ಬಿರುಬಿಸಿಲಿನಲ್ಲೂ ಬತ್ತದ ಮತದಾರರ ಉತ್ಸಾಹ

| Published : May 08 2024, 01:01 AM IST

ಬಿರುಬಿಸಿಲಿನಲ್ಲೂ ಬತ್ತದ ಮತದಾರರ ಉತ್ಸಾಹ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷೇತ್ರದ 17ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಪ್ರಾರಂಭದಲ್ಲಿ ವಿವಿ ಪ್ಯಾಟ್‌ ಕೈಕೊಟ್ಟಿದ್ದವು. ತಕ್ಷಣವೇ ಅಧಿಕಾರಿ ವರ್ಗ ಅವುಗಳನ್ನು ಬದಲಿಸಿತು. ಹೀಗಾಗಿ ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆಯಾಗಲಿಲ್ಲ.

ಹುಬ್ಬಳ್ಳಿ:

ಮತದಾನಕ್ಕೆ ಹುರುಪು, ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ, ನೆರಳಿನ ವ್ಯವಸ್ಥೆ ಎಲ್ಲವುದರ ನಡುವೆ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಶಾಂತಿಯುತ ಮತದಾನವಾಗಿದೆ. ಆದರೆ ವೃದ್ಧರಿಗೆ, ಅಂಗವಿಕಲರಿಗೆ ಮನೆಯಿಂದಲೇ ಮತದಾನ ಅವಕಾಶವಿತ್ತು. ಆದರೆ ಅಧಿಕಾರಿ ವರ್ಗ ಸರಿಯಾದ ಮಾಹಿತಿ ನೀಡದ ಕಾರಣ ಮತಗಟ್ಟೆಗೆ ಬಂದು ಮತದಾನ ಮಾಡುವುದು ಅನಿವಾರ್ಯವಾಗಿತ್ತು.

ಕೆಲವೆಡೆ ಪಟ್ಟಿಯಲ್ಲಿದ್ದರೂ ಹುಡುಕಲು ಬಿಎಲ್‌ಒಗಳ ನಿರಾಸಕ್ತಿ, ಮತಪಟ್ಟಿಯಲ್ಲಿ ಹೆಸರಿದ್ದರೂ ಸರಿಯಾಗಿ ಹುಡುಕದೇ ವಾಪಸ್‌ ಕಳುಹಿಸುತ್ತಿದ್ದ ದೃಶ್ಯವೂ ಅಲ್ಲಲ್ಲಿ ಕಂಡು ಬಂತು. ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ

ವೃದ್ಧೆಯೊಬ್ಬರು ತಮ್ಮ ಹೆಸರಿನ ಗುರುತಿನ ಚೀಟಿ ಹಿಡಿದುಕೊಂಡು ಬಂದಿದ್ದರು. ಆದರೆ ನಿಮ್ಮ ಹೆಸರು ಡಿಲಿಟ್‌ ಆಗಿದೆ ಎಂದು ಬಿಎಲ್‌ಒ ಅವರನ್ನು ವಾಪಸ್‌ ಕಳುಹಿಸಿದ್ದರು.

ಆದರೆ ಆ ವೃದ್ಧೆ, "ಎಂಎಲ್‌ಎ ಎಲೆಕ್ಷನ್ಯಾಗ ಹಾಕೇನಿ. ಈಗ ಹದಿನೈದು ದಿನ ಊರಿಗೆ ಹೋಗಿದ್ದೆ ಅಂದ್ರೆ ಅದ್ಹೇಗೆ ನನ್ನ ಹೆಸರು ಇಲ್ಲದಂತಾಗುತ್ತದೆ ಹೇಳಿ ಎಂದು ಪ್ರಶ್ನಿಸಿದರು. ಜತೆಗೆ ಅಕ್ಕಪಕ್ಕದವರು ಆ ವೃದ್ಧೆಯ ನೆರವಿಗೆ ಬಂದರು. ಆಮೇಲೆ ಬಳಿಕ ಮತ್ತೊಮ್ಮೆ ಸರಿಯಾಗಿ ಹುಡುಕಿದಾಗ ಹೆಸರು ಇದ್ದಿದ್ದು ಪತ್ತೆಯಾಯಿತು. ಆಮೇಲಷ್ಟೇ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. ಈ ರೀತಿ ಅಲ್ಲಲ್ಲಿ ಇದೇ ರೀತಿ ಪ್ರಕರಣಗಳು ನಡೆಯಿತು.

ಕ್ಷೇತ್ರದ 17ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಪ್ರಾರಂಭದಲ್ಲಿ ವಿವಿ ಪ್ಯಾಟ್‌ ಕೈಕೊಟ್ಟಿದ್ದವು. ತಕ್ಷಣವೇ ಅಧಿಕಾರಿ ವರ್ಗ ಅವುಗಳನ್ನು ಬದಲಿಸಿತು. ಹೀಗಾಗಿ ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆಯಾಗಲಿಲ್ಲ.

ಮನೆಗೆ ಫಾರಂ ಕಳುಹಿಸಲೇ ಇಲ್ಲ:

ಚುನಾವಣಾ ಆಯೋಗ 85 ವರ್ಷದ ದಾಟಿದ ವೃದ್ಧರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿತ್ತು. ಇದಕ್ಕಾಗಿ ಕೆಲವೊಂದು ಕಡೆಗಳಲ್ಲಿ ಬಿಎಲ್‌ಒ ಸೇರಿದಂತೆ ಇತರೆ ಅಧಿಕಾರಿ ವರ್ಗ ತೆರಳಿ ಫಾರಂ ತುಂಬಿ ಅವರಿಗೆ ವಾರದ ಮುಂಚೆಯೇ ಮನೆಯಿಂದಲೇ ಮತದಾನ ನಡೆಸಲಾಗಿತ್ತು. ಆದರೆ ಬಹುತೇಕರಿಗೆ ಈ ಅರ್ಜಿ ಕೂಡ ಮುಟ್ಟಿರಲಿಲ್ಲ. ಮನೆಗೆ ಹೋಗಿ ಮತದಾನವನ್ನೂ ಮಾಡಿಸಿರಲಿಲ್ಲ. ಹೀಗಾಗಿ ಕುಸುಗಲ್‌ ಗ್ರಾಮದಲ್ಲಿ 94 ಹಾಗೂ 88 ವರ್ಷದ ವೃದ್ಧೆಯರಿಬ್ಬರು ಆಟೋದಲ್ಲಿ ಬಂದು ಮತದಾನ ಮಾಡಿದರು. ಕೆಲವರು ಮನೆಯಿಂದ ಮತ ಹಾಕಲು ಒಪ್ಪದೇ ಕುಟುಂಬಸ್ಥರ ನೆರವಿನೊಂದಿಗೆ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು. ಹುಬ್ಬಳ್ಳಿ ಚೆನ್ನಪೇಟ್‌ನಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಅಂಗವಿಕಲೆಯೊಬ್ಬರು ಕುಟುಂಬಸ್ಥರು ಕರೆದುಕೊಂಡು ಬಂದು ಮತದಾನ ಮಾಡಿದರು.

ನೆರಳಿನ ವ್ಯವಸ್ಥೆ:

ಬಿಸಿಲಿನ ತಾಪ ಹೆಚ್ಚಾಗಿದ್ದರೂ ಮತದಾನಕ್ಕೆ ಜನತೆ ಈ ಸಲ ಉತ್ಸಾಹ ತೋರಿದ್ದು ವಿಶೇಷ. ಅದಕ್ಕೆ ತಕ್ಕಂತೆ ಚುನಾವಣಾ ಆಯೋಗ ಕೂಡ ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ಪೆಂಡಾಲ್‌ ಹಾಕಿ ನೆರಳಿನ ವ್ಯವಸ್ಥೆ ಮಾಡಿತ್ತು. ಕುಡಿವ ನೀರಿನ ವ್ಯವಸ್ಥೆ, ಅಂಗವಿಕಲರ ಬರಲು ಅನುಕೂಲವಾಗುವಂತೆ ವ್ಹೀಲ್‌ ಚೇರ್‌ ವ್ಯವಸ್ಥೆ ಮತದಾರರಿಗೆ ಅನುಕೂಲವಾಗಿತ್ತು.