ಮರುಕಳಿಸುವುದೇ ತರೀಕೆರೆ ಶುಕ್ರವಾರ ಸಂತೆಯ ಗತವೈಭವ

| Published : May 09 2024, 01:04 AM IST

ಸಾರಾಂಶ

ತರೀಕೆರೆ, ಪುರಸಭೆಯಿಂದ ತರೀಕೆರೆ ಪಟ್ಟಣದಲ್ಲಿ ಪ್ರತಿ ಶುಕ್ರವಾರ ನಡೆಯುವ ವಾರದ ಸಂತೆ ರಾಜ್ಯದೆಲ್ಲಡೆ ಅಪಾರ ಜನಪ್ರಿಯತೆ ಪಡೆದಿತ್ತು.ಈ ಸಂತೆ ಮುಕ್ತ ಮಾರುಕಟ್ಟೆಯಲ್ಲಿ, ವರ್ತಕರ ವಹಿವಾಟಿನ ಭೂಪಟದಲ್ಲಿ ಅಚ್ಚಳಿಯದೆ ಪ್ರಮುಖ ಸ್ಥಾನ ಪಡೆದು ಹಳ್ಳಿ, ಪಟ್ಟಣ, ನಗರ ಸೇರಿದಂತೆ ಎಲ್ಲೆಡೆ ಖ್ಯಾತಿ ಹಬ್ಬಿ ತನ್ನವಿಷೇಷತೆಯಿಂದಲೇ ಗುರುತಿಸಿ ಕೊಂಡಿತ್ತು.

- ಬಡವರ ಬದುಕಿಗೂ ಸಂಜೀವಿನಿಯಾಗಿದ್ದ ವಾರದ ಸಂತೆಯ ಆ ದಿನಗಳು-

ಅನಂತ ನಾಡಿಗ್ಕನ್ನಡಪ್ರಭ ವಾರ್ತೆ, ತರೀಕೆರೆ

ಪುರಸಭೆಯಿಂದ ತರೀಕೆರೆ ಪಟ್ಟಣದಲ್ಲಿ ಪ್ರತಿ ಶುಕ್ರವಾರ ನಡೆಯುವ ವಾರದ ಸಂತೆ ರಾಜ್ಯದೆಲ್ಲಡೆ ಅಪಾರ ಜನಪ್ರಿಯತೆ ಪಡೆದಿತ್ತು.

ಈ ಸಂತೆ ಮುಕ್ತ ಮಾರುಕಟ್ಟೆಯಲ್ಲಿ, ವರ್ತಕರ ವಹಿವಾಟಿನ ಭೂಪಟದಲ್ಲಿ ಅಚ್ಚಳಿಯದೆ ಪ್ರಮುಖ ಸ್ಥಾನ ಪಡೆದು ಹಳ್ಳಿ, ಪಟ್ಟಣ, ನಗರ ಸೇರಿದಂತೆ ಎಲ್ಲೆಡೆ ಖ್ಯಾತಿ ಹಬ್ಬಿ ತನ್ನವಿಷೇಷತೆಯಿಂದಲೇ ಗುರುತಿಸಿ ಕೊಂಡಿತ್ತು.

ಧವಸ ಧಾನ್ಯಗಳು, ಧನಿಯ (ಕೊತ್ತಂಬರಿ ಬೀಜ) ಎಣ್ಣೆ ಕಾಳುಗಳು, ಬೇಳೆ ಕಾಳುಗಳು, ಹಸಿ ಮತ್ತು ಒಣಗಿದ ಶೇಂಗಾ, ಸಣ್ಣ ಮತ್ತು ದೊಡ್ಡ ಬೆಲ್ಲದ ಉಂಡೆಗಳು, ದಪ್ಪಕ್ಕಿ-ಸಣ್ಣಕ್ಕಿ-ಕೆಂಪಕ್ಕಿ-ಕುಸುಬಲಕ್ಕಿ-ಸೋನಾ ಮುಸುರಿ-ಬಾಸುಮತಿ ಅಕ್ಕಿ-ಸಣ್ಣ ತರಿ ಅಕ್ಕಿ, ದಪ್ಪ ಮತ್ತು ತೆಳು ಅವಲಕ್ಕಿ-ಗಟ್ಟಿ ಮತ್ತು ಜೊಳ್ಳು ಮಂಡಕ್ಕಿ, ಆಗ ತಾನೆ ಹೊಲಗಳಿಂದ ಕಟಾವು ಮಾಡಿ ತಂದ ವಿವಿಧ ಬಗೆಯ ತಾಜಾ ತರಕಾರಿಗಳು, ಸೊಪ್ಪು, ಸ್ಥಳೀಯ ವೀಳೆಯದೆಲೆ,ರಸ ಬಾಳೆ, ಕರಿ ಬಾಳೆ, ವಿವಿಧ ಬಗೆ ಅಡಕೆ, ಕೈಚೀಲ. ಕುಡ್ಲು-ಕೊಡಲಿ, ಕಂದ್ಲಿ, ಕುಡುಗೋಲು-ಕಡಗೋಲು, ಹಾರೆ, ಗುದ್ದಲಿ, ಪಿಕಾಶಿ, ಚಕ್ರದ ಕೀಲು, ಸಣ್ಣ ಮತ್ತು ದೊಡ್ಡ ಬಿದಿರಿನ ಬುಟ್ಟಿಗಳು, ರೈತರಿಗೆ ಉಪಯುಕ್ತವಾದ ಕೃಷಿ ಉಪಕರಣ, ಟಾರ್ ಪಾಲ್‌, ಕಬ್ಬಿಣದ ಪದಾರ್ಥಗಳು. ಬತ್ತದ, ರಾಗಿ ಹಾಗೂ ಹಸಿ ಹುಲ್ಲು ಇತ್ಯಾದಿ ಜಾನುವಾರುಗಳ ಮೇವು, ಬಾವಿ ಹಗ್ಗ, ಚಳ್ಳೆ ಹುರಿ, ಜಾನುವಾರುಗಳ ಮೂಗುದಾರ, ಗುಣಮಟ್ಟದ ಚಾಪೆ, ಈಚಲು ಚಾಪೆ, ತೆಂಗಿನ ನಾರಿನ ಕಸಪೊರಕೆ, ಮೆದೆ ಹಿಡಿ, ಹೀಗೆ ನೂರಾರು ಪದಾರ್ಥ ಒಂದೇ ಸಂತೆಯಲ್ಲೆ ಎಲ್ಲರ ಕೈಗೆ ಎಟುಕುವ ದರದಲ್ಲಿ ಸಿಗುವುದರಿಂದ ತರೀಕೆರೆ ಶುಕ್ರವಾರದ ಸಂತೆ ರಾಜ್ಯದೆಲ್ಲಡೆ ಜನಮನ್ನಣೆ ಪಡೆದಿದೆ. ಸಂತೆಯಲ್ಲಿ ಎಲ್ಲವೂ ಕ್ಯಾಶ್ ಅಂಡ್ ಕ್ಯಾರಿ, ಅಲ್ಲೇ ವ್ಯಾಪಾರ ಅಲ್ಲೆ ನಗದು, ಲಾಭ ನಷ್ಟಗಳ ಚಿಂತೆ ಇಲ್ಲ, ಪದಾರ್ಥಗಳ ಕೊರತೆ ಇಲ್ಲ. ತಮಗಿಷ್ಟ ಬಂದಷ್ಟು ಕೊಳ್ಳಬಹುದು, ಕೆಲವು ಪದಾರ್ಥಗಳನ್ನು ನೋಡಿ ಮುಂದಿನ ವಾರ ಬರುತ್ತೇನೆ ಎಂದು ಹೇಳಬಹುದು, ಪದಾರ್ಥಗಳ ಬಗ್ಗೆ ಅಷ್ಟೇ ದೃಢ ವಿಶ್ವಾಸ, ಆಯಾ ಸೀಸನ್ ಗಳಿಗೆ ತಕ್ಕ ಪದಾರ್ಥ ಎಲ್ಲರಿಗೂ ಸಿಗುವಂತ ಅದರಲ್ಲೂ ಸಣ್ಣ ಪುಟ್ಟ ಅಂಗಡಿಗಳನ್ನುಸಂತೆಯಲ್ಲಿ ಹಾಕಬಹುದು ಹೀಗೆ ಹಲವು ಸೌಲಭ್ಯಗಳ ದೊಡ್ಡ ಕಣಜ ಈ ಸಂತೆ. ನಾಲಿಗೆಯಲ್ಲಿ ನೀರೂರಿಸುವ ಜಿಲೇಬಿ-ಜಹಂಗೀರ್, ಬೋಂಡ, ತಾಜಾ ತಿನಿಸುಗಳು, ಮೇಜು, ಕುರ್ಚಿ, ನಿಲುಗನ್ನಡಿ ಚೌಕಟ್ಟು ಕನ್ನಡಿ ಗೃಹೋಪಕರಣಗಳು, ಹೂವು ಹಣ್ಣು ಹೀಗೆ ಏನುಂಟು ಏನಿಲ್ಲ, ನಿತ್ಯ ಬದುಕಿಗೆ ಬೇಕಾದ ಎಲ್ಲ ಪದಾರ್ಥಗಳು, ಕಾರಾ ಮಂಡಕ್ಕಿ ಅಂಗಡಿ, ಹೂವು ಹಣ್ಣು ಅಂಗಡಿಗಳ ಸಾಲಿನಲ್ಲಿ ಎಲ್ಲರೂ ತಮಗಿಷ್ಟವಾದ ಪದಾರ್ಥಗಳನ್ನು ಚಿಲ್ಲರೆ, ಬಿಡಿ ಬಿಡಿಯಾಗಿ ಅಥವಾ ಸಗಟಾಗಿ ಖರೀದಿಸ ಬಹುದು ಹಾಗಾಗಿ ಈ ಆದುನಿಕ ಕಾಲದಲ್ಲೂ ತನ್ನ ಜನಪ್ರಿಯತೆ ಕಾಪಿಟ್ಟುಕೊಂಡಿದೆ. ಅದಕ್ಕೆ ಇನ್ನಷ್ಟು ಸೌಲಭ್ಯ ದೊರೆತರೆ ತನ್ನ ಗತವೈಭವ ಪಡೆಯದೇ ಇರದು. ಈ ಮೊದಲು ತರೀಕೆರೆ ವಾರದ ಮಾರುಕಟ್ಟೆಯ ವಿವಿಧ ಪ್ರಮುಖ ಪದಾರ್ಥಗಳ ಧವಸ-ಧಾನ್ಯಗಳ, ಎಣ್ಣೆ ಕಾಳುಗಳ ಬೆಲೆಗಳ ಏರಿಳಿತ ರಾಜ್ಯದ ಪ್ರಮುಖ ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿತ್ತು, ರಾಜ್ಯದ ಬೇರೆ ಬೇರೆ ಮಾರುಕಟ್ಟೆಗಳ ಬೆಲೆಗಳು ತರೀಕೆರೆ ಸಂತೆಯಲ್ಲಿನ ಬೆಲೆಗಳ ಮೇಲೆ ಅವಲಂಬಿತವಾಗಿದ್ದವು ಎಂದರೆ ತರೀಕೆರೆ ಸಂತೆ ಮಹತ್ವ ಎಷ್ಟು ಪ್ರಮುಖವಾಗಿತ್ತು. ರಾಜ್ಯದ ನಾನಾ ಭಾಗಗಳಿಂದ ಪ್ರಮುಖ ವರ್ತಕರು-ಉದ್ಯಮಿಗಳು ತರೀಕೆರೆ ಶುಕ್ರವಾರದ ಸಂತೆಯಲ್ಲಿ ಭಾಗವಹಿಸುತ್ತಿದ್ದರು. ತಾಲೂಕಿನ ನಾನಾ ಭಾಗಗಳಿಂದ ಬರುತ್ತಿದ್ದ ಎತ್ತಿನ ಗಾಡಿ, ಕಮಾನ್ ಗಾಡಿಗಳು, ಒಂಟೆತ್ತಿನ ಗಾಡಿಗಳ ಒಡಾಟ ಇವುಗಳನ್ನೆಲ್ಲಾ ನೋಡುವುದೇ ಆನಂದ, ಸಂತೆ ದಿನ ಬಂತೆಂದರೆ ಜನರಿಗೆ ಏನೋ ಒಂದು ರೀತಿಯ ಹರುಷ.ಸಂತೆಯಲ್ಲಿ ಸ್ವಲ್ಪವೇ ಹಣದಲ್ಲಿ ಕೈಚೀಲ ತುಂಬುವಷ್ಟು ಪದಾರ್ಥಗಳು, ವಾರಕ್ಕಾಗುವಷ್ಟು ತರಕಾರಿ, ಬೇಳೆ ಕಾಳು ಸಿಗುತ್ತಿತ್ತು, ಜನಸಾಮಾನ್ಯರ ಮುಕ್ತ ಮಾರುಕಟ್ಟೆಯಾಗಿದ್ದ ತರೀಕೆರೆ ಶುಕ್ರವಾರದ ಸಂತೆ ನಿಜಕ್ಕೂ ಬಡವರ ಪಾಲಿಗೆ ಸಂಜೀವಿನಿ. ದುಡಿಮೆಗೆ ಮತ್ತು ಶ್ರಮಕ್ಕೆ ತಕ್ಕ ಪ್ರತಿಫಲ ಬದುಕಿನ ಆಶಾಕಿರಣ. ತರೀಕೆರೆ ಶುಕ್ರವಾರದ ವಾರದ ಸಂತೆ ಈ ಹಿಂದೆ ಇದ್ದ ಹಳೇ ಮೈದಾನದಿಂದ ಎಪಿಎಂಸಿ ಆವರಣದ ಪಕ್ಕದ ಸ್ಥಳಕ್ಕೆ ಸ್ಥಳಾಂತರಗೊಂಡು ಮುಂದುವರಿದಿದೆ. ಪುರಸಭೆ ಲಕ್ಷಾಂತರ ರು.ಖರ್ಚು ಮಾಡಿ ವಿಶಾಲ ಮಳಿಗೆಗಳನ್ನು ನಿರ್ಮಿಸಿಕೊಟ್ಟಿದೆ, ಸಂತೆ ಮೈದಾನ ದಲ್ಲಿ ರಸ್ತೆ, ವಿದ್ಯುತ್ ಇತ್ಯಾದಿ ಮೂಲ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ.

ಎಲ್ಲಾ ಅಚ್ಚುಕಟ್ಟಾದ ವ್ಯವಸ್ಥೆ ಜತೆಗೆ ವ್ಯಾಪಾರ ವಹಿವಾಟು ನಡೆದರೆ ಚರಿತ್ರೆ ಮರುಕಳಿಸಬಹುದು ಎನ್ನುತ್ತಾರೆ ಅನುಭವಿಗಳು. ತರೀಕೆರೆ ಶುಕ್ರವಾರದ ಸಂತೆ ಗತವೈಭವ ಮತ್ತೆ ಬರಬೇಕು ಎಂಬುದು ಎಲ್ಲರ ಆಶಯ. ಹಾಗಾಗಿ ಈಗ ನಡೆಯುತ್ತಿರುವ ಶುಕ್ರವಾರದ ಸಂತೆಗೆ ಸ್ಥಳದಲ್ಲಿ ಮತ್ತಷ್ಟು ಅಭಿವೃದ್ಧಿ, ಕಾಯಕಲ್ಪ ದೊರಕಿದರೆ ಮತ್ತೆ ಆ ಗತ ವೈಭವ ಕಾಣಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.--ಕೋಟ್--

ತರೀಕೆರೆ ಪಟ್ಟಣದಲ್ಲಿ ಪುರಸಭೆಯಿಂದ ಪ್ರತಿ ಶುಕ್ರವಾರ ನಡೆಯುತ್ತಿರುವ ವಾರದ ಸಂತೆ ಮೈದಾನದಲ್ಲಿ ನಗರೋತ್ಧಾನ ಹಂತ- 4ನೇ ಯೋಜನೆಯಲ್ಲಿ ಅಂದಾಜು 75 ಲಕ್ಷ ರು.ಗಳಲ್ಲಿ ಶೆಡ್ ಗಳನ್ನು ಪ್ಲಾಟ್ ಫಾರಂ ನಿರ್ಮಿಸಲು ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಯಿಂದ ಟೆಂಡರ್ ಕರೆಯಲಾಗಿದೆ. ಪಟ್ಟಣದ ಶುಕ್ರವಾರದ ವಾರದ ಸಂತೆಯನ್ನು ಅಭಿವೃದ್ಧಿ ಗೊಳಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ತಿಳಿಸಿದ್ದಾರೆ.

7ಕೆಟಿಆರ್.ಕೆ.1ತರೀಕೆರೆಯಲ್ಲಿ ಪ್ರತಿ ಶುಕ್ರವಾರ ನಡೆಯುತ್ತಿರುವ ವಾರದ ಸಂತೆ7ಕೆಟಿಆರ್.ಕೆ.2ಃ ಎಚ್.ಪ್ರಶಾಂತ್, ಪುರಸಭೆ ಮುಖ್ಯಾಧಿಕಾರಿಗಳು