ಸಿನೆಮಾ ಆಗೇ ಇಲ್ಲಾ, ಟ್ರೈಲರ್‌ನಲ್ಲೇ ಮುಗಿದು ಹೋಗಿದೆ

| Published : Apr 26 2024, 08:48 AM IST

Randeep surjewala

ಸಾರಾಂಶ

ಪಿಕ್ಚರ್ ಆಗೇ ಇಲ್ಲ. ಟ್ರೈಲರ್‌ನಲ್ಲೇ ಎಲ್ಲಾ ಮುಗಿದು ಹೋಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್‌ ಸುರ್ಜೇವಾಲಾ ವ್ಯಂಗ್ಯವಾಡಿದರು.

ಬೆಳಗಾವಿ : ಪಿಕ್ಚರ್ ಆಗೇ ಇಲ್ಲ. ಟ್ರೈಲರ್‌ನಲ್ಲೇ ಎಲ್ಲಾ ಮುಗಿದು ಹೋಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್‌ ಸುರ್ಜೇವಾಲಾ ವ್ಯಂಗ್ಯವಾಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈವರೆಗೂ ಮಾಡಿದ ಅಧಿಕಾರ ಟ್ರೈಲರ್, ಮುಂದೆ 5 ವರ್ಷ ಪಿಕ್ಚರ್ ಬಾಕಿ ಇದೆ ಎಂಬ ಪ್ರಧಾನಿ ಮೋದಿ ಹೇಳಿಕೆ ವಿಚಾರವಾಗಿ ಅವರು ಈ ರೀತಿ ಪ್ರತಿಕ್ರಿಯಿಸಿದರು. ಕ್ಯಾಮೆರಾಮನ್ ಓಡಿ ಹೋಗಿದ್ದಾನೆ. ಡೈರೆಕ್ಟರ್ ಓಡಿ ಹೋಗಿದ್ದಾನೆ, ಹೀರೋ ಅಂತು ಇಲ್ಲವೇ ಇಲ್ಲ. ವಿಲನ್ ಒಬ್ಬನೇ ಉಳಿದಿದ್ದಾನೆ ಎಂದು ಲೇವಡಿ ಮಾಡಿದರು.

400 ಅಲ್ಲ 150 ಸ್ಥಾನವನ್ನೂ ದಾಟುವುದಿಲ್ಲ. ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದೆ. ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಅಚ್ಚರಿ ಸೀಟ್ ಬರುತ್ತವೆ ಕಾದುನೋಡಿ ಎಂದು ಭವಿಷ್ಯ ನುಡಿದರು.

ಬಿಜೆಪಿ ಈಸ್ಟ್ ಇಂಡಿಯಾ ಕಂಪ‌ನಿ ತಂದು ಹಿಂದೂಸ್ತಾನ್‌ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈಸ್ಟ್ ಇಂಡಿಯಾ ಕಂಪನಿ ಪಾಲಿಸಿ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಸರ್ಕಾರಕ್ಕೆ ಹಾಗೂ ಇಲ್ಲಿನ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕನ್ನಡಿಗರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಐಎನ್‌ಡಿ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಹೋರಾಟ ಭಾರತೀಯ ಜನರ ಜೀವನದ್ದಾಗಿದೆ. ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ನಾವೆಲ್ಲರೂ ಬಯಸುತ್ತೇವೆ ಎಂದು ತಿಳಿಸಿದರು.

ಕರ್ನಾಟಕಕ್ಕೆ ಅನ್ಯಾಯ ಮಾಡಿ ಖಾಲಿ ಚೊಂಬು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲ್ಲಿಗೆ ಬರುವ ನೈತಿಕತೆ ಅವರಿಗಿಲ್ಲ. ರಾಜ್ಯಕ್ಕೆ ನ್ಯಾಯಸಮ್ಮತವಾದ ₹18,172 ಕೋಟಿ ಎನ್‌ಡಿಆರ್‌ಎಫ್‌ನಲ್ಲಿ ಪರಿಹಾರ ಕೇಳಿತ್ತು. ಕಳೆದ ಆರೂವರೆ ತಿಂಗಳಿನಿಂದ ಮೋದಿ ಸರ್ಕಾರ ಅನುದಾನ ಕೊಡಲಿಲ್ಲ. ಕೇಂದ್ರ ತಾರತಮ್ಯ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಂಗೆ ಮೊರೆ ಹೋಗುವ ಪರಿಸ್ಥಿತಿ ಎದುರಾಯಿತು. ಕರ್ನಾಟಕಕ್ಕೆ ಕೊಡಬೇಕಾದ ನ್ಯಾಯವನ್ನು ಬಿಜೆಪಿ ನಾಯಕರು ಕೊಡಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿಯೂ ಲೋಕಸಭಾ ಚುನಾವಣೆ ನಡೆಯುತ್ತದೆ. ಕರ್ನಾಟಕ ವಿರೋಧಿ ಎನ್‌ಡಿಎ ಪಕ್ಷ ನಡೆಯುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ‌ಮೋದಿ ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ. ಕಳೆದ‌ ಡಿಸೆಂಬರ್‌ನಲ್ಲಿ ಬರ ಪರಿಹಾರ ನೀಡುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಮನವಿ‌ ಮಾಡಿದರೂ ನಮ್ಮ ರಾಜ್ಯದ ಸಚಿವರಿಗೆ ಕೇಂದ್ರ ಸರಿಯಾಗಿ ಸ್ಪಂದಿಸಲಿಲ್ಲ ಎಂದು ದೂರಿದ ಅವರು, ಬಿಜೆಪಿ ಒಬಿಸಿ, ಎಸ್ಸಿ, ಎಸ್ಟಿ ವಿರೋಧವಿದ್ದು, ಸಂವಿಧಾನ ಮುಗಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತದೆ ಎಂದು ಆರೋಪಿಸಿದರು.

ಕರ್ನಾಟಕದ ಮೇಕೆದಾಟು ಹಾಗೂ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಕಳೆದೊಂದು ವರ್ಷದಿಂದ ಜಾರಿಗೊಳಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಜೇಬಿನಲ್ಲಿಯೇ ಚುನಾವಣೆ ಆಯೋಗ ಇದೆ. ಆದರೂ‌‌ ಚುನಾವಣೆಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ‌ಮೋದಿಗೆ ಹೆದರಿಕೆ ಪ್ರಾರಂಭವಾಗಿದೆ. ಮುಖದಲ್ಲಿ‌ ನಗು ಕಾಣಿಸುತ್ತಿಲ್ಲ. ಯಾವ ಮುಖ ಇಟ್ಟುಕೊಂಡು ಚುನಾವಣೆ ಎದುರಿಸುತ್ತಾರೆ ಎಂದು ಪ್ರಶ್ನಿಸಿದರು.

ನೇಹಾ ಹತ್ಯೆ ಪ್ರಕರಣ ಸಂಬಂಧ ಕೇಸ್ ದಾಖಲಾಗಿದೆ. ನೇಹಾ ಕೊಲೆಯ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ರಾಜ್ಯ ಸರ್ಕಾರ ತನಿಖೆ ಚುರುಕುಗೊಳಿಸಿದೆ. ವಿಶೇಷ ನ್ಯಾಯಾಲಯ ಸ್ಥಾಪಿಸುವ ಮೂಲಕ ತ್ವರಿತವಾಗಿ ಆಕೆಯ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸವಾಗುತ್ತಿದೆ. ಆದರೆ, ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದು, ಅವರಿಗೆ ನಾಚಿಗೆ ಆಗಬೇಕು ಎಂದು ಹರಿಹಾಯ್ದರು.

ಗೋಷ್ಠಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಶಾಸಕರಾದ ಲಕ್ಷ್ಮಣ ಸವದಿ, ಅಶೋಕ ಪಟ್ಟಣ, ಗಣೇಶ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆರೋಪಿ ಯಾವುದೇ ಸಮುದಾಯವಾದರೂ ಗಲ್ಲು ಶಿಕ್ಷೆ ಆಗಬೇಕು. ಈಗಾಗಲೇ ನಮ್ಮ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ವಿಶೇಷ ಕೋರ್ಟ್ ಸ್ಥಾಪಿಸಿ ಶೀಘ್ರ ವಿಚಾರಣೆ ಮಾಡಬೇಕು. ಅಲ್ಲದೇ ಸರ್ಕಾರವೇ ಗಲ್ಲು ಶಿಕ್ಷೆ ಆಗಬೇಕು ಎಂದು ಆಗ್ರಹಿಸುತ್ತದೆ.

-ರಣದೀಪಸಿಂಗ್‌ ಸುರ್ಜೇವಾಲಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ.

ಮೊಟ್ಟೆ ಮಾರಿ ಬಂದ ಹಣದಿಂದ ನಿರ್ಮಿಸಿದ ಹೋಟೆಲ್‌ನಲ್ಲಿ ಮೋದಿ ವಾಸ್ತವ್ಯ: ಸುರ್ಜೆವಾಲಾ ವ್ಯಂಗ್ಯ

ಬೆಳಗಾವಿ: ಬಡ ಮಕ್ಕಳ ಮೊಟ್ಟೆ ಮಾರಿ ಬಂದಂತ ಹಣದಿಂದ ನಿರ್ಮಿಸಲಾಗಿರುವ ಹೋಟೆಲ್‌ನಲ್ಲಿ ಪ್ರಧಾನಿ ಮೋದಿಯವರು ವ್ಯಾಸ್ತವ್ಯ ಮಾಡಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ವ್ಯಂಗ್ಯವಾಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಗರಕ್ಕೆ ಏ.27 ರಂದು ರಾತ್ರಿ ಆಗಮಿಸಲಿರುವ ಪ್ರಧಾನಿ ಮೋದಿ ಅವರು ಬಡ ಮಕ್ಕಳ ಮೊಟ್ಟೆ ಮಾರಿ ಬಂದಂತಹ ಹಣದಿಂದ ನಿರ್ಮಿಸಲಾಗಿರುವ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಿರುವುದು ವಿಷಾದನೀಯ ಎಂದರು.

ಬೆಳಗಾವಿ ಕಾಕತಿ ಹೊರವಲಯದಲ್ಲಿರುವ 5 ಎಕರೆ ವಿಸ್ತಿರ್ಣದಲ್ಲಿರುವ ಜೊಲ್ಲೆ ಕುಟುಂಬ ಒಡೆತನದ ಹೋಟೆಲ್‌ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಶಶಿಕಲಾ ಜೊಲ್ಲೆ ಅವರು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಕ್ಕಳ ಹೊಟ್ಟೆ ಸೇರಬೇಕಿದ್ದ ಮೊಟ್ಟೆಗಳನ್ನು ಮಾರಾಟ ಮಾಡಿ ಬಂದತಂಹ ಹಣದಿಂದ ಈ ಹೋಟೆಲ್‌ ನಿರ್ಮಿಸಿದ್ದಾರೆ. ಬಡ ಮಕ್ಕಳ ಹೊಟ್ಟೆಗೆ ದ್ರೋಹಬಗಿದು ಕಟ್ಟಿದ ಹೋಟೆಲ್‌ನಲ್ಲಿ ಪ್ರಧಾನಿ ಮೋದಿ ವಾಸ್ತವ್ಯ ಹೂಡುತ್ತಿರುವುದು ನಾಚಿಗೇಡಿನ ಸಂಗತಿ ಎಂದು ಕಿಡಿಕಾರಿದರು.