ಗೋಕರ್ಣ ಮಹಾಬಲೇಶ್ವರ ಮಂದಿರದ ಗರ್ಭಗುಡಿ ಕೆಲಕಾಲ ಜಲಾವೃತ

| Published : Apr 21 2024, 02:26 AM IST / Updated: Apr 21 2024, 12:02 PM IST

ಗೋಕರ್ಣ ಮಹಾಬಲೇಶ್ವರ ಮಂದಿರದ ಗರ್ಭಗುಡಿ ಕೆಲಕಾಲ ಜಲಾವೃತ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಮಶಾನ ಕಾಳಿ ಮಂದಿರಕ್ಕೆ ತೆರಳಲು ಸಂಗಮ ನಾಲಾಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಗಾಗಿ ನಾಲಾದಲ್ಲಿ ಮಣ್ಣು ರಾಶಿ ಹಾಕಲಾಗಿದೆ. ಹೀಗಾಗಿ ಶನಿವಾರ ಮಳೆ ಸುರಿದ ಸಂದರ್ಭದಲ್ಲಿ ಮಹಾಬಲೇಶ್ವರ ಮಂದಿರದ ತೀರ್ಥ ಹೊರ ಹೋಗುವ ಸೋಮಸೂತ್ರದಿಂದ ಗರ್ಭಗುಡಿಗೆ ನೀರು ನುಗ್ಗಿತು.

ಗೋಕರ್ಣ: ಅವೈಜ್ಞಾನಿಕ ಕಾಮಗಾರಿ ನಡುವೆ ಶನಿವಾರ ಸುರಿದ ಭಾರಿ ಮಳೆಯಿಂದಾಗಿ ಇಲ್ಲಿಯ ಮಹಾಬಲೇಶ್ವರ ಮಂದಿರದ ಗರ್ಭಗುಡಿ ಕೆಲಕಾಲ ಜಲಾವೃತ್ತವಾಗಿತ್ತು.

ಸ್ಮಶಾನ ಕಾಳಿ ಮಂದಿರಕ್ಕೆ ತೆರಳಲು ಸಂಗಮ ನಾಲಾಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಗಾಗಿ ನಾಲಾದಲ್ಲಿ ಮಣ್ಣು ರಾಶಿ ಹಾಕಲಾಗಿದೆ. ಹೀಗಾಗಿ ಶನಿವಾರ ಮಳೆ ಸುರಿದ ಸಂದರ್ಭದಲ್ಲಿ ಮಹಾಬಲೇಶ್ವರ ಮಂದಿರದ ತೀರ್ಥ ಹೊರ ಹೋಗುವ ಸೋಮಸೂತ್ರದಿಂದ ಗರ್ಭಗುಡಿಗೆ ನೀರು ನುಗ್ಗಿತು. ಇದರಿಂದ ಭಕ್ತರಿಗೆ ಸ್ಪರ್ಶದರ್ಶನ ಸಿಗಲಿಲ್ಲ. ಸತತ ಮೂರು ಗಂಟೆಗೂ ಅಧಿಕಕಾಲ ನೀರು ತುಂಬಿತ್ತು. ಸೇತುವೆ ಕಾಮಗಾರಿ ಗುತ್ತಿಗೆ ಪಡೆದವರು ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿ ಅಂತೂ ನೀರು ಖಾಲಿ ಮಾಡಿ ಹೊರಹೋಗಲು ಅನುವು ಮಾಡಿದರು. ಆನಂತರ ಮಂದಿರದ ಮಧ್ಯಾಹ್ನದ ನಿತ್ಯ ನೇಮಿತ್ಯ ಮಹಾಪೂಜೆ ನೆರವೇರಿತು.

ಎಸಿ ಭೇಟಿ:  ಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿಯಾದ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುತ್ತಿಗೆದಾರರಿಂದ ಕೆಲಸದ ಪ್ರಾರಂಭದ ದಿನ ಮತ್ತಿತರ ಮಾಹಿತಿ ಪಡೆದ ಅವರು, ಕೆಲಸ ವಿಳಂಬ ಮಾಡಿರುವ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಈ ರೀತಿ ತೊಂದರೆ ಮಾಡದಂತೆ ಖಡಕ್ ಸೂಚನೆ ನೀಡಿದರು. ಈ ವೇಳೆ ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಿನಯಕುಮಾರ, ಪಂಚಾಯಿತಿ ಕಾರ್ಯದರ್ಶಿ, ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಮಂದಿರದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಹಾಜರಿದ್ದರು.

ಬೇಕಿದೆ ಕ್ರಮ: ತ್ಯಾಜ್ಯ ನೀರು ಸಹಿತ ಮಳೆಯ ನೀರು ದೇವಾಲಯದ ಗರ್ಭಗುಡಿ ಸೇರುವುದನ್ನು ತಪ್ಪಿಸಲು ದೊಡ್ಡ ಜಂತ್ರಡಿ ಮಾದರಿಯ ಗೇಟ್ ಅಳವಡಿಸಿ ಸಮಸ್ಯೆಗೆ ಮುಕ್ತಿ ನೀಡಬೇಕಿದ್ದು, ಈ ಬಗ್ಗೆ ಸಂಬಂಧಿಸಿದ ಇಲಾಖೆ ತುರ್ತಾ ಕ್ರಮ ತೆಗೆದುಕೊಳ್ಳಬೇಕು ಎಂದು ಜನರು ಆಗ್ರಹಿದ್ದಾರೆ.

ಗೋಕರ್ಣದಲ್ಲಿ ಭಾರಿ ಮಳೆ :  ಶನಿವಾರ ಮುಂಜಾನೆ ಗುಡುಗು, ಮಿಂಚಿನ ಅಬ್ಬರದೊಂದಿಗೆ ಈ ಭಾಗದಲ್ಲಿ ಭಾರಿ ಮಳೆ ಸುರಿದಿದೆ.ಬಿರು ಬಿಸಲಿನ ತಾಪಕ್ಕೆ ಮಳೆಯ ಸಿಂಚನ ಭೂಮಿಗೆ ತಂಪೆರೆದಿದೆ. ಮೂರು ತಾಸಿಗೂ ಹೆಚ್ಚು ಸಮಯ ಸುರಿದ ಮಳೆಯಿಂದ ಎಲ್ಲ ಮಾರ್ಗದ ಚರಂಡಿ ನೀರು ತುಂಬಿ ರಸ್ತೆ ಮೇಲೆ ಹರಿದಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿ ಬಿದ್ದಿತ್ತು. ಗಾಯತ್ರಿ ಓಣಿಯ ಪರ್ವತದ ಕಡೆಯಿಂದ ಬಂದ ಮಳೆಯ ನೀರು ಮಹಾಗಣಪತಿ ಮಂದಿರ ಮುಂಭಾಗದಲ್ಲಿ ತ್ಯಾಜ್ಯಗಳ ರಾಶಿ, ಹೊಲಸು ನೀರು ತುಂಬಿತ್ತು. ಇದನ್ನೆ ತುಳಿದು ಭಕ್ತರು ದೇವರ ದರ್ಶನಕ್ಕೆ ತೆರಳುವ ಅನಿವಾರ್ಯತೆ ಎದುರಾಗಿತ್ತು.

ಇದರಂತೆ ಗ್ರಾಮೀಣ ಪ್ರದೇಶವಾದ ಗಂಗಾವಳಿ, ನಾಡುಮಾಸ್ಕೇರಿ, ಬಂಕಿಕೊಡ್ಲ, ತದಡಿ, ತೊರ್ಕೆ, ಮಾದನಗೇರಿ, ಹಿರೇಗುತ್ತಿ ವ್ಯಾಪ್ತಿಯಲ್ಲಿ ಸಹ ಮಳೆಯಿಂದ ಜನ ಜೀವನಕ್ಕೆ ತೊಂದರೆಯಾಗಿತ್ತು.

ಕರೆಂಟ್ ಇಲ್ಲ, ನೆಟ್‌ವರ್ಕ್‌ ಇಲ್ಲ: ಗಾಳಿ, ಗುಡುಗಿನ ಆರ್ಭಟಕ್ಕೆ ಹಲವೆಡೆ ವಿದ್ಯುತ್ ಕಂಬಗಳ ಮುರಿದಿದ್ದು, ತಂತಿ ತುಂಡಾಗಿದ್ದ ಪರಿಣಾಮ ಸಂಜೆಯವರೆಗೂ ವಿದ್ಯತ್ ವ್ಯತ್ಯಯ ಉಂಟಾಗಿತ್ತು. ವಿದ್ಯುತ್ ಪೂರೈಕೆ ಇಲ್ಲದ ಪರಿಣಾಮ ಬಹುತೇಕ ಮೊಬೈಲ್ ಕಂಪನಿಯ ಸಿಗ್ನಲ್ ಬಂದಾಗಿತ್ತು. ಇದರಿಂದ ದೂರವಾಣಿ ಸ್ತಬ್ಧವಾಗಿತ್ತು.