ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಮಲ್ಲಿ ಭದ್ರ, ಭಾರೀ ಬಂದೋಬಸ್ತು

| Published : May 09 2024, 01:02 AM IST

ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಮಲ್ಲಿ ಭದ್ರ, ಭಾರೀ ಬಂದೋಬಸ್ತು
Share this Article
  • FB
  • TW
  • Linkdin
  • Email

ಸಾರಾಂಶ

ಸ್ಟ್ರಾಂಗ್ ರೂಮ್‌ನಲ್ಲಿ ಎಲ್ಲ ರಾಜಕೀಯ ಪಕ್ಷಗಳ ಪ್ರಮುಖರು, ಹಿರಿಯ ಅಧಿಕಾರಿಗಳು ಮತ್ತು ಮಾಧ್ಯಮ ಮಂದಿಯ ಸಮ್ಮುಖದಲ್ಲಿ ಮತ ಯಂತ್ರಗಳನ್ನು ಸೀಲ್ ಮಾಡಿ ಎಲ್ಲವನ್ನೂ ಕೊಠಡಿಯಲ್ಲಿ ಇಡಲಾಯಿತು. ಪ್ರತಿ ವಿಧಾನಸಭಾ ಕ್ಷೇತ್ರಗಳ ಮತ ಯಂತ್ರಗಳನ್ನು ಪ್ರತ್ಯೇಕ ಭದ್ರತಾ ಕೊಠಡಿಗಳಲ್ಲಿ ಇರಿಸಲಾಗಿದೆ. ಆ ಬಳಿಕ ಕೊಠಡಿಗಳಿಗೆ ಡಬ್ಬಲ್ ಲಾಕ್ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಚುನಾವಣಾ ಕದನ ಮುಗಿಯಿತು. ತಿಂಗಳುಗಳ ಕಾಲ ಪರಸ್ಪರ ಚುನಾವಣಾ ಕಣದಲ್ಲಿ ಕಾದಾಡಿದ ಅಭ್ಯರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಜೂ.4ರವರೆಗೆ ಕಾಯಬೇಕಾಗಿದ್ದು, ಮತದಾರರು ಬರೆದ ಹಣೆಬರಹ ಮತದಾನ ಯಂತ್ರದಲ್ಲಿ ಭದ್ರವಾಗಿ ಕೂತಿದೆ. ಇಲ್ಲಿನ ಸಹ್ಯಾದ್ರಿ ಕಾಲೇಜಿನ ಭದ್ರತಾ ಕೊಠಡಿಗಳಲ್ಲಿ ಮತಯಂತ್ರ ಮತ್ತು ವಿವಿ ಪ್ಯಾಟ್‌ಗಳನ್ನು ಇಡಲಾಗಿದ್ದು, ಭಾರೀ ಭದ್ರತೆ ನಿಯೋಜಿಸಲಾಗಿದೆ.

ಮಂಗಳವಾರ ಮತದಾನ ಮುಗಿದ ಬಳಿಕ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಒಟ್ಟು 2039 ಬೂತ್‌ಗಳಿಂದ ಮತ ಯಂತ್ರಗಳನ್ನು ಅಲ್ಲಿನ ಮತ ಕೇಂದ್ರದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭದ್ರತೆಯೊಂದಿಗೆ ತಾಲೂಕು ಮಸ್ಟರ್ ಕೇಂದ್ರಕ್ಕೆ ತಂದು ಅಲ್ಲಿಂದ ನೇರವಾಗಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಆವರಣಕ್ಕೆ ತರಲಾಯಿತು.ಪ್ರತಿ ವಿಧಾನಸಭೆ ಕ್ಷೇತ್ರದ ಮತಯಂತ್ರಕ್ಕೆ ಪ್ರತ್ಯೇಕ ಕೊಠಡಿ:

ಅಲ್ಲಿ ಮೊದಲೇ ಸಿದ್ದಪಡಿಸಿದ್ದ ಸ್ಟ್ರಾಂಗ್ ರೂಮ್‌ನಲ್ಲಿ ಎಲ್ಲ ರಾಜಕೀಯ ಪಕ್ಷಗಳ ಪ್ರಮುಖರು, ಹಿರಿಯ ಅಧಿಕಾರಿಗಳು ಮತ್ತು ಮಾಧ್ಯಮ ಮಂದಿಯ ಸಮ್ಮುಖದಲ್ಲಿ ಮತ ಯಂತ್ರಗಳನ್ನು ಸೀಲ್ ಮಾಡಿ ಎಲ್ಲವನ್ನೂ ಕೊಠಡಿಯಲ್ಲಿ ಇಡಲಾಯಿತು. ಪ್ರತಿ ವಿಧಾನಸಭಾ ಕ್ಷೇತ್ರಗಳ ಮತ ಯಂತ್ರಗಳನ್ನು ಪ್ರತ್ಯೇಕ ಭದ್ರತಾ ಕೊಠಡಿಗಳಲ್ಲಿ ಇರಿಸಲಾಗಿದೆ. ಆ ಬಳಿಕ ಕೊಠಡಿಗಳಿಗೆ ಡಬ್ಬಲ್ ಲಾಕ್ ಮಾಡಲಾಯಿತು. ಎರಡು ಕೀಗಳಿದ್ದು, ಒಂದು ಕೀ ಆರ್‌ಒ ಮತ್ತು ಇನ್ನೊಂದು ಆಯಾ ಕ್ಷೇತ್ರಗಳ ಎಆರ್‌ಒಗಳಲ್ಲಿ ಇರುತ್ತದೆ. ಮತ ಎಣಿಕೆ ಆರಂಭವಾಗುವ ಹೊತ್ತಿಗೆ ಎರಡೂ ಕೀ ಬಳಸಿ ತೆರೆಯಲಾಗುವುದು. ಲಾಕ್ ಮಾಡಿದ ಬಳಿಕ ಮರದ ಹಲಗೆಯಿಂದ ಬೀಗ ಹಾಕಿದ ಕೊಠಡಿಯನ್ನು ಸೀಲ್ ಮಾಡಲಾಯಿತು.

ಭದ್ರತಾ ಕೊಠಡಿಯ ಹೊರಗೆ ಮತ್ತು ಕಾಲೇಜು ಆವರಣದಲ್ಲಿ ದಿನದ 24 ಗಂಟೆಗಳ ಕಾಲ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಆವರಣದಲ್ಲಿ ಎಲ್ಲ ಭದ್ರತಾ ಕೊಠಡಿಗಳು ಕಾಣುವಂತೆ ಮೂರ್ನಾಲ್ಕು ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಬೆಸ್ಕಾಂ ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಕೂಡ ಪೊಲೀಸ್ ಕಾವಲಿನ ಜೊತೆಗೆ ಇಲ್ಲಿಯೇ ಇರಲಿದ್ದಾರೆ.