ಹೊಸಪೇಟೆಯ ಆಟೋ ಚಾಲಕನ ಮಗಳು ವಿಶಾಲಾಕ್ಷಿ ಸಾಧನೆ

| Published : May 10 2024, 01:31 AM IST

ಸಾರಾಂಶ

ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ (ಮಾಜಿ ಪುರಸಭೆ) ಶಾಲೆಯ ವಿದ್ಯಾರ್ಥಿನಿ ಎಸ್‌. ವಿಶಾಲಾಕ್ಷಿ ಕನ್ನಡ ಮಾಧ್ಯಮದಲ್ಲಿ ಓದಿ ಈ ಸಾಧನೆ ಮಾಡಿದ್ದಾಳೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ಇಲ್ಲೊಬ್ಬ ಆಟೋ ಚಾಲಕನ ಮಗಳು 625ಕ್ಕೆ 611 ಅಂಕಗಳನ್ನು ಪಡೆದಿದ್ದು, ತನ್ನ ತಂದೆಯ ಆಶಯದಂತೆ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿ ಐಎಎಸ್‌ ಅಧಿಕಾರಿಯಾಗುವ ಛಲ ತೊಟ್ಟಿದ್ದಾಳೆ.

ನಗರದ ಪಾರ್ವತಿನಗರದ ನಿವಾಸಿ ಹಾಗೂ ಆಟೋ ಚಾಲಕ ಎಸ್‌. ಕುಮಾರಸ್ವಾಮಿ ಹಾಗೂ ಎಸ್‌. ವೀಣಾ ದಂಪತಿ ಪುತ್ರಿ ಎಸ್‌. ವಿಶಾಲಾಕ್ಷಿ ಎಸ್ಸೆಸ್ಸೆಲ್ಸಿಯಲ್ಲಿ ಪರಿಶ್ರಮಪಟ್ಟು ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ (ಮಾಜಿ ಪುರಸಭೆ) ಶಾಲೆಯ ವಿದ್ಯಾರ್ಥಿನಿ ಎಸ್‌. ವಿಶಾಲಾಕ್ಷಿ ಕನ್ನಡ ಮಾಧ್ಯಮದಲ್ಲಿ ಓದಿ ಈ ಸಾಧನೆ ಮಾಡಿದ್ದಾಳೆ. ಈ ಶಾಲೆ ಆರಂಭಗೊಂಡಾಗಿನಿಂದಲೂ ಇಷ್ಟೊಂದು ಅಂಕಗಳನ್ನು ಇದುವರೆಗೆ ಯಾರೂ ಗಳಿಸಿಲ್ಲ. ಇವರ ಅಕ್ಕ ಎಸ್. ಕಾಮಾಕ್ಷಿ ಕಳೆದ ವರ್ಷ ಶೇ. 92ರಷ್ಟು ಫಲಿತಾಂಶ ಗಳಿಸಿದ್ದರು. ಆದರೆ ವಿಶಾಲಾಕ್ಷಿ ಶೇ. 97.76ರಷ್ಟು ಫಲಿತಾಂಶ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಕುಮಾರಸ್ವಾಮಿ-ವೀಣಾ ದಂಪತಿಗೆ ಆರು ಜನ ಹೆಣ್ಣು ಮಕ್ಕಳಿದ್ದಾರೆ. ಕಿತ್ತು ತಿನ್ನುವ ಬಡತನ ಇದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ ಎಂದು ಶಪಥ ತೊಟ್ಟಿರುವ ಕುಮಾರಸ್ವಾಮಿ ಹಗಲು-ರಾತ್ರಿ ಎನ್ನದೇ ಆಟೋ ಓಡಿಸುತ್ತಾರೆ. ಅಪ್ಪನ ಕಷ್ಟಕ್ಕೆ ಮುಂದೆ ಆಸರೆಯಾಗಬೇಕು. ಜತೆಗೆ ತಂದೆ ಕನಸು ಈಡೇರಿಸಬೇಕೆಂಬ ಛಲದೊಂದಿಗೆ ಮಕ್ಕಳು ಕೂಡ ಉತ್ತಮ ಅಂಕಗಳನ್ನು ಗಳಿಸಿದ್ದು, ಈಗಾಗಲೇ ಎಸ್‌. ವಿಶಾಲಾಕ್ಷಿ ಹಾಗೂ ಎಸ್‌. ಕಾಮಾಕ್ಷಿ ಸಾಬೀತು ಮಾಡಿ ತೋರಿಸಿದ್ದಾರೆ. ಹಾಗಾಗಿ ಇಡೀ ಹೊಸಪೇಟೆಯಲ್ಲಿ ಈ ಮಕ್ಕಳ ಕುರಿತು ಪ್ರಶಂಸೆ ವ್ಯಕ್ತವಾಗಿದೆ.

ಮೂಲತಃ ಕೂಡ್ಲಿಗಿ ತಾಲೂಕಿನ ಕಕ್ಕುಪ್ಪಿಯವರಾದ ಇವರು, ಹೊಸಪೇಟೆಯಲ್ಲಿ ನೆಲೆಸಿ ಮೂರು ದಶಕಗಳೇ ಕಳೆದಿದೆ. ಬಡತನದಲ್ಲೇ ಜೀವನ ಸಾಗಿಸುತ್ತಿರುವ ಇವರಿಗೆ ಇವರ ಮಕ್ಕಳೇ ಮುಂದೆ ಬೆಳಕಾಗಲಿದ್ದಾರೆ ಎಂಬ ಭರವಸೆಯಲ್ಲಿದ್ದಾರೆ. ಇದಕ್ಕಾಗಿ ಕಷ್ಟ-ಕಾರ್ಪಣ್ಯ ಎದುರಿಸುತ್ತಿದ್ದಾರೆ. ಕುಮಾರಸ್ವಾಮಿ ಹೊಸಪೇಟೆಯ ರೈಲ್ವೆ ನಿಲ್ದಾಣದಿಂದ ಹಂಪಿ ವರೆಗೆ ಆಟೋ ಚಾಲನೆ ಮಾಡುತ್ತಾರೆ. ಹಂಪಿಗೆ ಬರುವ ಪ್ರವಾಸಿಗರೇ ಇವರ ಪ್ರಯಾಣಿಕರು.

ಈ ಕುಟುಂಬಕ್ಕೆ ಚಿಕ್ಕಾಸು ಆಸ್ತಿಯೂ ಇಲ್ಲ. ಇರುವ ಶೀಟಿನ ಮನೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಆದರೂ ಮಕ್ಕಳ ಓದಿಗೆ ಕಡಿಮೆ ಮಾಡಿಲ್ಲ. ಆಟೋ ಓಡಿಸಿ ಬಂದ ದುಡ್ಡಿನಲ್ಲೇ ಆರು ಹೆಣ್ಣು ಮಕ್ಕಳನ್ನು ಓದಿಸುತ್ತಿದ್ದಾರೆ.

"ನಾನಂತೂ ಆಸ್ತಿ ಮಾಡಿಲ್ಲ. ಮಕ್ಕಳನ್ನೇ ಆಸ್ತಿ ಮಾಡಿರುವೆ. ಇವರು ಓದಿ ಮುಂದೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ದೊಡ್ಡ ಆಫೀಸರ್‌ಗಳಾದರೆ ಅಷ್ಟೇ ಸಾಕು, ಆಗ ನನ್ನ ಬದುಕು ಸಾರ್ಥಕವಾಗುತ್ತದೆ " ಎಂದು ಕುಮಾರಸ್ವಾಮಿ ಭಾವುಕರಾದರು.

ನಾನು ಮುಂದೆ ಐಎಎಸ್‌ ಪಾಸು ಮಾಡುವ ಗುರಿ ಹೊಂದಿರುವೆ. ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿಕೊಂಡು ಉತ್ತಮ ಅಂಕಗಳನ್ನು ಕೂಡ ತೆಗೆಯಬಲ್ಲೆ. ಸತತ ಪರಿಶ್ರಮ, ಏಕಾಗ್ರತೆಯಿಂದ ಓದಿದರೆ ಕಂಡ ಕನಸು ಖಂಡಿತ ಈಡೇರಲಿದೆ ಎನ್ನುತ್ತಾರೆ ಎಸ್‌. ವಿಶಾಲಾಕ್ಷಿ, ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿನಿ.