ಮನೆಯಿಂದ ಮತದಾನ: ಶೇ.84.94 ಮತ ಚಲಾವಣೆ

| Published : Apr 27 2024, 01:21 AM IST

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡಲು 85 ವರ್ಷ ಮೇಲ್ಪಟ್ಟ ವೃದ್ಧರು, ವಿಶೇಷಚೇತನರು ಹಾಗೂ ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಿದ್ದು, ಮೊದಲ ದಿನವಾದ ಶುಕ್ರವಾರ ಅಂದಾಜು ಶೇ.84.94 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಲೋಕಸಭೆ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡಲು 85 ವರ್ಷ ಮೇಲ್ಪಟ್ಟ ವೃದ್ಧರು, ವಿಶೇಷಚೇತನರು ಹಾಗೂ ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಿದ್ದು, ಮೊದಲ ದಿನವಾದ ಶುಕ್ರವಾರ ಅಂದಾಜು ಶೇ.84.94 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದ್ದಾರೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ಏ.26 ಮತ್ತು 27ರಂದು ಎರಡು ದಿನಗಳ ಕಾಲ ಅವಕಾಶ ಕಲ್ಪಿಸಿದೆ. ಮೊದಲ ದಿನ ಅಂದಾಜು ಶೇ.84.94 ರಷ್ಟು ಮತದಾನವಾಗಿದೆ. ಪ್ರಸಕ್ತ ಲೋಕಸಭೆ ಮತಕ್ಷೇತ್ರದಲ್ಲಿ ನರಗುಂದ ಮತಕ್ಷೇತ್ರ ಸೇರಿದಂತೆ ಒಟ್ಟು 2139 ಮತದಾರರು ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 85 ವರ್ಷ ಮೇಲ್ಪಟ್ಟವರು 1420 ಹಾಗೂ ವಿಶೇಷಚೇತನರು 719 ಇದ್ದರು, ಈ ಪೈಕಿ 85 ವರ್ಷ ಮೇಲ್ಪಟ್ಟ 1100, ವಿಶೇಷಚೇತನ 693 ಸೇರಿ ಒಟ್ಟು 1793 ಜನ ಮತದಾನ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಏ.26ರಂದು ಮನೆಮನೆಗೆ ಭೇಟಿ ನೀಡಿದ ವೇಳೆ ಕೆಲವು ಮತದಾರರು ಲಭ್ಯವಿಲ್ಲದ ಕಾರಣ 27ರಂದು ಮತ್ತೊಮ್ಮೆ ಭೇಟಿ ನೀಡಿ ಮತದಾನ ಮಾಡಿಸಲಾಗುವುದು. ಆಗಲೂ ಮತದಾರ ಲಭ್ಯವಾಗದಿದ್ದರೆ ಮತದಾನ ಮಾಡಲು ಅವಕಾಶ ಇಲ್ಲ. ಮತಗಟ್ಟೆಗೆ ಬಂದು ಮತ ಹಾಕಲು ಅವಕಾಶ ಇರುವುದಿಲ್ಲವೆಂದು ಎಂದು ಹೇಳಿದ್ದಾರೆ.

ವಿಶೇಷಚೇತನರ ಮನೆಗಳಿಗೆ ಡಿಸಿ, ಸಿಇಒ ಭೇಟಿ:

ತೇರದಾಳ ಕ್ಷೇತ್ರದ ರಾಮಪುರ ಗ್ರಾಮಕ್ಕೆ ಸೇರಿದ ಮತಗಟ್ಟೆ ಸಂಖ್ಯೆ 108ರಲ್ಲಿ ವಿಕಲಚೇತನ ಬಸವರಾಜ ಪರೀಟ್ ಅವರ ಮನೆಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಭೇಟಿ ನೀಡಿ ಮನೆಯಿಂದಲೇ ಮತದಾನ ಮಾಡಿಸಿದರೆ, ಅಮೀನಗಡ ಪಟ್ಟಣಕ್ಕೆ ಸಂಬಂಧಿಸಿದ ಮತಗಟ್ಟೆ ಸಂಖ್ಯೆ 249ರಲ್ಲಿ 104 ವರ್ಷದ ವೃದ್ಧೆ ಚಂದವ್ವ ಖೂಬಪ್ಪ ಲಮಾಣಿ ಹಾಗೂ ಮತಗಟ್ಟೆ ಸಂಖ್ಯೆ 256ರಲ್ಲಿ ವಿಕಲಚೇತನೆ ಶ್ರುತಿ ಬಸವರಾಜ ಬೆಟಗೇರಿ ಅವರ ಮನೆಗೆ ಜಿಪಂ ಸಿಇಒ ಶಶಿಧರ ಕುರೇರ ಭೇಟಿ ನೀಡಿ ಮನೆಯಿಂದಲೇ ಮತದಾನ ಮಾಡಿಸಿದರು.