ಶಾಂತಿಯುತ ಮತದಾನದಿಂದ ನಗರದ ಪೊಲೀಸರು ನಿರಾಳ

| Published : Apr 27 2024, 02:04 AM IST / Updated: Apr 27 2024, 08:30 AM IST

ಶಾಂತಿಯುತ ಮತದಾನದಿಂದ ನಗರದ ಪೊಲೀಸರು ನಿರಾಳ
Share this Article
  • FB
  • TW
  • Linkdin
  • Email

ಸಾರಾಂಶ

20 ದಿನದಿಂದ ನಿರಂತರವಾಗಿ ಚುನಾವಣಾ ಕರ್ತವ್ಯದಲ್ಲಿ ಇದ್ದ ಬೆಂಗಳೂರು ಪೊಲೀಸರು ಶಾಂತಿಯುತ ಮತದಾನದಿಂದಾಗಿ ನಿರಾಳರಾಗಿದ್ದಾರೆ.

 ಬೆಂಗಳೂರು :  ಲೋಕಸಭಾ ಸಮರಕ್ಕೆ ಶಾಂತಿಯುತ ತೆರೆ ಬೀಳುವ ಮೂಲಕ ರಾಜಧಾನಿ ಪೊಲೀಸರು ಶುಕ್ರವಾರ ನಿರಾಳರಾಗಿದ್ದಾರೆ.

ಮೊದಲ ಹಂತದಲ್ಲಿ ನಗರ ಪೊಲೀಸ್ ವ್ಯಾಪ್ತಿಯ ಐದು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು. ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಘಟನೆಗಳು ಹೊರತು ಬಹುತೇಕ ಮತದಾನವು ಶಾಂತಯುತವಾಗಿ ಮುಕ್ತಾಯವಾಯಿತು. ಇನ್ನು ಕಳೆದ 20 ದಿನಗಳಿಂದ ಲೋಕಸಭಾ ಚುನಾವಣಾ ಕೆಲಸದಲ್ಲಿ ವ್ಯಸ್ತರಾಗಿದ್ದ ಪೊಲೀಸರು ಕೂಡಾ ನಿರುಮ್ಮಳರಾಗಿದ್ದಾರೆ.

ಬೆಂಗಳೂರು ಪೊಲೀಸ್ ಸರಹದ್ದಿನಲ್ಲಿ ಚಿಕ್ಕಬಳ್ಳಾಪುರ, ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ ಹಾಗೂ ಗ್ರಾಮಾಂತರ ಕ್ಷೇತ್ರಗಳು ಬರುತ್ತವೆ. ಆದರೆ ಕೇಂದ್ರ, ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳು ಸಂಪೂರ್ಣವಾಗಿ ನಗರ ವ್ಯಾಪ್ತಿಯಲ್ಲೇ ಇದ್ದರೆ, ಇನ್ನುಳಿದ ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳ ಅಲ್ಪ ಭಾಗ ಮಾತ್ರ ನಗರಕ್ಕೆ ಸೇರುತ್ತದೆ. ಈ ಕ್ಷೇತ್ರಗಳ ಸೂಕ್ಷ್ಮ ಪ್ರದೇಶಗಳು ಎಂದು ಚುನಾವಣಾ ಆಯೋಗವು ಗುರುತಿಸಿತ್ತು. ಹೀಗಾಗಿ ಚುನಾವಣೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು.

ಅಲ್ಲದೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್‌ ಅವರೇ ಖುದ್ದು ಭದ್ರತೆ ಮೇಲುಸ್ತುವಾರಿ ಹೊತ್ತಿದ್ದರು. ನಗರದ ಕೆಲ ಮತಗಟ್ಟೆಗಳಿಗೆ ಸಹ ಆಯುಕ್ತರು ಭೇಟಿ ನೀಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಇನ್ನು ಹೆಚ್ಚುವರಿ ಆಯುಕ್ತರಾದ ಸತೀಶ್ ಕುಮಾರ್‌, ರಮಣ ಗುಪ್ತ, ಚಂದ್ರಗುಪ್ತ ಹಾಗೂ ಜಂಟಿ ಆಯುಕ್ತ ಎಂ.ಎನ್‌.ಅನುಚೇತ್ ಸಹ ಭದ್ರತೆಯಲ್ಲಿ ಪಾಲ್ಗೊಂಡಿದ್ದರು. ಹಾಗೆಯೇ ನಗರ ಮತ್ತು ರಾಜ್ಯ ಸಶಸ್ತ್ರ ಮೀಸಲು ಪಡೆಗಳು ಮತ್ತು ಗೃಹ ರಕ್ಷಕ ದಳ ಸಿಬ್ಬಂದಿ ಕೂಡಾ ಬಂದೋಬಸ್ತ್‌ನಲ್ಲಿ ಭಾಗವಹಿಸಿದ್ದರು.