ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಇಂದು ಮತದಾನ

| Published : Apr 26 2024, 12:48 AM IST

ಸಾರಾಂಶ

ಲೋಕಸಭೆಗೆ ಚಿತ್ರದುರ್ಗ ಕ್ಷೇತ್ರದಿಂದ ನಡೆಯುವ 18ನೇ ಚುನಾವಣೆಗೆ ಕೋಟೆನಾಡು ಸಜ್ಜಾಗಿದೆ. ಕಳೆದ ಮೂರು ದಶಕಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಪ್ರಖರ ಬೇಸಿಗೆಯಲ್ಲಿ ಅದೂ 38ರಿಂದ 40 ಡಿಗ್ರಿ ಸೆಲ್ಸಿಯಸ್‌ನ ಸೂರ್ಯನ ತಾಪದ ನಡುವೆ ಮತದಾನ ಮಾಡಬೇಕಾದ ಅನಿವಾರ್ಯತೆ ಜನತೆ ಎದುರಿಸುವಂತಾಗಿದೆ. ಏ.26 ಶುಕ್ರವಾರ ಮತದಾನ ನಡೆಯಲಿದೆ.

ಚಿತ್ರದುರ್ಗ: ಲೋಕಸಭೆಗೆ ಚಿತ್ರದುರ್ಗ ಕ್ಷೇತ್ರದಿಂದ ನಡೆಯುವ 18ನೇ ಚುನಾವಣೆಗೆ ಕೋಟೆನಾಡು ಸಜ್ಜಾಗಿದೆ. ಕಳೆದ ಮೂರು ದಶಕಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಪ್ರಖರ ಬೇಸಿಗೆಯಲ್ಲಿ ಅದೂ 38ರಿಂದ 40 ಡಿಗ್ರಿ ಸೆಲ್ಸಿಯಸ್‌ನ ಸೂರ್ಯನ ತಾಪದ ನಡುವೆ ಮತದಾನ ಮಾಡಬೇಕಾದ ಅನಿವಾರ್ಯತೆ ಜನತೆ ಎದುರಿಸುವಂತಾಗಿದೆ. ಏ.26 ಶುಕ್ರವಾರ ಮತದಾನ ನಡೆಯಲಿದೆ.

ಚಿತ್ರದುರ್ಗ ಜಿಲ್ಲೆಯ ಆರು ಹಾಗೂ ತುಮಕೂರು ಜಿಲ್ಲೆಯ ಎರಡು ಸೇರಿ ಒಟ್ಟು ಎಂಟು ವಿಧಾನಸಭೆ ಕ್ಷೇತ್ರ ಒಳಗೊಂಡಿರುವ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 1856876 ಮತದಾರರು ಇದ್ದು, 2168 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ಕಾರ್ಯಕ್ಕೆ 9904 ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುವರು. ಚುನಾವಣಾ ಕಣದಲ್ಲಿ 18 ಪುರುಷ ಹಾಗೂ 2 ಮಹಿಳೆಯರು ಸೇರಿ 20 ಅಭ್ಯರ್ಥಿಗಳು ಇದ್ದಾರೆ. ಕಾಂಗ್ರೆಸ್‌ನ ಬಿ.ಎನ್.ಚಂದ್ರಪ್ಪ ಹಾಗೂ ಬಿಜೆಪಿ ಗೋವಿಂದ ಕಾರಜೋಳ ಅದೃಷ್ಟವ ಒರೆಗಲ್ಲಿಗೆ ಹಚ್ಚಿದ್ದಾರೆ. ಒಂದು ಬ್ಯಾಲೆಟ್ ಯುನಿಟ್‍ನಲ್ಲಿ 16 ಅಭ್ಯರ್ಥಿಗಳ ವಿವರ ನಮೂದು ಮಾಡಬಹುದಾಗಿದೆ. ಹಾಗಾಗಿ ಈ ಬಾರಿಯ ಮತದಾನದಲ್ಲಿ 2 ಬ್ಯಾಲೆಟ್ ಯುನಿಟ್‍ಗಳು ಇರಲಿವೆ. 20 ಅಭ್ಯರ್ಥಿಗಳು ಒಂದು ನೋಟಾ ಸೇರಿ 21 ವಿವರಗಳನ್ನು ಬ್ಯಾಲೆಟ್ ಯುನಿಟ್‍ನಲ್ಲಿ ನಮೂದು ಮಾಡಲಾಗಿದೆ.

54 ವಿಶೇಷ ಮತಗಟ್ಟೆಗಳ ಸ್ಥಾಪನೆ

ಚಿತ್ರದುರ್ಗ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರನ್ನು ಆಕರ್ಷಿಸಲು 54 ವಿಶೇಷ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಮಹಿಳಾ ಮತದಾರರನ್ನು ಉತ್ತೇಜಿಸಲು ಪ್ರತಿ ವಿಧಾನಸಭಾವಾರು ಮಹಿಳಾ ಮತದಾರರು ಹೆಚ್ಚಿರುವ 5 ಕಡೆ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿ ಚುನಾವಣಾ ಕಾರ್ಯನಿರ್ವಹಿಸಲಿದ್ದಾರೆ. ಇದೇ ಮಾದರಿಯಲ್ಲಿ ಪ್ರತಿ ವಿಧಾನ ಸಭಾವಾರು 6 ವಿಶೇಷ ಚೇತನ, ಯುವ, ವಿಷಯಾಧಾರಿತ ಹಾಗೂ ಸ್ಥಳೀಯ ಇತಿಹಾಸ ಪರಂಪರೆ, ಸಂಸ್ಕೃತಿಯನ್ನು ಮತಗಟ್ಟೆಗಳು ಬಿಂಬಿಸಲಿವೆ. ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಬಿಸಿಲಾಘಾತ ಹಾಗೂ ಕೋವಿಡ್ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಮತಗಟ್ಟೆಗಳಲ್ಲಿ ತೆಂಗಿನ ಚಪ್ಪರ ಹಾಗೂ ಶಾಮೀಯಾನ ಹಾಕಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ.

3300 ಪೊಲೀಸರ ನೇಮಕ

ಮತದಾನ ಶಾಂತಿಯುತವಾಗಿ ನಡೆಸುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 3300 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ವೈರ್‍ಲೆಸ್ ಸಂವಹನ ಸ್ಥಾಪಿಸಲಾಗಿದೆ. 20 ಮತಗಟ್ಟೆ ವ್ಯಾಪ್ತಿಯಲ್ಲಿ ಒಂದು ಪಿಎಸ್ಐ ನೇತೃತ್ವದಲ್ಲಿ ಸೆಕ್ಟರ್ ಪೊಲೀಸ್ ತಂಡ, 4 ಸೆಕ್ಟರ್ ಸಂಚಾರಿ ಪೊಲೀಸ್ ತಂಡಗಳ ಮೇಲೆ ಸರ್ಕ್‍ಲ್ ಇನ್‌ಸ್ಪೆಕ್ಟರ್‌ಗಳ ಪೊಲೀಸ್ ತಂಡ, 6 ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒರ್ವ ಡಿವೈಎಸ್‍ಪಿ ಹಾಗೂ 2 ಎಎಸ್ ಪಿ ಹಾಗೂ ಒಬ್ಬ ಎಸ್ಪಿ ಕರ್ತವ್ಯ ನಿರ್ವಹಿಸಲಿದ್ದಾರೆ. ಒಟ್ಟಾರೆ 3300 ಪೊಲೀಸ್ ಸಿಬ್ಬಂದಿಗಳನ್ನು ಮತದಾನ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಲ್ಲಿ 950 ಗೃಹ ರಕ್ಷಕರು, 6 ಕೆಎಸ್ಆರ್‌ಪಿಸಿ ತುಕಡಿ ಹಾಗೂ ಸಿಆರ್‌ಪಿಎಫ್ ತುಕಡಿಗಳು ಇರಲಿವೆ. ಜಿಲ್ಲೆಯಲ್ಲಿ 280 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಸರ್ಕಾರಿ ವಿಜ್ಞಾನ ಕೇಂದ್ರದಲ್ಲಿ ಮತ ಎಣಿಕೆ

ಮತದಾನ ನಂತರ ಡಿ.ಮಸ್ಟರಿಂಗ್ ಕೇಂದ್ರಗಳಲ್ಲಿ ಮತದಾನ ಯಂತ್ರಗಳನ್ನು ಸಂಗ್ರಹಿಸಿ ಭದ್ರಪಡಿಸಿ, ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಹೊಸ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್‍ರೂಮ್‍ಗೆ ಕಳುಹಿಸಿಕೊಡಲಾಗುತ್ತದೆ. ಜೂ.4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಟಿ.ವೆಂಕಟೇಶ್ ಗುರುವಾರ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ಮಸ್ಟರಿಂಗ್ ಹಾಗೂ ಡಿ.ಮಸ್ಟರಿಂಗ್ ಕೇಂದ್ರಕ್ಕೆ ತೆರಳಿ ಮತಗಟ್ಟೆ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಿದರು. ಮತದಾನಕ್ಕೆ ಮುನ್ನ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಸೂಚನೆ ನೀಡಿದರು.

ಚುನಾವಣೆ ಆಯೋಗ ಕೈಪಿಡಿಯಲ್ಲಿನ ಚೆಕ್ ಲೀಸ್ಟ್ ನಂತೆಯೇ ಮತಗಟ್ಟೆಗಳಿಗೆ ತೆರಳುವ ಅಧಿಕಾರಿ ಹಾಗೂ ಸಿಬ್ಬಂದಿಗೆ ವಿದ್ಯುನ್ಮಾನ ಮತಯಂತ್ರ, ಮತದಾರ ಪಟ್ಟಿ, ಶಾಸನ ಬದ್ದ ಪುಸ್ತಕಗಳು, ಸ್ಪರ್ಧಿಸುತ್ತಿರುವ ಉಮೇದುವಾರರ ಪಟ್ಟಿ, ದಿನಚರಿ, ವರದಿ, ನಮೂನೆ, ಶಾಹಿ, ಕಂಪಾರ್ಟ್ಮೆಂಟ್ ಸೇರಿದಂತೆ ಇತರೆ ಸ್ಟೇಷನರಿ ಕಿಟ್‌ಗಳನ್ನು ಚೆಕ್‌ಲಿಸ್ಟ್ ಕ್ರಮದಲ್ಲಿ ನೀಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.