ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಹಭಾಗಿತ್ವದಲ್ಲಿ ದಾಸರಹಳ್ಳಿ ಸಂಭ್ರಮಕ್ಕೆ ಅದ್ಧೂರಿ ಚಾಲನೆ

| Published : Feb 03 2024, 01:48 AM IST

ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಹಭಾಗಿತ್ವದಲ್ಲಿ ದಾಸರಹಳ್ಳಿ ಸಂಭ್ರಮಕ್ಕೆ ಅದ್ಧೂರಿ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆಯ ಎಂಇಐ ಲೇಔಟ್‌ ಮೈದಾನದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭದ ಸಹಯೋಗದಲ್ಲಿ ದಾಸರಹಳ್ಳಿ ಸಂಭ್ರಮಕ್ಕೆ ಅದ್ಧೂರಿ ಚಾಲನೆ ದೊರೆಯಿತು. ಶಾಸಕ ಮುನಿರಾಜು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆಯ ಎಂಇಐ ಲೇಔಟ್‌ ಮೈದಾನದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭದ ಸಹಯೋಗದಲ್ಲಿ ನಡೆಯುತ್ತಿರುವ ‘ದಾಸರಹಳ್ಳಿ ಸಂಭ್ರಮ’ಕ್ಕೆ ಉತ್ತಮ ಜನಸ್ಪಂದನೆ ವ್ಯಕ್ತವಾಯಿತು.

ಮೊದಲ ದಿನವಾದ ಶುಕ್ರವಾರ ಮಧ್ಯಾಹ್ನ 2ಕ್ಕೆ ಆರಂಭಗೊಂಡ ದಾಸರಹಳ್ಳಿ ಸಂಭ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು. ದಿನವಿಡೀ ನಡೆದ ಮಕ್ಕಳ ವೇಷಭೂಷಣ ಸ್ಪರ್ಧೆ, ದಾಸರಹಳ್ಳಿ ಸಾಧಕರಿಗೆ ಸನ್ಮಾನ, ಓಪನ್‌ ಸ್ಟೇಜ್‌ ಮತ್ತು ಗಾಯನ, ಸಂಗೀತ ಸಂಜೆ, ಬೀಟ್‌ ಬಾಕ್ಸಿಂಗ್‌, ನೃತ್ಯ ಮತ್ತು ಮನರಂಜನಾ ಕಾರ್ಯಕ್ರಮಗಳು ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾದವು.

ದಾಸರಹಳ್ಳಿ ಕ್ಷೇತ್ರದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭದ ಸಹಯೋಗದಲ್ಲಿ ಎರಡನೇ ಬಾರಿಗೆ ದಾಸರಹಳ್ಳಿ ಸಂಭ್ರಮ ಆಯೋಜಿಸಲಾಗಿದ್ದು, ಸ್ಥಳೀಯರ ಸಂಭ್ರಮ ಮುಗಿಲು ಮುಟ್ಟಿತ್ತು.

ಮೇಲುಕೋಟೆ ಪುಳಿಯೊಗರೆ, ಆರಾಧ್ಯ ಕರದಂಟು, ಐಯ್ಯಂಗಾರ್‌ ಪುಳಿಯೊಗರೆ, ಸಿಮ್ಲಾ ಮಿರ್ಚಿ ಬಜ್ಜಿ, ಅಮೆರಿಕನ್‌ ಸ್ವೀಟ್‌ ಕಾರ್ನ್‌, ಐಸ್‌ಕ್ರೀ, ತೆಂಗಿನಕಾಯಿ ಮೊಳಕೆ ಹೂವು, ಕೇರಳ ಹಲ್ವಾ, ರಾಗಿ ಪಾಪಡ್‌, ದಾವಣಗೆರೆ ಬೆಣ್ಣೆದೋಸೆ, ದಾವಣಗೆರೆ ಗಿರ್ಮಿಟ್‌, ಡೆಲ್ಲಿ ಮಸಾಲ ಪಾಪಡ್‌, ಬಂಗಾರಪೇಟೆ ಚಾಟ್ಸ್‌, ಸಿದ್ಧ ಮಸಾಲಗಳು ಒಳಗೊಂಡಂತೆ ವಿವಿಧ ಖಾದ್ಯಗಳು ಭೋಜನ ಪ್ರಿಯರಿಗೆ ಇಷ್ಟವಾದವು. ಮಕ್ಕಳು, ಮಹಿಳೆಯರಿಗೆ ಡ್ರೆಸ್‌ಗಳು, ಅಲಂಕಾರಿಕ ವಸ್ತುಗಳು, ಮ್ಯಾಜಿಕ್‌ ಟಾಯ್ಸ್‌, ಗೃಹೋಪಯೋಗಿ ವಸ್ತುಗಳು, ಹ್ಯಾಂಡ್‌ಲೂಮ್‌ ಬಟ್ಟೆಗಳು, ಬಾಡಿಮಸಾಜ್‌ ಪಾರ್ಲರ್‌, ವಿವಿಧ ಶಾಲೆಗಳ ನೋಂದಣಿ ಮಳಿಗೆಗಳು, ಶೂ, ಚಪ್ಪಲಿಗಳ ಮಳಿಗೆಗಳು, ಮೊಬೈಲ್‌ ಶಾಪ್‌ಗಳು ಶಾಪಿಂಗ್‌ ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ವಯಸ್ಕರಿಗೆ ಮತ್ತು ಮಕ್ಕಳಿಗಾಗಿ ಅನೇಕ ಗೇಮ್ಸ್‌ಗಳು ಸಹ ಇಲ್ಲಿನ ಪ್ರಮುಖ ಆಕರ್ಷಣೆ.

ಸಂಭ್ರಮಕ್ಕೆ ಮುನಿರಾಜು ಮೆಚ್ಚುಗೆ:

ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಮುನಿರಾಜು ಅವರು, ದಾಸರಹಳ್ಳಿ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭದ ವತಿಯಿಂದ ಆಯೋಜಿಸಿದ್ದ ದಾಸರಹಳ್ಳಿ ಸಂಭ್ರಮಕ್ಕೆ ಹಿಂದಿನ ವರ್ಷ ಅಭೂತಪೂರ್ವ ಯಶಸ್ಸು ಸಿಕ್ಕಿತ್ತು. ಆದ್ದರಿಂದ ಈ ವರ್ಷವೂ ‘ದಾಸರಹಳ್ಳಿ ಸಂಭ್ರಮ’ ಮಾಡಬೇಕೆಂದು ಅನೇಕ ನಾಗರಿಕರು ಬೇಡಿಕೆ ಇಟ್ಟಿದ್ದರು. ಹಾಗಾಗಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭದವರನ್ನು ಸಂಪರ್ಕ ಮಾಡಿ ಇಂದಿನಿಂದ ಮೂರು ದಿನಗಳು ಸಂಭ್ರಮ ಆಯೋಜಿಸಲಾಗಿದೆ ಎಂದರು.

ಮೂರು ದಿನಗಳು ನಡೆಯಲಿರುವ ಸಂಭ್ರಮದಲ್ಲಿ ಸಾವಿರಾರು ಜನರು ಆಗಮಿಸಲಿದ್ದು, ಆಟದ ಮೈದಾನವು ತುಂಬಿ ತುಳುಕಲಿದೆ. ಈ ಕಾರ್ಯಕ್ರಮ ಒಂದು ವರ್ಷಕಾಲ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮನೆಮಾತಾಗಿತ್ತು. ಅಂತಹ ಅಭೂತಪೂರ್ವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.

ಕಳೆದ ವರ್ಷ ರಾತ್ರಿ 11.30 ಆದರೂ ಕೂಡ ಜನರಿಂದ ಇಡೀ ಮೈದಾನ ಭರ್ತಿಯಾಗಿತ್ತು. ಪ್ರತೀ ವರ್ಷ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದಾಸರಹಳ್ಳಿ ಸಂಭ್ರಮ ಕಾರ್ಯಕ್ರಮವನ್ನು ಮಾಡುತ್ತೇವೆ. ನಮ್ಮ ಕ್ಷೇತ್ರದಲ್ಲಿ ದೊಡ್ಡ ಉದ್ಯಾನಗಳಾಗಲೀ, ಮಾಲ್‌ಗಳಾಗಲೀ ಇಲ್ಲ. ಹೀಗಾಗಿ ವಾರವಿಡೀ ದುಡಿದು ಸುಸ್ತಾಗುವಂತ ನಮ್ಮ ಕ್ಷೇತ್ರದ ಜನರಿಗೆ ಶನಿವಾರ, ಭಾನುವಾರದ ವೀಕೆಂಡ್‌ ದಿನಗಳಲ್ಲಿ ಮನರಂಜನೆ ಸಿಗಬೇಕೆನ್ನುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡಪ್ರಭದ ಸಹಾಯಕ ಸಂಪಾದಕ ಬಿ.ವಿ.ಮಲ್ಲಿಕಾರ್ಜುನ್‌, ಪ್ರಣಯಂ ಚಿತ್ರದ ನಟ ರಾಜವರ್ಧನ್‌ ಉಪಸ್ಥಿತರಿದ್ದರು.

ಇಂದಿನ(ಫೆ.3) ಕಾರ್ಯಕ್ರಮ:

ಬೆಳಗ್ಗೆ 11ಕ್ಕೆ ಮುದ್ದು ಮಗು ಮತ್ತು ವೇಷಭೂಷಣ(ಮಕ್ಕಳಿಗೆ), 12ಕ್ಕೆ ಅಡುಗೆ ಮಹಾರಾಣಿ (ಮಹಿಳೆಯರಿಗೆ), ಮಧ್ಯಾಹ್ನ 2ಕ್ಕೆ ಓಪನ್‌ ಸ್ಟೇಜ್‌ ಮತ್ತು ಗಾಯನ, ಸಂಜೆ 5ಕ್ಕೆ ಬೊಂಬಾಟ್‌ ಜೋಡಿ ಮತ್ತು ಫ್ಯಾಷನ್‌ ಶೋ, ಸಂಜೆ 6.30ಕ್ಕೆ ದಾಸರಹಳ್ಳಿ ಸಾಧಕರಿಗೆ ಸನ್ಮಾನ, ಸಂಜೆ 7.30ಕ್ಕೆ ಮಿಮಿಕ್ರಿ ಕಾರ್ಯಕ್ರಮ- ಮಿಮಿಕ್ರಿ ಸಾಗರ ತುರುವೆಕರೆ ಅವರಿಂದ, 8ಕ್ಕೆ ಮ್ಯೂಸಿಕಲ್‌ ನೈಟ್ಸ್‌- ರಾಗ ಮತ್ತು ತಂಡದಿಂದ, 9ಕ್ಕೆ ನೃತ್ಯ ಮತ್ತು ಮನರಂಜನಾ ಕಾರ್ಯಕ್ರಮಗಳು.