ವಿಜಯನಗರ ಜಿಲ್ಲೆಯಲ್ಲಿ ರಣ ಬಿಸಿಲಿನಲ್ಲೂ ಮತದಾನ ಉತ್ಸಾಹ

| Published : May 08 2024, 01:01 AM IST

ವಿಜಯನಗರ ಜಿಲ್ಲೆಯಲ್ಲಿ ರಣ ಬಿಸಿಲಿನಲ್ಲೂ ಮತದಾನ ಉತ್ಸಾಹ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯನಗರ ಜಿಲ್ಲೆಯಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲರು, ಯುವ ಮತದಾರರು, ರೈತರು, ಉದ್ಯೋಗಿಗಳು ಖುಷಿಯಿಂದಲೇ ಮತಗಟ್ಟೆಗಳಿಗೆ ಆಗಮಿಸಿ ಮತಚಲಾಯಿಸಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಜಯನಗರ ಜಿಲ್ಲೆಯ ಜನರು ಭಾರೀ ಬಿಸಿಲು ಲೆಕ್ಕಿಸದೇ ಲೋಕಸಭೆ ಚುನಾವಣೆಗೆ ಮತದಾನ ಮಾಡಿದರು. ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಮತದಾರರು ಬಳ್ಳಾರಿ ಲೋಕಸಭೆಗೆ ಮತ್ತು ಹರಪನಹಳ್ಳಿ ವಿಧಾನಸಭೆ ಕ್ಷೇತ್ರದ ಮತದಾರರು ದಾವಣಗೆರೆ ವಿಧಾನಸಭೆ ಕ್ಷೇತ್ರಕ್ಕೆ ಮತ ಚಲಾಯಿಸಿದರು. ಸಣ್ಣಪುಟ್ಟ ವಾಗ್ವಾದ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಈ ಬಾರಿ ಶೇ.75.1ರಷ್ಟು ಮತದಾನ ದಾಖಲಾಗಿದೆ.

ಜಿಲ್ಲೆಯಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲರು, ಯುವ ಮತದಾರರು, ರೈತರು, ಉದ್ಯೋಗಿಗಳು ಖುಷಿಯಿಂದಲೇ ಮತಗಟ್ಟೆಗಳಿಗೆ ಆಗಮಿಸಿ ಮತಚಲಾಯಿಸಿದರು.

ಕೈಕೊಟ್ಟ 9 ಮತಯಂತ್ರಗಳು

ಜಿಲ್ಲೆಯ 1234 ಮತಗಟ್ಟೆಗಳ ಪೈಕಿ 9 ಮತಗಟ್ಟೆಗಳಲ್ಲಿ ಆರಂಭದಲ್ಲಿ ಮತಯಂತ್ರಗಳು ಕೈಕೊಟ್ಟಿದ್ದವು. ಕೂಡಲೇ ಒಂಬತ್ತು ಮತಯಂತ್ರಗಳನ್ನು ಸರಿಪಡಿಸಲಾಯಿತು. ಬಳಿಕ ಈ ಮತಗಟ್ಟೆಗಳಲ್ಲೂ ಸುಗಮವಾಗಿ ನಡೆಯಿತು. ಮತಯಂತ್ರಗಳ ಪರಿಣಿತರ ತಂಡ ಜಿಲ್ಲಾದ್ಯಂತ ಸಂಚರಿಸಿ, ಲೋಪದೋಷ ಕಂಡು ಬಂದ ಕಡೆ ಸರಿಪಡಿಸುವ ಕಾರ್ಯ ಮಾಡಿತು ಎಂದು ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಅವರು ಕನ್ನಡಪ್ರಭಕ್ಕೆ ತಿಳಿಸಿದರು.ಹೊಸಪೇಟೆ ನಗರದ ಊರಮ್ಮನ ಬೈಲು, ಕಟ್ಟಾ ಕೃಷ್ಣವೇಣಿಮ್ಮ ಶಾಲೆ ಹತ್ತಿರ 19 ಮತ್ತು 21ನೇ ವಾರ್ಡ್ ಮತಗಟ್ಟೆ ಸಂಖ್ಯೆ 88, 89, 90, ,91 ಮತ್ತು 92 ಪಕ್ಕದಲ್ಲಿ ವಿದ್ಯುತ್‌ ವೈರ್ ತಂತಿ ತುಂಡಾಗಿ ಬಿದ್ದಿತ್ತು. ಗಮನಕ್ಕೆ ಬರುತ್ತಲೇ ಜಿಲ್ಲಾಡಳಿತ ಕ್ರಮವಹಿಸಿತು.

ಇನ್ನೂ ಸಂಜೆ 6 ಗಂಟೆ ಆಗುತ್ತಲೇ ಮತಗಟ್ಟೆಗಳ ಗೇಟ್‌ಗಳನ್ನು ಪೊಲೀಸರು ಬಂದ್ ಮಾಡಿದರು. 6 ಗಂಟೆ 2 ನಿಮಿಷಕ್ಕೆ ಬಂದ ಮತದಾರರನ್ನು ವಾಪಾಸ್‌ ಕಳುಹಿಸಲಾಯಿತು. 6 ಗಂಟೆ ಒಳಗಡೆ ಮತಗಟ್ಟೆಗಳಿಗೆ ಬಂದವರಿಗೆ ಟೋಕನ್‌ ನೀಡಲಾಯಿತು. ಸರದಿ ಸಾಲಿನಲ್ಲಿ ನಿಂತವರಿಂದ ಆರು ಗಂಟೆ ಆದ ಬಳಿಕವೂ ಮತದಾನ ಮಾಡಿಸಲಾಯಿತು.

ಗಣ್ಯರ ಮತದಾನ

ಮಾಜಿ ಸಚಿವರಾದ ಆನಂದ ಸಿಂಗ್, ಪಿ.ಟಿ. ಪರಮೇಶ್ವರ ನಾಯ್ಕ, ಕೆಎಂಎಫ್‌ ಅಧ್ಯಕ್ಷ ಎಸ್. ಭೀಮಾ ನಾಯ್ಕ, ಶಾಸಕರಾದ ಎಚ್.ಆರ್‌. ಗವಿಯಪ್ಪ, ನೇಮರಾಜ್ ನಾಯ್ಕ, ಎಂ.ಪಿ. ಲತಾ, ಕೃಷ್ಣ ನಾಯ್ಕ, ಡಾ. ಎನ್‌.ಟಿ. ಶ್ರೀನಿವಾಸ್‌ ಅವರು ತಮ್ಮ ಮತಗಟ್ಟೆಗಳಲ್ಲಿ ಕುಟುಂಬ ಸಮೇತರಾಗಿ ತಮ್ಮ ಹಕ್ಕುಗಳನ್ನು ಚಲಾಯಿಸಿದರು. ಈ ಮೂಲಕ ಚುನಾವಣೆ ಜಾತ್ರೆಗೆ ಹುರುಪು ತಂದರು.

ಡಿಸಿ, ಸಿಇಒ ಮತದಾನ

ವಿಜಯನಗರ ಜಿಲ್ಲೆಯ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ನಗರದ ಸಂಡೂರ ರಸ್ತೆಯ ಬಿಇಒ ಕಚೇರಿಗೆ ದಂಪತಿ ಸಮೇತ ಆಗಮಿಸಿ ಮತ ಚಲಾಯಿಸಿದರು. ವಿಜಯನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸದಾಶಿವ ಪ್ರಭು ಬಿ. ಅವರು ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕೂಡ್ಲಿಗಿ ಪಟ್ಟಣದ ರಾಜೀವ್‌ಗಾಂಧಿ ನಗರದಲ್ಲಿರುವ ಸಖಿ ಮತಗಟ್ಟೆಯಲ್ಲಿ ಶಿಲ್ಪಾ ಮತ್ತು ಶಮೀನಾ ಬಾನು ಅವರು ಪ್ರಥಮ ಬಾರಿಗೆ ಮತ ಚಲಾಯಿಸಿ ಅನಿಸಿಕೆ ವ್ಯಕ್ತಪಡಿಸಿದರು.

ದುಬೈನಿಂದ ಆಗಮಿಸಿ ಮತದಾನ

ದುಬೈನಿಂದ ಆಗಮಿಸಿದ ಸಫೂರ ಎಂಬವರು ಹರಪನಹಳ್ಳಿ ಪಟ್ಟಣದ ಉಪ್ಪಾರಗೇರಿ ಮತಗಟ್ಟೆ 87ರಲ್ಲಿ ಮತ ಹಕ್ಕು ಚಲಾಯಿಸಿ ಸಂಭ್ರಮಿಸಿದರು. ಇನ್ನೂ ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಸೇರಿದಂತೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದರು ತಮ್ಮ ಹಕ್ಕು ಚಲಾಯಿಸಿದರು.

ಸಸಿ ನೀಡಿ ಸ್ವಾಗತ

ಹಡಗಲಿ ತಾಲೂಕಿನ ಇಟ್ಟಗಿ ಗ್ರಾಮ ಪಂಚಾಯಿತಿಯ ಮತಗಟ್ಟೆ ಸಂಖ್ಯೆ 162ರ ಸಖಿ ಮತಗಟ್ಟೆಗೆ ಮತದಾನ ಮಾಡಲು ಬರುತ್ತಿದ್ದ 100 ಮತದಾರರಿಗೆ ತಾಪಂ ಇಒ ಉಮೇಶ ಎಂ. ಅವರು ಸಸಿ ನೀಡಿ ಪ್ರೋತ್ಸಾಹಿಸಿದರು. ಕರ್ತವ್ಯ ನಿರತ ಸಿಬ್ಬಂದಿ ಜೊತೆಗೆ ಚರ್ಚಿಸಿದರು. ಪಿಡಿಓ ಉಮೇಶ್ ಜಹಗೀರದಾರ್‌ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.

ಮೊದಲ ಬಾರಿ ಮತದಾನ ಮಾಡಿ ಸಂಭ್ರಮ

ನಗರದ ಚಿತ್ತವಾಡ್ಗಿ ವರಕೇರಿಯ ಮತಗಟ್ಟೆ ಸಂಖ್ಯೆ 47ರಲ್ಲಿ ಎನ್.ವೈ ಶ್ರೀಲಕ್ಷ್ಮಿ, ಎನ್.ವೈ.ಶ್ರೀನಾಥ, ಎನ್.ವೈ ಶ್ರೀಯಲ್ಲಪ್ಪ ಎಂಬ ಸಹೋದರಿ, ಸಹೋದರರು ಲೋಕಸಭೆ ಚುನಾವಣೆಗೆ ಮೊದಲ ಬಾರಿಗೆ ಮತ ಚಲಾಯಿಸಿ ಸಂಭ್ರಮಿಸಿದರು. ಎನ್.ವೈ.ಶ್ರೀನಾಥ, ಎನ್.ವೈ. ಶ್ರೀಲಕ್ಷ್ಮಿ ಅವಳಿ ಸಹೋದರ, ಸಹೋದರಿ ಮತದಾನ ಮಾಡಿದ್ದು ವಿಶೇಷ.

ನಗರದ ಅಮರಾವತಿಯ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 66ರಲ್ಲಿ ಚೆಸ್ ಆಟಗಾರ, ಬಿ.ಇ. ವಿದ್ಯಾರ್ಥಿ ಬಿ. ಸುಹಾಸ್ ಮೊದಲ ಬಾರಿಗೆ ಮತದಾನ ಮಾಡಿ ಸಂಭ್ರಮಿಸಿದರು. ಇನ್ನೂ ಮರಿಯಮ್ಮನಹಳ್ಳಿಯ ಜಿ.ಎಸ್. ಸಂಜನಾ ಮೊದಲ ಬಾರಿಗೆ ಮತದಾನ ಮಾಡಿ ಸಂಭ್ರಮಿಸಿದರು. ಜಿಲ್ಲೆಯ ವಿವಿಧೆಡೆ ಮೊದಲ ಬಾರಿ ಮತದಾನ ಮಾಡಿದ ಯುವ ಸಮೂಹ ಸಂಭ್ರಮಿಸಿತು.ಹೆಮ್ಮೆ

ಮತದಾನದ ಮೂಲಕ ಪ್ರಜಾಪ್ರಭುತ್ವ ಬಲಪಡಿಸಬೇಕು. ಮೊದಲಬಾರಿಗೆ ಮತದಾನ ಮಾಡಿರುವುದು ಹೆಮ್ಮೆ ಎನಿಸಿದೆ.

ಬಿ.ಸುಹಾಸ್ ಹೊಸಪೇಟೆ

ಉತ್ಸುಕ

ಮೊದಲ ಬಾರಿಗೆ ಮತಚಲಾಯಿಸಿರುವೆ. ಸಂವಿಧಾನ ನಮಗೆ ನೀಡಿರುವ ಹಕ್ಕು, ಇದನ್ನು ಚಲಾಯಿಸಲು ಉತ್ಸುಕಳಾಗಿದ್ದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿರುವ ನಮ್ಮ ಹಕ್ಕನ್ನು ನಾವು ಚಲಾಯಿಸುವ ಮೂಲಕ ನಮ್ಮ ಅಭಿವ್ಯಕ್ತಿ ಮತ್ತು ಅಸ್ಮಿತೆಯನ್ನು ವ್ಯಕ್ತಪಡಿಸಬೇಕಿದೆ.

ಜಿ.ಎಸ್. ಸಂಜನಾ ಮರಿಯಮ್ಮನಹಳ್ಳಿ