ಇಂದಿನಿಂದ ಚನ್ನಬಸವ ಪಟ್ಟದ್ದೇವರ 25ನೆಯ ಸ್ಮರಣೋತ್ಸವ

| Published : Apr 19 2024, 01:02 AM IST / Updated: Apr 19 2024, 01:03 AM IST

ಸಾರಾಂಶ

ವಚನ ಜಾತ್ರೆ, ಅಕ್ಕಮಹಾದೇವಿ ಜಯಂತ್ಯುತ್ಸವಕ್ಕೆ ಭರದ ಸಿದ್ಧತೆ. ಭಾಲ್ಕಿಯ ಚನ್ನಬಸವಾಶ್ರಮದಲ್ಲಿ 5 ದಿನ ನಡೆಯಲಿರುವ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಈ ಐದು ದಿನದ ಐತಿಹಾಸಿಕ ಸಮಾರಂಭಕ್ಕೆ ನಾಡಿನ ಹೆಸರಾಂತ ಮಠಾಧೀಶರು, ಹಿರಿಯ ಸಾಹಿತಿಗಳು, ಬುದ್ದಿಜೀವಿಗಳು, ಕಲಾವಿದರು, ಗಣ್ಯರು ಸಾಕ್ಷಿಯಾಗಲಿದ್ದಾರೆ.

ಕನ್ನಡಪ್ರಭ ವಾರ್ತೆ ಭಾಲ್ಕಿ

ವಚನ ಜಾತ್ರೆ-2024, ಡಾ.ಚನ್ನಬಸವ ಪಟ್ಟದ್ದೇವರ 25ನೆಯ ಸ್ಮರಣೋತ್ಸವ ಮತ್ತು ಅಕ್ಕಮಹಾದೇವಿ ಜಯಂತ್ಯುತ್ಸವ ಆಚರಣೆಗೆ ಪಟ್ಟಣ ಸಜ್ಜುಗೊಂಡಿದೆ.

ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದಿಂದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮತ್ತು ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಏ.19 ಗುರುವಾರದಿಂದ 23ರ ವರೆಗೆ ಅರ್ಥಪೂರ್ಣ ಕಾರ್ಯಕ್ರಮಗಳು ನೆರವೇರಲಿವೆ. ಈ ಐದು ದಿನದ ಐತಿಹಾಸಿಕ ಸಮಾರಂಭಕ್ಕೆ ನಾಡಿನ ಹೆಸರಾಂತ ಮಠಾಧೀಶರು, ಹಿರಿಯ ಸಾಹಿತಿಗಳು, ಬುದ್ದಿಜೀವಿಗಳು, ಕಲಾವಿದರು, ಗಣ್ಯರು ಸಾಕ್ಷಿಯಾಗಲಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಬ್ಯಾನರ್‌ಗಳ ಅಬ್ಬರ ಕಾಣುತ್ತಿಲ್ಲ. ಆದರೆ, ಸಮಾರಂಭದ ಯಶಸ್ವಿಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಚನ್ನಬಸವಾಶ್ರಮ ಪರಿಸರದಲ್ಲಿ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದೆ. ಐದು ದಿನಗಳ ಕಾಲ ನಿರಂತರ ಅನ್ನದಾಸೋಹಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸ್ವಾಗತ ಸಮಿತಿ ರಚನೆಗೊಂಡಿದೆ. ಜತೆಗೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಿದ್ದರಿಂದ ವ್ಯವಸ್ಥಿತವಾಗಿ ಶಿಸ್ತುಬದ್ಧವಾಗಿ ಎಲ್ಲ ಕಾರ್ಯಗಳು ನಡೆಯುತ್ತಿವೆ.

ಪಟ್ಟದ್ದೇವರ ಸ್ಮರಣೋತ್ಸವ ಪೂರ್ವಭಾವಿಯಾಗಿ ಈಗಾಗಲೇ ಏ.10 ರಿಂದ ಪ್ರವಚನ ಪ್ರಾರಂಭಗೊಂಡಿದೆ. ಅತ್ತಿವೇರಿಯ ಬಸವೇಶ್ವರಿ ತಾಯಿ ಅವರು ಅಕ್ಕಮಹಾದೇವಿ ಜೀವನ ದರ್ಶನ ವಿಷಯದ ಮೇಲೆ ಭಕ್ತರಿಗೆ ಜ್ಞಾನದಾಸೋಹ ಉಣ ಬಡಿಸುತ್ತಿದ್ದಾರೆ.

ಏ.15 ರಿಂದ ವಚನ ಪಾರಾಯಣ ನಡೆಯುತ್ತಿದ್ದು, ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಪ್ರತಿದಿನ ಪ್ರಾತಃಕಾಲದ ಸಮಯದಲ್ಲಿ ವಚನಗಳ ಝೇಂಕಾರ ಮೊಳಗುತ್ತಿದೆ. ಸಾವಿರಾರೂ ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ.

ಇಂದು ವಚನೇತರ ಸಾಹಿತ್ಯ ಗೋಷ್ಠಿ ಉದ್ಘಾಟನೆ: ಶುಕ್ರವಾರ ಸಂಜೆ 6ಕ್ಕೆ ನಡೆಯುವ ಅಕ್ಕನ ವಚನೇತರ ಸಾಹಿತ್ಯ ಗೋಷ್ಠಿ ಉದ್ಘಾಟನೆ ಮೂಲಕ ಐದು ದಿನದ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಹಿರಿಯ ಚಿಂತಕ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅವರು ಗೋಷ್ಠಿ ಉದ್ಘಾಟಿಸಲಿದ್ದಾರೆ. ಬೀದರ್ ಲಿಂಗಾಯತ ಮಹಾಮಠದ ಡಾ.ಅಕ್ಕ ಅನ್ನಪೂರ್ಣ ತಾಯಿ ಸಾನ್ನಿಧ್ಯ ವಹಿಸುವರು.

ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಬುರಗಿಯ ಹಿರಿಯ ಸಾಹಿತಿ ಡಾ.ಕಲ್ಯಾಣರಾವ ಪಾಟೀಲ್ ಅನುಭಾವ ನೀಡಲಿದ್ದಾರೆ. ಬೀದರ್ ರೋಟರಿ ಕ್ಲಬ್ ಅಧ್ಯಕ್ಷ ಸಂಗಮೇಶ ಆಣದೂರೆ ಅವರು ಬಸವ ಗುರುವಿನ ಪೂಜೆ ನೆರವೇರಿಸಲಿದ್ದಾರೆ.

ಕಲಬುರಗಿಯ ಸಹಾಯಕ ಅಭಿಯಂತರ ಬಸವರಾಜ ಬಿಜ್ಜಲವಾಡೆ ಅವರನ್ನು ಸನ್ಮಾನಿಸಲಾಗುತ್ತಿದೆ. ದಿಲೀಪಕುಮಾರ ಡೊಂಗರಗೆ, ಸೋಮಶೇಖರ ಪಾಟೀಲ್, ರಾಜಪ್ಪ ಪಾಟೀಲ್, ಸೂರ್ಯಕಾಂತ ಸುಂಟೆ, ಸಿದ್ದಯ್ಯ ಕಾವಡಿಮಠ, ವಿಶ್ವನಾಥಪ್ಪ ಬಿರಾದಾರ, ಕಂಟೆಪ್ಪ ಗಂದಿಗೂಡೆ, ಚಂದ್ರಶೇಖರ ಬನ್ನಾಳೆ, ದಿಲೀಪ ಮಡಿವಾಳ, ನಂದಕುಮಾರ ಹಡಪದ, ಏಕನಾಥ ಪಂಚಾಳ, ಬಸವರಾಜ ಚಂದಾ, ಮನೋಹರ ಕಾವಳೆ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಸಮಾರಂಭದ ಯಶಸ್ವಿಗೆ ಭರದ ಸಿದ್ಧತೆ: ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಐದು ದಿನಗಳ ಐತಿಹಾಸಿಕ ಸಮಾರಂಭದ ಯಶಸ್ವಿಗೆ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರ್ನಾಟಕ ಅಲ್ಲದೇ ನೆರೆಯ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳ ಅಪಾರ ಸಂಖ್ಯೆಯ ಭಕ್ತರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಹಿರೇಮಠ ಸಂಸ್ಥಾನ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ತಿಳಿಸಿದ್ದಾರೆ.