ನಿಮ್ಮ ಆತ್ಮಸಾಕ್ಷಿಗೆ ಮತ ಹಾಕಿ: ಮಂಜುನಾಥ್‌

| Published : Apr 19 2024, 01:03 AM IST

ಸಾರಾಂಶ

ದಾಬಸ್‌ಪೇಟೆ: ಸ್ವಾಭಿಮಾನ ಹಾಗೂ ದೇಶದ ಸುರಕ್ಷತೆ ಚುನಾವಣೆ ಇದಾಗಿದ್ದು ನಿಮ್ಮ ಆತ್ಮಸಾಕ್ಷಿಗೆ ಮತ ಚಲಾಯಿಸಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಹೇಳಿದರು.

ದಾಬಸ್‌ಪೇಟೆ: ಸ್ವಾಭಿಮಾನ ಹಾಗೂ ದೇಶದ ಸುರಕ್ಷತೆ ಚುನಾವಣೆ ಇದಾಗಿದ್ದು ನಿಮ್ಮ ಆತ್ಮಸಾಕ್ಷಿಗೆ ಮತ ಚಲಾಯಿಸಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಹೇಳಿದರು.ಸೋಂಪುರ ಹೋಬಳಿಯ ಶಿವಗಂಗೆಯ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರಾಜಕೀಯ ನನಗೆ ಹೊಸದಿರಬಹುದು. ಆದರೆ ಜನ ಸಾಮಾನ್ಯರ ಒಡನಾಟ ನನಗೆ ಬಹಳ ಹತ್ತಿರವಾದುದು. ನಾನು ಲಕ್ಷಾಂತರ ಜನರ ಹೃದಯ ಚಿಕಿತ್ಸೆ ಮಾಡಿ ಅವರ ಜೀವ ಹಾಗೂ ಜೀವನ ಉಳಿಸಿರುವ ತೃಪ್ತಿಯಿದೆ. ನನ್ನ ಕೈಲಾದಷ್ಟು ಬಡವರು, ಕೂಲಿ ಕಾರ್ಮಿಕರು, ರೈತರ ಜೀವ ಕಾಪಾಡಿರುವ ಆತ್ಮತೃಪ್ತಿಯಿದೆ. ರಾಜಕೀಯದಿಂದ ನಾನು ಏನನ್ನೂ ಸಂಪಾದಿಸಲು ಬಂದಿಲ್ಲ. ದೇಶದ ಹಾಗೂ ಕನ್ನಡ ನಾಡಿನ ಜನರ ಆರೋಗ್ಯ ಸುಧಾರಣೆಗೆ ಏನಾದರೂ ಒಂದು ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ನನ್ನ ಬಯಕೆ. ಕ್ಷೇತ್ರದ ಮತದಾರರು ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕೊಡುವ ವಿಶ್ವಾಸವಿದೆ ಎಂದರು.

ಮಾಜಿ ಸಚಿವ ಅಶ್ವಥ್ ನಾರಾಯಣ್ ಮಾತನಾಡಿ, ದೇವೇಗೌಡರ ಮಾರ್ಗದರ್ಶನದಲ್ಲಿ ಯಾರು ನಿರೀಕ್ಷೆ ಮಾಡದ ಒಬ್ಬ ಸರಳ ಸಜ್ಜನ ವ್ಯಕ್ತಿಯನ್ನು ಪ್ರಧಾನಮಂತ್ರಿಗಳು ನಮ್ಮ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆ ಮಾಡಿರುವುದು ಹೆಮ್ಮೆಯ ವಿಷಯ. ಈ ಚುನಾವಣೆ ಧರ್ಮ-ಅಧರ್ಮದ ನಡುವಿನ ಹೋರಾಟ. ತಮ್ಮ ವೃತ್ತಿ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿ ಬೇಕೋ, ದರ್ಪ, ದೌರ್ಜನ್ಯ, ದಬ್ಬಾಳಿಕೆಯಿಂದಲೇ ಜನರನ್ನು ಬೆದರಿಸಿ, ಹೆದರಿಸಿ ರಾಜಕೀಯ ನಡೆಸುತ್ತಿರುವ ವ್ಯಕ್ತಿಬೇಕೋ ಜನರೇ ತೀರ್ಮಾನಿಸಬೇಕಿದೆ ಎಂದರು.

ಮಾಜಿ ಶಾಸಕ ಎ.ಮಂಜುನಾಥ್, ಶಿವಗಂಗೆ ಗ್ರಾಪಂ ಅಧ್ಯಕ್ಷ ಪ್ರಭುದೇವ್, ಮಾಜಿ ಅಧ್ಯಕ್ಷ ಪಂಚಾಕ್ಷರಿ, ಹೊನ್ನಗಂಗಶೆಟ್ಟಿ, ಮರಿಯಪ್ಪಇತರರಿದ್ದರು. ಪೋಟೋ 5 : ಸೋಂಪುರ ಹೋಬಳಿಯ ಶಿವಗಂಗೆಯ ಗಣಪತಿ ದೇವಾಲಯದಲ್ಲಿ ಎನ್‌ಡಿಎ ಅಭ್ಯರ್ಥಿ ಡಾ.ಮಂಜುನಾಥ್, ಮಾಜಿ ಸಚಿವ ಅಶ್ವಥ್ ನಾರಾಯಣ್, ಮಾಜಿ ಶಾಸಕ ಎ.ಮಂಜುನಾಥ್ ಪೂಜೆ ಸಲ್ಲಿಸಿದರು.