ಬಿಎಸ್‌ವೈರನ್ನು ಜೈಲಿಗೆ ಕಳುಹಿಸಲು ಎಚ್‌ಡಿಕೆ ಹೋರಾಟ: ಚೆಲುವರಾಯಸ್ವಾಮಿ

| Published : Apr 20 2024, 01:05 AM IST / Updated: Apr 20 2024, 05:36 AM IST

N Cheluvarayaswamy
ಬಿಎಸ್‌ವೈರನ್ನು ಜೈಲಿಗೆ ಕಳುಹಿಸಲು ಎಚ್‌ಡಿಕೆ ಹೋರಾಟ: ಚೆಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ವೀರಶೈವ, ಒಕ್ಕಲಿಗರ, ಹಿಂದುಳಿದ ವರ್ಗ, ದಲಿತರಿಗೆ ಪ್ರಾಧಾನ್ಯತೆಯನ್ನು ನೀಡುತ್ತಾ ಬಂದಿದೆ. ಕಾಂಗ್ರೆಸ್‌ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಎಲ್ಲ ವಗದ ಜನರನ್ನು ತಲುಪುತ್ತಿವೆ.

 ಮಂಡ್ಯ :  ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸುವುದಕ್ಕೆ ಎಚ್‌.ಡಿ.ಕುಮಾರಸ್ವಾಮಿ ನಿರಂತರ ಹೋರಾಟ ನಡೆಸಿದ್ದರು. ಅಂದು ಶತ್ರುವಿನಂತೆ ಕಾಣುತ್ತಿದ್ದವರು ಈಗ ಮಿತ್ರನಂತೆ ನೋಡುತ್ತಿದ್ದಾರೆ. ಜೆಡಿಎಸ್‌ ನಿರಂತರವಾಗಿ ಅವಕಾಶವಾದಿ ರಾಜಕಾರಣ ಮಾಡಿಕೊಂಡು ಬರುತ್ತಿರುವುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ನಗರದ ಕನಕ ಭವನದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವೀರಶೈವ-ಲಿಂಗಾಯತ ಸಭೆಯಲ್ಲಿ ಮಾತನಾಡಿ, ಅಂದು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲು ಅವಕಾಶ ನೀಡದ ನೀವು ಯಾವ ನೈತಿಕತೆ ಇಟ್ಟುಕೊಂಡು ಲಿಂಗಾಯತರ ಮತ ಕೇಳುತ್ತೀರಿ ಎಂದು ಪ್ರಶ್ನಿಸಿದರು.

ಹದಿನಾಲ್ಕು ತಿಂಗಳು ಮುಖ್ಯಮಂತ್ರಿಯಾಗಿದ್ದಿರಿ. ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಗುರುತರವಾದ ಯಾವುದಾದರೂ ಕೊಡುಗೆ ನೀಡಿದ್ದರೆ ಹೇಳಿ ನೋಡೋಣ. ಕುಮಾರಸ್ವಾಮಿಯವರೇ ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಶೂನ್ಯ. ನನಗೊಂದು ಅವಕಾಶ ಕೊಡಿ ಎಂದು ಕೇಳಿ ತಪ್ಪಿಲ್ಲ. ಆದರೆ, ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುತ್ತೇನೆಂಬ ಸುಳ್ಳು ಭರವಸೆ ನೀಡಬೇಡಿ. ಸಂಸತ್‌ ಪ್ರವೇಶ ನಿಮಗೆ ಇದೇ ಮೊದಲಲ್ಲ. ಹಿಂದೆ ಕನಕಪುರ ಲೋಕಸಭಾ ಕ್ಷೇತ್ರದಿಂದಲೂ ಆಯ್ಕೆಯಾಗಿದ್ದಿರಿ. ಮಳವಳ್ಳಿಯ ಜನರು ನಿಮಗೆ ಓಟು ಕೊಟ್ಟಿದ್ದರು. ಆ ಸಮಯದಲ್ಲೇ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಬಹುದಿತ್ತಲ್ಲ. ಅಂದು ಮಳವಳ್ಳಿ, ಕನಕಪುರ, ರಾಮನಗರ ಕಾವೇರಿ ಕಣಿವೆ ವ್ಯಾಪ್ತಿಗೆ ಸೇರಿದ್ದು ನಿಮಗೆ ಗೊತ್ತಿರಲಿಲ್ಲವೇ ಎಂದು ನಯವಾಗಿಯೇ ಟೀಕಿಸಿದರು.

ಕಾಂಗ್ರೆಸ್‌ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ವೀರಶೈವ, ಒಕ್ಕಲಿಗರ, ಹಿಂದುಳಿದ ವರ್ಗ, ದಲಿತರಿಗೆ ಪ್ರಾಧಾನ್ಯತೆಯನ್ನು ನೀಡುತ್ತಾ ಬಂದಿದೆ. ಕಾಂಗ್ರೆಸ್‌ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಎಲ್ಲ ವಗದ ಜನರನ್ನು ತಲುಪುತ್ತಿವೆ ಎಂದರು.