ಕಾರಟಗಿ ತಾಲೂಕಿನಲ್ಲಿ ಮತದಾನ ಸುಸೂತ್ರ

| Published : May 08 2024, 01:03 AM IST

ಸಾರಾಂಶ

ಕನಕಗಿರಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಕಾರಟಗಿ ತಾಲೂಕಿನಲ್ಲಿ ಮಂಗಳವಾರ ಮತದಾನ ಶಾಂತಿಯುತ ಮತ್ತು ಸುಸೂತ್ರವಾಗಿ ನಡೆಯಿತು.

ಉತ್ಸಾಹದಿಂದ ಮತ ಚಲಾಯಿಸಿದ ಯುವಕ-ಯುವತಿಯರು

ಕನ್ನಡಪ್ರಭ ವಾರ್ತೆ ಕಾರಟಗಿ

ಕನಕಗಿರಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಕಾರಟಗಿ ತಾಲೂಕಿನಲ್ಲಿ ಮಂಗಳವಾರ ಮತದಾನ ಶಾಂತಿಯುತ ಮತ್ತು ಸುಸೂತ್ರವಾಗಿ ನಡೆಯಿತು.

ತಾಲೂಕಿನಲ್ಲಿ ಒಟ್ಟು ೧೧೪ ಮತಗಟ್ಟೆಗಳಿದ್ದು, ಎಲ್ಲ ಮತಗಟ್ಟೆಗಳಲ್ಲಿ ಸರಿಯಾಗಿ ಬೆಳಗ್ಗೆ ೭ ಗಂಟೆಗೆ ಮತದಾನ ಪ್ರಾರಂಭವಾಯಿತು. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಜನರು ಬೆಳಗ್ಗೆ ಸರಿಯಾಗಿ ೭ ಗಂಟೆಗೆ ಮತಗಟೆಗಳ ಮುಂದೆ ಹಾಜರಾಗಿ ಉತ್ಸಾಹದಿಂದ ತಮ್ಮ ಮತ ಚಲಾಯಿಸಿದರು.

ವಿಶೇಷವಾಗಿ ಕಾರಟಗಿ ಪಟ್ಟಣದಲ್ಲಿ ಬೆಳಗ್ಗೆ ಎಲ್ಲ ಮತಗಟ್ಟೆಗಳ ಮುಂದೆ ಜನರು ಜಮಾಯಿಸಿದರು. ಇನ್ನೂ ಈ ಬಾರಿ ಮೊದಲ ಬಾರಿಗೆ ಮತದಾನದ ಹಕ್ಕು ಪಡೆದ ಅನೇಕ ಯುವಕ-ಯುವತಿಯರು ಸಂಭ್ರಮದಿಂದ ಮತಗಟ್ಟೆಗಳಿಗೆ ತಮ್ಮ ಪಾಲಕರ ಜೊತಗೆ ತೆರಳಿ ಮತಚಲಾಯಿಸಿದರು.

ತಾಲೂಕಿನಾದ್ಯಂತ ಜನರು ಹುರುಪಿನಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ವಿಶೇಷವಾಗಿ ಬೆಳಗ್ಗೆ ಬಿರುಸಿನ ಮತದಾನ ನಡೆಯಿತು. ನಂತರ ೧೧.೩೦ರ ಬಳಿಕ ಬಿಸಿಲಿನಿಂದ ಮತದಾನ ಚುರುಕು ಕಾಣಲಿಲ್ಲ. ಮಧ್ಯಾಹ್ನ ಮಂದಗತಿಯಲ್ಲಿ ಮತದಾನ ಸಾಗಿತ್ತು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿನ ಮತಗಟ್ಟೆಗೆ ತೆರಳಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಪತ್ನಿ ವಿದ್ಯಾ ತಂಗಡಗಿ ಸೇರಿದಂತೆ ಅವರ ಕುಟಂಬದ ಸದಸ್ಯರು ಬೆಳಗ್ಗೆ ಮತದಾನ ಮಾಡಿದರು. ಜೆಪಿ ನಗರದ ೧೬ನೇ ವಾರ್ಡ್ ಮತಗಟ್ಟೆಗೆ ತೆರಳಿದ ಮಾಜಿ ಶಾಸಕ ಬಸವರಾಜ ದಢೇಸ್ಗೂರು ಮತ್ತು ಅವರ ಪತ್ನಿ ಸರೋಜಮ್ಮ ದಢೇಸ್ಗೂರು ಮತದಾನ ಮಾಡಿದರು. ಮಾಜಿ ಸಚಿವ ನಾಗಪ್ಪ ಸಾಲೋಣಿ ಬೆಳಗ್ಗೆ ೪ನೇ ವಾರ್ಡ್‌ನ ಮತಗಟ್ಟೆಗೆ ತೆರಳಿ ಮತಚಲಾಯಿಸಿದರು. ತಾಲೂಕಿನ ಜಮಾಪುರ ಗ್ರಾಮದಲ್ಲಿ ಶತಾಯುಷಿ ಈರಮ್ಮ ಷಣ್ಮುಖಪ್ಪ ಹಡಪದ (೧೦೧) ಮತಗಟ್ಟೆಗೆ ತಮ್ಮ ಮೊಮ್ಮಗನ ಜೊತೆಗೆ ಆಗಮಿಸಿ ಮತದಾನ ಮಾಡಿದರು.