಗೆ ಗೆಲುವು ತಂದುಕೊಟ್ಟ ಶಿಮ್ರೊನ್‌ ಹೆಟ್ಮೇಯರ್‌. ಅಗ್ರಸ್ಥಾನದಲ್ಲೇ ಮುಂದುವರಿದ ರಾಜಸ್ಥಾನ.

ಮುಲ್ಲಾನ್‌ಪುರ್‌: ತಾರೆಯರ ಅನುಪಸ್ಥಿತಿ, ಹಲವು ಪ್ರಯೋಗ, ಬ್ಯಾಟಿಂಗ್‌ ವೈಫಲ್ಯ, ಕಳಪೆ ಫೀಲ್ಡಿಂಗ್‌ ಹೀಗೆ ಹಲವು ಏರಿಳಿತಗಳಿಗೆ ಸಾಕ್ಷಿಯಾದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ 3 ವಿಕೆಟ್‌ಗಳ ರೋಚಕ ಗೆಲುವನ್ನು ದೋಚಿದ ರಾಜಸ್ಥಾನ ರಾಯಲ್ಸ್‌, ಗೆಲುವಿನ ಲಯಕ್ಕೆ ಮರಳಿದೆ.

ಇದರೊಂದಿಗೆ 6 ಪಂದ್ಯಗಳಲ್ಲಿ 5ನೇ ಗೆಲುವು ಸಾಧಿಸಿರುವ ರಾಜಸ್ಥಾನ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದ್ದು, ಇನ್ನೆರಡು ಮೂರು ಪಂದ್ಯ ಗೆದ್ದರೆ ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತವಾಗಲಿದೆ.

ಶಿಖರ್‌ ಧವನ್‌ ಗಾಯಗೊಂಡ ಕಾರಣ ಸ್ಯಾಮ್‌ ಕರ್ರನ್‌ ಪಂಜಾಬ್‌ ತಂಡವನ್ನು ಮುನ್ನಡೆಸಿದರೆ, ಜೋಸ್‌ ಬಟ್ಲರ್‌ ಹಾಗೂ ಆರ್‌.ಅಶ್ವಿನ್‌ ಸಂಪೂರ್ಣ ಫಿಟ್‌ ಇಲ್ಲದ ಕಾರಣ, ರಾಜಸ್ಥಾನ ತನ್ನ ತಂಡದ ಸಂಯೋಜನೆಯನ್ನೇ ಬದಲಿಸಬೇಕಾಯಿತು.

ಮೊದಲು ಬ್ಯಾಟ್‌ ಮಾಡಿದ ಕಿಂಗ್ಸ್‌, ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಮೊದಲ 10 ಓವರಲ್ಲಿ 4 ವಿಕೆಟ್‌ ಕಳೆದುಕೊಂಡು ಕೇವಲ 53 ರನ್‌ ಕಲೆಹಾಕಿತು. ದ.ಆಫ್ರಿಕಾದ ಎಡಗೈ ಸ್ಪಿನ್ನರ್‌ ಕೇಶವ್ ಮಹಾರಾಜ್‌, ಪಂಜಾಬ್‌ ಬ್ಯಾಟರ್‌ಗಳನ್ನು ಬಲವಾಗಿ ಕಾಡಿದರು.

ಜಿತೇಶ್‌ ಶರ್ಮಾ (29), ಲಿಯಾಮ್‌ ಲಿವಿಂಗ್‌ಸ್ಟೋನ್‌ (14 ಎಸೆತದಲ್ಲಿ 21 ರನ್‌), ಅಶುತೋಷ್‌ ಶರ್ಮಾ (16 ಎಸೆತದಲ್ಲಿ 31 ರನ್‌)ರ ಹೋರಾಟದಿಂದ ಪಂಜಾಬ್‌ 8 ವಿಕೆಟ್‌ಗೆ 147 ರನ್‌ ಗಳಿಸಿತು.

ಬಟ್ಲರ್‌ ಅನುಪಸ್ಥಿತಿಯಲ್ಲಿ ರಾಯಲ್ಸ್‌, ಮುಂಬೈನ ಬೌಲಿಂಗ್‌ ಆಲ್ರೌಂಡರ್‌ ತನುಷ್‌ ಕೋಟ್ಯಾನ್‌ರನ್ನು ಜೈಸ್ವಾಲ್‌ ಜೊತೆ ಇನ್ನಿಂಗ್ಸ್‌ ಆರಂಭಿಸಲು ಕಳುಹಿಸಿ ಅಚ್ಚರಿ ಮೂಡಿಸಿತು. ಚೊಚ್ಚಲ ಐಪಿಎಲ್‌ ಪಂದ್ಯವನ್ನಾಡಿದ ತನುಷ್‌, 24 ರನ್‌ ಗಳಿಸಲು 31 ಎಸೆತ ತೆಗೆದುಕೊಂಡರು. ಜೈಸ್ವಾಲ್‌ 28 ಎಸೆತದಲ್ಲಿ 39 ರನ್‌ ಗಳಿಸಿ ತಂಡಕ್ಕೆ ತಕ್ಕಮಟ್ಟಿಗೆ ಉತ್ತಮ ಆರಂಭ ಒದಗಿಸಿದರು.

ರಾಯಲ್ಸ್‌ ಗೆಲುವಿಗೆ ಕೊನೆಯ 24 ಎಸೆತದಲ್ಲಿ 43 ರನ್‌ ಅಗತ್ಯವಿತ್ತು. ಸ್ಯಾಮ್ಸನ್‌ (18), ಪರಾಗ್‌ (23), ಜುರೆಲ್‌ (06) ದೊಡ್ಡ ಕೊಡುಗೆ ನೀಡದೆ ಔಟಾದ ಕಾರಣ, ತಂಡವನ್ನು ಗೆಲ್ಲಿಸುವ ಹೊಣೆ ವಿಂಡೀಸ್‌ನ ಸ್ಫೋಟಕ ಬ್ಯಾಟರ್‌ಗಳಾದ ರೋವ್ಮನ್‌ ಪೋವೆಲ್‌ ಹಾಗೂ ಶಿಮ್ರೊನ್‌ ಹೆಟ್ಮೇಯರ್‌ ಹೆಗಲ ಮೇಲೆ ಬಿತ್ತು.

ಪೋವೆಲ್‌ 5 ಎಸೆತದಲ್ಲಿ 11 ರನ್‌ ಸಿಡಿಸಿ ಔಟಾದ ಬಳಿಕ ಕೊನೆಯ ಓವರಲ್ಲಿ ಗೆಲ್ಲಲು 10 ರನ್‌ ಬೇಕಿತ್ತು. ಹೆಟ್ಮೇಯರ್‌ ಮೊದಲೆರಡು ಎಸೆತಗಳಲ್ಲಿ ರನ್‌ ಗಳಿಸದೆ ಇದ್ದರೂ, ಆ ಬಳಿಕ 2 ಸಿಕ್ಸರ್‌ ಚಚ್ಚಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. 10 ಎಸೆತದಲ್ಲಿ 27 ರನ್‌ ಗಳಿಸಿದರು. ಸ್ಕೋರ್‌: ಪಂಜಾಬ್‌ 20 ಓವರಲ್ಲಿ 147/8 (ಅಶುತೋಷ್‌ 31, ಜಿತೇಶ್‌ 29, ಕೇಶವ್‌ 2-23), ರಾಜಸ್ಥಾನ 19.5 ಓವರಲ್ಲಿ 152/7 (ಜೈಸ್ವಾಲ್‌ 39, ಹೆಟ್ಮೇಯರ್‌ 27*, ರಬಾಡ 2-18) ಪಂದ್ಯಶ್ರೇಷ್ಠ: ಹೆಟ್ಮೇಯರ್‌