ಕವಿಮನೆ ಜೊರಾಸಂಕೋ ಠಾಕೂರ್

| Published : Mar 17 2024, 01:48 AM IST / Updated: Mar 17 2024, 11:46 AM IST

rabindranath tagore

ಸಾರಾಂಶ

ಮಹರ್ಷಿ ರವೀಂದ್ರರು ಬಾಳಿ ಬದುಕಿನ ಮಹಾಮನೆ ಬಗ್ಗೆ ಬೆಳಕು ಚೆಲ್ಲುವ ಬರಹ.

- ಡಾ. ಕೆ ಎಸ್‌ ಪವಿತ್ರಾ

ನಿಡುಸುಯ್ದು ನದಿಯ ಈ ದಡ ಹೇಳಿತತಿನೊಂದು
ಬಲ್ಲೆ; ಸುಖವೆಲ್ಲ ಆ - ದಡದೊಳಿದೆ! ಎಂದು.
ಆ - ದಡವೊ ಬಿಸುಸುಯ್ದು ನಿಡು ನುಡಿಯಿತೆದೆ ಬೆಂದು
‘ಸುಖವಿದ್ದರೆಲ್ಲ ಆ - ದಡದೊಳಿದೆ!’ ಎಂದು.

ಕುವೆಂಪು ಭಾವಾನುವಾದ ಮಾಡಿದ್ದ ರವೀಂದ್ರರ ಕವನದ ಸಾಲುಗಳನ್ನು ಮೆಲುಕು ಹಾಕುತ್ತಲೇ ಕಳೆದ ವಾರವಷ್ಟೇ ಮಾಡಿದ ಕುಪ್ಪಳ್ಳಿ ಭೇಟಿಯನ್ನು ಮನಸ್ಸು ನೆನೆಯುತ್ತಿತ್ತು. 

ನಾನು ಈಗ ಕುಳಿತಿದ್ದು ಕೋಲ್ಕತ್ತಾದ ರವೀಂದ್ರ ಸರಣಿಗೆ ಹೋಗುವ ಟ್ಯಾಕ್ಸಿಯಲ್ಲಿ. ಬಂಗಾಲಿ ವೈದ್ಯ ಸ್ನೇಹಿತರೊಡನೆ ಯಾರನ್ನು ಮಾತನಾಡಿಸಿದರೂ, ಅವರು ಹೇಗಾದರೂ ನಮಗೆ ಗೊತ್ತಿದ್ದ ಬಂಗಾಲಿಗಳೊಡನೆ (ಸುಭಾಷ್‌ಚಂದ್ರ ಬೋಸ್/ವಿವೇಕಾನಂದ/ಟ್ಯಾಗೋರ್) ತಮ್ಮ ಕುಟುಂಬದ ಯಾವುದಾದರೊಂದು ಕೊಂಡಿಯ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದುದನ್ನು ನಾನು ಸ್ವಲ್ಪ ನಗು, ಅಪಾರ ಬೆರಗಿನೊಡನೆ ಕೇಳಿದ್ದೆ.

‘ರವೀಂದ್ರರ ಮನೆ ಕೋಲ್ಕತ್ತಾದಲ್ಲಿದೆಯಂತೆ, ನೋಡಬೇಕಲ್ಲಾ’ ಎಂದಿದ್ದಕ್ಕೆ ಅವರೆಲ್ಲರೂ ಒಟ್ಟಾಗಿ ಹೇಳಿದ್ದು ‘ಜೊರಾಸಂಕೋ ಠಾಕೂರ್ ಬಾರಿ’. ಗಿರೀಶ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ, ‘ರಬೀಂದ್ರ ಮಂಚ್’ ಹಾದು ಜೊರಾಸಂಕೋ ಠಾಕುರ್ ಬಾರಿಯ ದೊಡ್ಡ ಕಮಾನನ್ನು ಪ್ರವೇಶಿಸಿದ್ದೆ.

ನೊಬೆಲ್ ವಿಜೇತ ಕವಿಯ ಮನೆ ಇಂತಹ ಕಿಷ್ಕಿಂಧೆಯಲ್ಲಿರಬಹುದೆ ಎನ್ನುವ ಸಂದೇಹ. ಕಿರಿದಾದ ಗಲ್ಲಿಗಳನ್ನು ಹಾದು ಜೊರಾಸಂಕೋ ಠಾಕುರ್ ಬಾರಿಯನ್ನು ಹೊಕ್ಕರೆ ಅದೊಂದು ಬೇರೆಯೇ ಪ್ರಪಂಚ.

ರವೀಂದ್ರರ ಪೂರ್ವಿಕರ ಕಾಲದ ಮನೆ. ಈಗ ಇದು ಕೇವಲ ಮನೆಯಷ್ಟೇ ಅಲ್ಲ, ರವೀಂದ್ರರ ಮತ್ತು ಟ್ಯಾಗೋರ್ ಕುಟುಂಬದ ಇತರರ ಜೀವನ-ಕಾರ್ಯಗಳ ಸಂಗ್ರಹಾಲಯವೂ ಹೌದು. 

19-20ನೇ ಶತಮಾನಗಳ ಬಂಗಾಲದ ಜ್ಞಾನಯುಗದಲ್ಲಿ ಪ್ರಮುಖ ಪಾತ್ರ ವಹಿಸಿದ ಟ್ಯಾಗೋರ್ ಕುಟುಂಬದ ಕಥೆಯೊಂದಿಗೇ, ಆ ಸಮಯದ ಸಾಹಿತ್ಯಯುಗದ ಆಗುಹೋಗುಗಳನ್ನೂ ನಮ್ಮ ಮುಂದಿಡುತ್ತದೆ.

ಸಂಗ್ರಹಾಲಯದ ಪ್ರವೇಶ ದ್ವಾರದಲ್ಲಿಯೇ ಟ್ಯಾಗೋರ್ ವಂಶವೃಕ್ಷದ ಚಿತ್ರವಿದೆ. ನಾವು ಅಲ್ಲಲ್ಲಿ ಕೇಳಿರಬಹುದಾದ ಹಲವು ಟ್ಯಾಗೋರ್ ಹೆಸರುಗಳನ್ನು ಗುರುತಿಸಬಹುದು. 

ರವೀಂದ್ರರ ಅಜ್ಜ ದ್ವಾರಕಾನಾಥ್ ಟ್ಯಾಗೋರ್ ದೊಡ್ಡ ವಾಣಿಜ್ಯೋದ್ಯಮಿ. ರಾಜನಂತೆ ಅವರು ಜೀವಿಸಿ, ನೋಡಲೂ ಹಾಗೆಯೇ ಅನಿಸುತ್ತಿದ್ದರು ಎಂಬ ಕಾರಣಕ್ಕೆ ಅವರನ್ನು ಬಂಗಾಲಿಗಳು ಕರೆಯುತ್ತಿದ್ದದ್ದು ‘ಪ್ರಿನ್ಸ್’ ಎಂದೇ. 

ಇದಕ್ಕೆ ವಿರುದ್ಧವಾಗಿ ಅವರ ಮಗ ದೇವೇಂದ್ರನಾಥ್ ಟ್ಯಾಗೋರ್ (ಅಂದರೆ ರವೀಂದ್ರರ ಅಪ್ಪ) ತುಂಬಾ ಸರಳ, ಋಷಿಯಂತಹ ಜೀವನ ಸಾಗಿಸಿದವರು; ದೇವರ್ಷಿ ಎಂದೇ ಕರೆಯಲ್ಪಟ್ಟವರು. ರವೀಂದ್ರರು ದೇವೇಂದ್ರನಾಥರ 14 ಮಕ್ಕಳಲ್ಲಿ ಕಿರಿಯವರು.

ರವೀಂದ್ರರ ಅಣ್ಣಂದಿರಲ್ಲಿ ಹಲವರು ವಿಜ್ಞಾನ, ಶಿಕ್ಷಣ, ಸಂಗೀತ, ಕಲೆಗಳಲ್ಲಿ ಹೆಸರು ಮಾಡಿರುವವರು. ಬೆಂಗಾಲ್ ಸ್ಕೂಲ್ ಆಫ್ ಆರ್ಟ್ಸ್ ಎಂಬ ಪ್ರಸಿದ್ಧ ಕಲಾಶಾಲೆಯನ್ನು ಅವರ ಅಣ್ಣನ ಮಕ್ಕಳಾದ ಅವನೀಂದ್ರನಾಥ್ ಮತ್ತು ಗಗನೀಂದ್ರನಾಥ್ ಹುಟ್ಟು ಹಾಕಿದರು.

ಜೊರಾಸಂಕೋ ಠಾಕೂರ್ ಬಾರಿಯ ಒಳಗೆ ತಿರುಗಾಡುವಾಗ ಹಿನ್ನೆಲೆಯಲ್ಲಿ ತೇಲಿ ಬರುತ್ತಿದ್ದ ‘ರಬೀಂದ್ರ ಸಂಗೀತ್’. ಒಂದು ರೀತಿಯ ವಿಚಿತ್ರ ಅನುಭೂತಿ. 

ರವೀಂದ್ರರು ತನ್ನ 8ನೇಯ ಎಳೆಯ ವಯಸ್ಸಿನಲ್ಲಿ ಮೊದಲ ಕವಿತೆ ಬರೆದದ್ದು, ಆಮೇಲೆ ಸಾಹಿತ್ಯದ ಪ್ರತಿಯೊಂದು ಪ್ರಕಾರದಲ್ಲಿಯೂ ಕೈಯ್ಯಾಡಿಸಿದ್ದು, ಮರಣ ಶಯ್ಯೆಯಲ್ಲಿ ಬರೆಯಲಾಗದಿದ್ದಾಗ್ಯೂ ಮಗಳ ಕೈಯಲ್ಲಿ ಹೇಳಿ ಬರೆಸಿದ್ದು ಎಲ್ಲವೂ ಇಲ್ಲಿ ದಾಖಲಾಗಿವೆ. 

ಟ್ಯಾಗೋರ್ ತನ್ನದೇ ನಾಟಕ ‘ವಾಲ್ಮೀಕಿ ಪ್ರತಿಭಾ’ ದಲ್ಲಿ ವಾಲ್ಮೀಕಿಯಾಗಿ ಪಾತ್ರ ಧರಿಸಿದ್ದ ಅಪರೂಪದ ಚಿತ್ರಗಳೂ ಇಲ್ಲಿವೆ. ರವೀಂದ್ರರು ಹುಟ್ಟಿದ ಕೋಣೆ ‘ಆಟುರ್ ಘರ್’ ಅನ್ನು ಚಂದವಾಗಿ ಇರಿಸಲಾಗಿದೆ. 

ಕೆಲ ಮೆಟ್ಟಿಲುಗಳನ್ನೇರಿದರೆ ರವೀಂದ್ರರ ಪತ್ನಿ ಮೃಣಾಲಿನೀ ದೇವಿ - ರವೀಂದ್ರರೊಡನೆ ಸೇರಿ ಅಡುಗೆ ಮಾಡುತ್ತಿದ್ದ ಅಡುಗೆ ಮನೆಯಿದೆ.

ಮುನ್ನಡೆದರೆ ‘ಬಿಚಿತ್ರ ಭವನ್’ ನಲ್ಲಿ ರವೀಂದ್ರರ ನಾಟಕಗಳು-ಪತ್ರಗಳು-ಅವರು ಉಪಯೋಗಿಸುತ್ತಿದ್ದ ವಸ್ತುಗಳು-ಉಪನ್ಯಾಸದ ಪ್ರತಿಗಳು, ಧ್ವನಿ ಮುದ್ರಿಕೆಗಳಿವೆ. ಸ್ವತಃ ರವೀಂದ್ರರು ರಚಿಸಿದ ಚಿತ್ರಗಳೂ ಇಲ್ಲಿವೆ.

ಅಚ್ಚರಿ ಮೂಡಿಸುವ ಮತ್ತೊಂದು ಗ್ಯಾಲರಿಯೆಂದರೆ ರವೀಂದ್ರರಿಗೆ ಸಸ್ಯ ವಿಜ್ಞಾನಿ ಜಗದೀಶ್ ಚಂದ್ರ ಬೋಸ್‌ರೊಂದಿಗೆ ಇದ್ದ ಗೆಳೆತನದ ವಿವರಗಳ ಗ್ಯಾಲರಿ. 

ಇವರಿಬ್ಬರ ಸ್ನೇಹವನ್ನು ಇದು ತೆರೆದಿಡುತ್ತದೆ. ನಂತರದ್ದು ಗುರುದೇವ ಹಾಗೀ ಮಹಾತ್ಮ ಗಾಂಧೀಜಿ ಅವರ ಅನ್ಯೋನ್ಯತೆಯ ಸಂಗ್ರಹದ ಚಿತ್ರಗಳು, ವಿವರಗಳು.

ಈ ಸಂಗ್ರಹಾಲಯದಲ್ಲಿ ಕೆಲ ಗ್ಯಾಲರಿಗಳನ್ನು ವಿದೇಶೀಯರು ಧನ ಸಹಾಯ ನೀಡಿ ನಿರ್ಮಿಸಿದ್ದಾರೆ. ಚೀನೀಯರ ಗ್ಯಾಲರಿ, ಜಪಾನೀಯರ ಗ್ಯಾಲರಿ, ಅಮೇರಿಕನ್ ಮತ್ತು ಹಂಗೇರಿಯನ್ ಗ್ಯಾಲರಿಗಳು ರವೀಂದ್ರರಿಗೆ ಈ ಎಲ್ಲ ದೇಶಗಳ ಕವಿಗಳು-ಜನರೊಂದಿಗೆ ಇದ್ದ ಪ್ರಭಾವದ ದ್ಯೋತಕವಾಗಿ ಇಲ್ಲಿದೆ. 

ರವೀಂದ್ರರು ಭಾರತವನ್ನು ವಿಶ್ವಕ್ಕೂ, ವಿಶ್ವವನ್ನು ಭಾರತಕ್ಕೂ ಪರಿಚಯಿಸಿದರು ಎಂಬುದನ್ನು ಇದು ಸಾರುವಂತಿದೆ. 20ರ ಯುವ ವಯಸ್ಸಿನಲ್ಲಿ ರವೀಂದ್ರರು ‘Commerce is killing people’ - ‘ಜನರನ್ನು ಕೊಲ್ಲುವ ವ್ಯಾಪಾರ’ ಎಂಬ ಕಟುವಾದ ಲೇಖನವೊಂದನ್ನು ಬರೆದರಂತೆ. 

ಚೀನಾ ಮತ್ತು ಬ್ರಿಟಿಷರು ಆಳುತ್ತಿದ್ದ ಭಾರತದ ನಡುವೆ ನಡೆಯುತ್ತಿದ್ದ ಅಫೀಮಿನ ವ್ಯಾಪಾರವನ್ನು ಈ ಲೇಖನ ಟೀಕಿಸಿತ್ತು. ಅದರ ಪ್ರತಿಯೂ ಚೀನೀಯರ ಗ್ಯಾಲರಿಯಲ್ಲಿದೆ.

ಠಾಕೂರ್‌ಬಾರಿಯ ಮೇಲ್‌ ಮಹಡಿ ದೇವೇಂದ್ರನಾಥ ಟ್ಯಾಗೋರರ ಕಾರ್ಯಗಳನ್ನು ವಿವರಿಸುತ್ತದೆ. ಬ್ರಹ್ಮೋ ಸಮಾಜ, ರಾಜಾರಾಮ್ ಮೋಹನ್ ರಾಯರ ಜೊತೆಗಿನ ಅವರ ಒಡನಾಟಗಳ ದಾಖಲೆಗಳನ್ನು ಇಲ್ಲಿ ನೋಡಬಹುದು. 

ಮನೆಯ ಸುತ್ತ ಹಸಿರು ಹುಲ್ಲುಗಾವಲು. ಹಿತ್ತಲಿನಲ್ಲಿರುವ ಠಾಕೂರ್ ಡಲಾನ್‌ನಲ್ಲಿ ಕುಟುಂಬದವರು ದುರ್ಗಾ ಪೂಜಾ ನಡೆಸುತ್ತಿದ್ದ ವೇದಿಕೆಯಿದೆ. ಇಲ್ಲಿಯೇ ದೇವೇಂದ್ರನಾಥ ಠಾಕೂರರು ವಿಗ್ರಹಾರಾಧನೆಯನ್ನು ಕೈ ಬಿಟ್ಟು, ಬ್ರಹ್ಮೋಸಮಾಜವನ್ನು ತಮ್ಮ ಧರ್ಮವಾಗಿ ಸ್ವೀಕರಿಸಿದರಂತೆ.

ಪ್ರತಿ ವರ್ಷ ಪೈಲಾ ಬೈಸಾಕ್ (ಬಂಗಾಲಿ ಹೊಸ ವರ್ಷ), ರವೀಂದ್ರರ ಮತ್ತು ಇತರ ಬಂಗಾಲಿ ಕವಿಗಳ ಜನ್ಮದಿನಗಳಂದು ವಿಶೇಷ ಸಂಭ್ರಮಾಚರಣೆಗಳು ಇಲ್ಲಿ ನಡೆಯುತ್ತವೆ. 

ಬಸಂತೋ ಉತ್ಸಬ್ (ವಸಂತೋತ್ಸವ -ಹೋಲಿ) ಇಲ್ಲಿ ಶಾಂತಿನಿಕೇತನದ ಕಲಾತ್ಮಕ ರೀತಿಯಲ್ಲಿಯೇ ಆಚರಿಸಲ್ಪಡುತ್ತದೆ ಎಂದು ಅಲ್ಲಿದ್ದ ಸುರಕ್ಷತಾ ಸಿಬ್ಬಂದಿ ಹೇಳಿದರು. 

ಸಂಜೆ 6.30ಗೆ ಬಂದರೆ ಧ್ವನಿ -ಬೆಳಕಿನ ಪ್ರದರ್ಶನವನ್ನು ನೋಡಬಹುದಂತೆ. ವಿಚಿತ್ರವೆಂದರೆ ಸೋಮವಾರದ ಜೊತೆಗೆ, ಇತರ ಸರ್ಕಾರಿ ರಜೆಗಳಂದೂ ಜೊರಾಸಂಕೋ ಠಾಕೂರ್ ಬಾರಿಗೆ ರಜೆ. 

ಕವಿಮನೆ ನೋಡಬೇಕೆಂದರೆ ಕೆಲಸವನ್ನೆಲ್ಲಾ ಬಿಟ್ಟೇ ಹೋಗಬೇಕಾದಷ್ಟು ಮಹತ್ವ ನೀಡಬೇಕೆಂದೇ ಬುದ್ಧಿವಂತ ಬಂಗಾಲಿಗಳು ಈ ನಿಯಮ ಮಾಡಿಟ್ಟಿರಬೇಕು!

ವಿದೇಶಗಳಲ್ಲಿ ಕವಿಮನೆಗಳನ್ನು ನೋಡಿದಾಗ ಭಾರತೀಯ ಕವಿಮನೆಗಳನ್ನು ನೆನೆದು ಆಗುವ ದುಃಖ ಕುಪ್ಪಳಿಯ ಕುವೆಂಪು ಕವಿಮನೆ ಮತ್ತು ಜೊರಾಸಂಕೋ ಠಾಕೂರ್ ಬಾರಿಯನ್ನು ನೋಡಿ ಸ್ವಲ್ಪ ಕಡಿಮೆಯಾಗುವಂತಿದೆ.