ಮನೆಯಲ್ಲಿಯೇ ಮತದಾನ, ಚುನಾವಣಾ ಆಯೋಗಕ್ಕೆ ಧನ್ಯವಾದ

| Published : Apr 27 2024, 01:18 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದ್ದು, ಮನೆಯಲ್ಲಿಯೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾರರಿಂದ ಅತ್ಯುತ್ತಮ ಸ್ಪಂದನೆ ಸಿಗುತ್ತಿದೆ. ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ ಚುನಾವಣಾ ಆಯೋಗಕ್ಕೆ ಹಿರಿಯ ಮತದಾರರು ಧನ್ಯವಾದ ಸಲ್ಲಿಸಿದ್ದಾರೆ.

- ಜನರಿಂದ ಅತ್ಯುತ್ತಮ ಸ್ಪಂದನೆ । ಏ.27ರವರೆಗೆ 2262 ಮತದಾರರಿಂದ ಮತದಾನ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದ್ದು, ಮನೆಯಲ್ಲಿಯೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾರರಿಂದ ಅತ್ಯುತ್ತಮ ಸ್ಪಂದನೆ ಸಿಗುತ್ತಿದೆ. ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದ ಚುನಾವಣಾ ಆಯೋಗಕ್ಕೆ ಹಿರಿಯ ಮತದಾರರು ಧನ್ಯವಾದ ಸಲ್ಲಿಸಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಶೇಷಚೇತನರು ಮನೆಯಿಂದಲೇ ಮತದಾನ ಮಾಡಲು ಏ.25ರಿಂದ ಏ.27ರವರೆಗೆ ಪ್ರಕ್ರಿಯೆ ನಡೆಯಲಿದೆ. ನೋಂದಾಯಿಸಿದ 2262 ಮತದಾರರ ಮನೆಬಾಗಿಲಿಗೆ ಚುನಾವಣಾ ಸಿಬ್ಬಂದಿ ತೆರಳಿ ಅಂಚೆ ಮತದಾನ ಮಾಡಿಸುವರು.

ಪಿಆರ್‌ಒ, ಸೆಕ್ಟರ್ ಅಧಿಕಾರಿ, ಮೈಕ್ರೋ ಅಬ್ಸರ್‌ವರ್, ಮತದಾನ ಅಧಿಕಾರಿ, ಬಿಎಲ್‌ಒ, ವೀಡಿಯೋಗ್ರಾಫರ್, ಪೊಲೀಸ್ ಸಿಬ್ಬಂದಿ ತಂಡ ಪ್ರತಿ ಮತದಾರರ ಮನೆಗೆ ತೆರಳುತ್ತದೆ. ಚುನಾವಣಾ ಆಯೋಗದ ಪ್ರಕಟಣೆ ಓದಿ, ಮತದಾರರಿಗೆ ತಿಳಿಸುತ್ತದೆ. ಮನೆಯಲ್ಲಿಯೇ ಮತದಾನ ಮಾಡಲು ಮತದಾರರ ವಹಿಗೆ ಸಹಿ, ನಮೂನೆ-13 ಕ್ಕೆ ಸಹಿ ಪಡೆಯಲಾಗುತ್ತದೆ. ಬ್ಯಾಲೆಟ್‌ನಲ್ಲಿರುವಂತೆ ಅಭ್ಯರ್ಥಿಗಳ ವಿವರ, ತಿಳಿಸಿ ಮತ ಚಲಾಯಿಸುವ ವಿಧಾನದ ಬಗ್ಗೆ ತಿಳಿಸಲಾಗುತ್ತದೆ. ಅನಂತರ, ಮತದಾನ ಪ್ರಕ್ರಿಯೆ ಶುರುವಾಗಿ, ಮತ ಹಾಕುವಾಗ ಕಾಣದಂತೆ ಮರೆ ಮಾಡಲಾಗುವುದು. ಸಮರ್ಪಕ ಮತ ಚಲಾವಣೆಗೆ ಅನುವು ಮಾಡಿಕೊಡಲಾಗುತ್ತದೆ.

ಚುನಾವಣಾಧಿಕಾರಿ ವೀಕ್ಷಣೆ:

ದಾವಣಗೆರೆ ಉತ್ತರ ಕ್ಷೇತ್ರದ ಮತಗಟ್ಟೆ 71ರಲ್ಲಿ ಬರುವ ಎನ್.ಸುಮತಿ ಭಟ್ (90) ವಯೋವೃದ್ದರಾಗಿದ್ದು, ಮನೆಯಲ್ಲಿಯೇ ಮತದಾನ ಮಾಡಿದರು. ಮತಗಟ್ಟೆ 75ರಲ್ಲಿನ ಎಚ್.ವಿನೋದಾಬಾಯಿ, ವಿಶೇಷಚೇತನರಾಗಿದ್ದು, ಮನೆಯಲ್ಲಿಯೇ ಮತದಾನ ಮಾಡಿದರು. ಮನೆಯಲ್ಲಿ ಮತದಾನ ಮಾಡುವಾಗ ಮತದ ಗೌಪ್ಯತೆ ಮತ್ತು ಮಹತ್ವ ಕಾಪಾಡಿಕೊಳ್ಳಬೇಕು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಮನೆಯಲ್ಲಿಯೇ ಮತದಾನ ಮಾಡಿದ ಎನ್.ಸುಮತಿ ಭಟ್ ಅವರ ಅಭಿಪ್ರಾಯ ಕೇಳಿದರು. ಆಗ ನನಗೆ ತುಂಬಾ ಸಂತೋಷವಾಗಿದೆ, ಈವರೆಗೂ ಯಾವುದೇ ಚುನಾವಣೆಯಲ್ಲಿ ಮತ ಹಾಕುವುದನ್ನು ಬಿಟ್ಟಿಲ್ಲ, ಚುನಾವಣಾ ಆಯೋಗ ನನ್ನಂತಹ ಅನೇಕರಿಗೆ ಮನೆಯಲ್ಲಿ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಒಳ್ಳೆಯ ನಿರ್ಧಾರವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಈ ವೇಳೆ ಸಹಾಯಕ ಚುನಾವಣಾಧಿಕಾರಿ ರೇಣುಕಾ, ಇಸ್ಮಾಯಿಲ್, ಚುನಾವಣಾ ಸಿಬ್ಬಂದಿ ನಾಗರಾಜಪ್ಪ, ಶೌಕತ್ ಅಲಿ, ಸೆಕ್ಟರ್ ಅಧಿಕಾರಿ ಶಾಂತನಾಯ್ಕ, ಮೈಕ್ರೋ ಅಬ್ಸರ್‌ವರ್ ಸುಜಿತ್ ಎಸ್.ವಿ, ಬಿ.ಎಲ್.ಒ ಅಂಜಲಿ ಉಪಸ್ಥಿತರಿದ್ದರು.

ಮನೆಯಲ್ಲಿ ಮತದಾನ ಮಾಡುವವರು:

ಕ್ಷೇತ್ರದಲ್ಲಿ ವಿಶೇಷಚೇತನರು 804, ಹಿರಿಯ ನಾಗರಿಕರಾದ 85 ವರ್ಷ ಮೇಲ್ಪಟ್ಟವರು 1458 ಮತದಾರರು ನೋಂದಾಯಿಸಿದ್ದು, ಏ.27 ರವರೆಗೆ ಮನೆಯಲ್ಲಿಯೇ ಮತದಾನ ಮಾಡುವರು.

- - - -25ಕೆಡಿವಿಜಿ57ಃ:

ದಾವಣಗೆರೆಯಲ್ಲಿ ಮನೆಯಲ್ಲಿಯೇ ಮತದಾನ ಮಾಡುವ ಕಾರ್ಯವನ್ನು ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್‌ ವೀಕ್ಷಣೆ ಮಾಡಿದರು.