ಹೆದ್ದಾರೀಲಿ ಕಸಾಯಿಖಾನೆಯ ತಾಜ್ಯ ಬಿಸಾಡುತ್ತಿರುವ ಮಾಲೀಕರು

| Published : May 03 2024, 01:10 AM IST

ಹೆದ್ದಾರೀಲಿ ಕಸಾಯಿಖಾನೆಯ ತಾಜ್ಯ ಬಿಸಾಡುತ್ತಿರುವ ಮಾಲೀಕರು
Share this Article
  • FB
  • TW
  • Linkdin
  • Email

ಸಾರಾಂಶ

ಈ ಕಸಾಯಿ ಖಾನೆಗಳಲ್ಲಿ ಸಂಗ್ರಹವಾಗುವ ಮೂಳೆ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಮಾಂಸ ಮಾರಾಟಗಾರರು ಗೋಣಿ ಚೀಲಕ್ಕೆ ತುಂಬಿ ಪಟ್ಟಣದ ಹೊರವಲಯ ದೇವಲಾಪುರ ಹ್ಯಾಂಡ್‌ಪೋಸ್ಟ್ ಬಳಿಯ ಹೇಮಾವತಿ ನಾಲೆ ಮತ್ತು ಬೆಂಗಳೂರು ಜಲಸೂರು ರಾಜ್ಯ ಹೆದ್ದಾರಿ ಬದಿಯಲ್ಲಿಯೇ ಬಿಸಾಡಿ ಹೋಗುತ್ತಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದ ಕಸಾಯಿಖಾನೆ ಮತ್ತು ಕೋಳಿ ಅಂಗಡಿಗಳಲ್ಲಿನ ತ್ಯಾಜ್ಯ ವಸ್ತುಗಳನ್ನು ಬೆಂಗಳೂರು - ಜಲಸೂರು ರಾಜ್ಯ ಹೆದ್ದಾರಿ-85ರ ಬದಿಯಲ್ಲಿ ಬಿಸಾಡುತ್ತಿರುವ ಪರಿಣಾಮ ದುರ್ವಾಸನೆ ಬೀರಿ ಈ ಮಾರ್ಗದಲ್ಲಿ ಸಂಚರಿಸುವ ಜನರು ಮತ್ತು ವಾಹನ ಸವಾರರು ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದ ಮಂಡ್ಯ ರಸ್ತೆ ಹಾಗೂ ಮೈಸೂರು ರಸ್ತೆಯ ಒಳಭಾಗದಲ್ಲಿ ಅನಧಿಕೃತವಾದ ಹತ್ತಾರು ಕಸಾಯಿಖಾನೆಗಳಿದ್ದು, ಇಲ್ಲಿ ಪ್ರತಿನಿತ್ಯ ಹಸು ಮತ್ತು ಸೀಮೆ ಹಸುವಿನ ಕರುಗಳನ್ನು ಕತ್ತರಿಸಿ ಮಾಂಸ ಮಾರಾಟ ಮಾಡಲಾಗುತ್ತದೆ.

ಈ ಕಸಾಯಿ ಖಾನೆಗಳಲ್ಲಿ ಸಂಗ್ರಹವಾಗುವ ಮೂಳೆ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಮಾಂಸ ಮಾರಾಟಗಾರರು ಗೋಣಿ ಚೀಲಕ್ಕೆ ತುಂಬಿ ಪಟ್ಟಣದ ಹೊರವಲಯ ದೇವಲಾಪುರ ಹ್ಯಾಂಡ್‌ಪೋಸ್ಟ್ ಬಳಿಯ ಹೇಮಾವತಿ ನಾಲೆ ಮತ್ತು ಬೆಂಗಳೂರು ಜಲಸೂರು ರಾಜ್ಯ ಹೆದ್ದಾರಿ ಬದಿಯಲ್ಲಿಯೇ ಬಿಸಾಡಿ ಹೋಗುತ್ತಾರೆ.

ಹೆದ್ದಾರಿ ಎರಡೂ ಬದಿಯಲ್ಲಿರುವ ದೊಡ್ಡದಾದ ಹೇಮಾವತಿ ಕಾಲುವೆ ದಡದಲ್ಲಿ ಕತ್ತರಿಸಿದ ಜಾನುವಾರುಗಳ ಹಾಗೂ ಕೋಳಿ ಅಂಗಡಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ವಸ್ತುಗಳನ್ನು ಸುರಿಯುತ್ತಿರುವುದರಿಂದ ಇಡೀ ಪ್ರದೇಶ ದುರ್ವಾಸನೆಯಿಂದ ಕೂಡಿದೆ. ಈ ಮಾರ್ಗದಲ್ಲಿ ಸಂಚರಿಸುವ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತ್ಯಾಜ್ಯ ವಸ್ತುಗಳನ್ನು ಸುರಿಯುತ್ತಿರುವ ಹೇಮಾವತಿ ಕಾಲುವೆ ಸಮೀಪದಲ್ಲಿಯೇ ಬ್ರಿಲಿಯಂಟ್ ವ್ಯಾಲಿ ಖಾಸಗಿ ಶಾಲೆಯಿದೆ. ಕಾಲುವೆ ಮತ್ತೊಂದು ಭಾಗದ 200 ಮೀ ದೂರದಲ್ಲಿರುವ ದೇವಲಾಪುರ ಹ್ಯಾಂಡ್‌ಪೋಸ್ಟ್‌ನಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್, ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜು ಹಾಗೂ 220 ಕೆವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರವಿದೆ. ಸಾವಿರಾರು ವಿದ್ಯಾರ್ಥಿಗಳು, ನೂರಾರು ಮಂದಿ ಶಿಕ್ಷಕರು ಮತ್ತು ಪ್ರಾಧ್ಯಾಪಕರು ಈ ದುರ್ನಾತದ ನಡುವೆಯೇ ದಿನಕಳೆಯುವಂತಾಗಿದೆ.

ಕಾಲೇಜಿನವರೆಗೂ ಕೊಳೆತ ದುರ್ವಾಸನೆ ಬರುವುದರಿಂದ ಕೊಠಡಿಗಳಲ್ಲಿ ಕುಳಿತು ಪಾಠ ಕೇಳಲು ನಮಗೆ ಆಗುತ್ತಿಲ್ಲ. ಇದಕ್ಕೆ ಕಡಿವಾಣ ಹಾಕುವವರೇ ಇಲ್ಲವೇ ಎಂದು ಕಾಲೇಜು ವಿದ್ಯಾರ್ಥಿಗಳು ಆಕ್ರೋಶದೊಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ನಾಗಮಂಗಲ- ಮಂಡ್ಯ ಮುಖ್ಯ ರಸ್ತೆಯಲ್ಲಿರುವ ಈ ಮಾರ್ಗದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರತಿನಿತ್ಯ ಪ್ರಯಾಣಿಸುತ್ತಾರೆ. ಆದರೆ, ಎಸಿ ವಾಹನಗಳಲ್ಲಿ ಸಂಚರಿಸುವ ಇವರಿಗೆ ಈ ದುರ್ವಾಸನೆ ಬೀರುವುದಿಲ್ಲ. ಸತ್ತ ಜಾನುವಾರುಗಳ ಕಳೆಬರ ಹಾಗೂ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದರೂ ಕೂಡ ಸ್ಥಳೀಯ ಪುರಸಭೆ ಅಧಿಕಾರಿಗಳಾಗಲಿ, ಸರಹದ್ದಿನ ಗ್ರಾಮ ಪಂಚಾಯ್ತಿ ಅಧಿಕಾರಿಗಳಾಗಲಿ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಕೂಡಲೇ ಗಮನಹರಿಸಿ ಕಸಾಯಿಖಾನೆ ಮತ್ತು ಕೋಳಿ ಅಂಗಡಿಗಳಲ್ಲಿನ ತ್ಯಾಜ್ಯ ವಸ್ತುಗಳನ್ನು ಈ ಪ್ರದೇಶದಲ್ಲಿ ಸುರಿಯುವುದನ್ನು ತಪ್ಪಿಸುವ ಜೊತೆಗೆ, ದುರ್ವಾಸನೆಯಿಂದ ಕೂಡಿರುವ ಈ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯ ಜನರು ಆಗ್ರಹಿಸಿದ್ದಾರೆ.