ಚೆಪಾಕ್‌ನಲ್ಲಿ ಸನ್‌ ಸವಾಲು ಗೆದ್ದ ಚಾಂಪಿಯನ್‌ ಚೆನ್ನೈ

| Published : Apr 29 2024, 01:33 AM IST / Updated: Apr 29 2024, 04:34 AM IST

ಸಾರಾಂಶ

ಹೈದರಾಬಾದ್‌ ವಿರುದ್ಧ 78 ರನ್‌ ಗೆಲುವು. ಸತತ 2 ಸೋಲಿನ ಬಳಿಕ ಚೆನ್ನೈ ಜಯದ ಹಳಿಗೆ. ಋತುರಾಜ್‌ 98, ಚೆನ್ನೈ 212/3. ಸನ್‌ರೈಸರ್ಸ್‌ 18.5 ಓವರ್‌ನಲ್ಲಿ 134ಕ್ಕೆ ಆಲೌಟ್‌. 4ನೇ ಸೋಲು

ಚೆನ್ನೈ: ತನ್ನ ಭದ್ರಕೋಟೆ ಚೆಪಾಕ್‌ ಕ್ರೀಡಾಂಗಣ ಹಾಲಿ ಚಾಂಪಿಯನ್‌ ಚೆನ್ನೈ ಮತ್ತೆ ಅಧಿಪತ್ಯ ಸಾಧಿಸಿದೆ. ಸ್ಫೋಟಕ ಬ್ಯಾಟಿಂಗ್‌ ಹಾಗೂ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಭಾನುವಾರ ಚೆನ್ನೈ ತಂಡ, ಸನ್‌ರೈಸರ್ಸ್‌ ಹೈದ್ರಾಬಾದ್‌ ವಿರುದ್ಧ 78 ರನ್‌ ಗೆಲುವು ಸಾಧಿಸಿದೆ.

 ಇದರೊಂದಿಗೆ ಸತತ 2 ಸೋಲಿನ ಬಳಿಕ ಚೆನ್ನೈ ಮತ್ತೆ ಗೆಲುವಿನ ಹಳಿಗೆ ಮರಳಿದರೆ, ಹೈದರಾಬಾದ್‌ ಟೂರ್ನಿಯ 4ನೇ ಸೋಲುಂಡಿತು. ಮೊದಲ ಮುಖಾಮುಖಿಯಲ್ಲಿ ಎದುರಾಗಿದ್ದ ಸೋಲಿಗೂ ಚೆನ್ನೈ ತಂಡ ಈ ಬಾರಿ ಸೇಡು ತೀರಿಸಿಕೊಂಡಿತು.ಮೊದಲು ಬ್ಯಾಟ್‌ ಮಾಡಿದ ಚೆನ್ನೈ, ಋತುರಾಜ್‌ ಹಾಗೂ ಡ್ಯಾರಿಲ್‌ ಮಿಚೆಲ್‌ ಅಬ್ಬರದ ಆಟದಿಂದಾಗಿ 3 ವಿಕೆಟ್‌ಗೆ 212 ರನ್‌ ಕಲೆಹಾಕಿತು.

 200+ ರನ್‌ ಬೆನ್ನತ್ತುವಾಗ ಮತ್ತೆ ತನ್ನ ದೌರ್ಬಲ್ಯ ಸಾಬೀತುಪಡಿಸಿದ ಸನ್‌ರೈಸರ್ಸ್‌ 18.5 ಓವರಲ್ಲಿ 134 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.ತಂಡ ಹೆಚ್ಚಿನ ಭರವಸೆ ಇಟ್ಟುಕೊಂಡಿದ್ದ ಸ್ಫೋಟಕ ಬ್ಯಾಟರ್‌ಗಳೆಲ್ಲಾ ಚೆನ್ನೈ ಬೌಲರ್‌ಗಳ ಮುಂದೆ ನಿರುತ್ತರರಾದರು. ಟ್ರ್ಯಾವಿಡ್‌ ಹೆಡ್‌(13), ಅಭಿಷೇಕ್‌ ಶರ್ಮಾ(15), ನಿತೀಶ್‌ ರೆಡ್ಡಿ(15) ಹಾಗೂ ಏಡನ್‌ ಮಾರ್ಕ್‌ರಮ್‌(32) ತಂಡದ ಮೊತ್ತ 85 ಆಗುವಷ್ಟರಲ್ಲೇ ಪೆವಿಲಿಯನ್‌ ಸೇರಿದ್ದರು. 

ಅದಾಗಲೇ ತಂಡದ ಸೋಲು ಬಹುತೇಕ ಖಚಿತವಾಗಿತ್ತು. ಹೀಗಾಗಿ ಕ್ಲಾಸೆನ್‌(20), ಸಮದ್‌(19)ಗೂ ಯಾವುದೇ ಮ್ಯಾಜಿಕ್‌ ಮಾಡಲು ಸಾಧ್ಯವಾಗಲಿಲ್ಲ. ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಸಿಕ್ಸರ್‌, ಬೌಂಡರಿಗಳ ಸುರಿಮಳೆ ಸುರಿಸುವ ಹೈದ್ರಾಬಾದ್‌ಗೆ ಈ ಪಂದ್ಯದಲ್ಲಿ ಕೇವಲ 9 ಬೌಂಡರಿ, 4 ಸಿಕ್ಸರ್‌ ಸಿಡಿಸಲು ಸಾಧ್ಯವಾಯಿತು.

ಶತಕ ಮಿಸ್‌: ಚೆನ್ನೈಗೆ ಈ ಪಂದ್ಯದಲ್ಲೂ ಆಸರೆಯಾಗಿದ್ದ ಋುತುರಾಜ್‌. ಚೆಂಡನ್ನು ಮೈದಾನದ ಮೂಲೆಮೂಲೆಗೆ ಅಟ್ಟಿದ ಋತುರಾಜ್‌(54 ಎಸೆತಗಳಲ್ಲಿ 98) ಟೂರ್ನಿಯ 2ನೇ ಶತಕ ಬಾರಿಸುವ ನಿರೀಕ್ಷೆಯಲ್ಲಿದ್ದರೂ ಅಲ್ಪದರಲ್ಲೇ ಅದರಿಂದ ವಂಚಿತರಾದರು. ಡ್ಯಾರಿಲ್‌ ಮಿಚೆಲ್‌ 52, ಶಿವಂ ದುಬೆ 39 ರನ್‌ ಗಳಿಸಿದ್ದರಿಂದ ತಂಡದ ಸ್ಕೋರ್‌ 210 ದಾಟಿತು.ಸ್ಕೋರ್: ಚೆನ್ನೈ 20 ಓವರಲ್ಲಿ 212/3 (ಋತುರಾಜ್‌ 98, ಮಿಚೆಲ್‌ 52, ಭುವನೇಶ್ವರ್‌ 1-38), ಹೈದರಾಬಾದ್‌ 18.5 ಓವರಲ್ಲಿ 134/10 (ಮಾರ್ಕ್‌ರಮ್‌ 32, ಕ್ಲಾಸೆನ್‌ 20, ತುಷಾರ್‌ 4-27)